

ಮಂಗಳೂರು: ಬಳ್ಳಾರಿ ಜಿಲ್ಲೆ ಸಂಡೂರಿನ ದೇವದಾರಿನಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ(ಕೆಐಒಸಿಎಲ್)ಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರಕಿದೆ. ವರ್ಷದೊಳಗೆ ಗಣಿಗಾರಿಕೆ ಆರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಸುಬ್ಬರಾವ್ ತಿಳಿಸಿದ್ದಾರೆ.
ಐದು ವರ್ಷಗಳ ಅವಧಿಯ 1500 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಪ್ರಥಮ ಹಂತದಲ್ಲಿ 401.5761 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅನುಮತಿ ನೀಡಿದೆ. ಗಣಿಗಾರಿಕಾ ಪೂರ್ವ ವೆಚ್ಚವಾಗಿ 300 ಕೋಟಿ ರೂ. ಗೆ ಅನುಮೋದನೆ ಸಿಕ್ಕಿದ್ದು, ಐದು ವರ್ಷದಲ್ಲಿ ಸುಮಾರು ಒಂದು ಸಾವಿರ ಮಂದಿ ಉದ್ಯೋಗ ಪಡೆಯಲಿದ್ದಾರೆ ಎಂದವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
15 ವರ್ಷಗಳ ಬಳಿಕ ಗಣಿಗಾರಿಕೆ: ದೇವದಾರಿನಲ್ಲಿ ಗಣಿಗಾರಿಕೆ ಆರಂಭವಾದರೆ ಸುಮಾರು 15 ವರ್ಷಗಳ ಬಳಿಕ ಕೆಐಒಸಿಎಲ್ ಗಣಿಗಾರಿಕೆ ಕರ್ನಾಟಕದಲ್ಲಿ ನಡೆಸಿದಂತಾಗುತ್ತದೆ. 2006 ಜ.1ರಂದು ಸುಪ್ರೀಂ ಕೋರ್ಟ್ ಆದೇಶದಂತೆ ಕೆಐಒಸಿಎಲ್ ಕುದುರೆಮುಖದಲ್ಲಿ ಗಣಿಗಾರಿಕೆ ನಿಲ್ಲಿಸಿತ್ತು. ನಿರಂತರ ಕೋರಿಕೆಗಳ ಬಳಿಕ ಈಗ ಸರ್ಕಾರ ಸಂಸ್ಥೆಗೆ ದೇವದಾರಿನಲ್ಲಿ ಅನುಮತಿ ನೀಡಿದೆ ಎಂದವರು ತಿಳಿಸಿದರು. ಕೆಐಒಸಿಎಲ್ ನಿರ್ದೇಶಕ (ಉತ್ಪಾದನೆ) ಭಾಸ್ಕರ್ ರೆಡ್ಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಮುರುಗೇಶ್ ಉಪಸ್ಥಿತರಿದ್ದರು.
301.17 ಕೋಟಿ ರೂ. ಲಾಭ: ಸತತ ಕಾಡಿದ ಕರೊನ ಸಂಕಷ್ಟದ ನಡುವೆಯೂ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಕಳೆದ ಹಣಕಾಸು ವರ್ಷದಲ್ಲಿ ಸಂಸ್ಥೆ 2477.83 ಕೋಟಿ ರೂ.ಗಳ ಆದಾಯದೊಂದಿಗೆ 301.17 ಕೋಟಿ ರೂ. (ತೆರಿಗೆ ಬಳಿಕ) ಲಾಭ ಗಳಿಸಿದೆ ಎಂದರು. ಸಂಸ್ಥೆಯ ಸಿಬ್ಬಂದಿ, ಹೊರ ಗುತ್ತಿಗೆ ಸಿಬ್ಬಂದಿ, ಕಾರ್ಮಿಕರು ಹಾಗೂ ಅವರ ಕುಟುಂಬದವರಿಗೆ ಸೇರಿ ಶೇ. 99ರಷ್ಟು ಮಂದಿಗೆ ಕೋವಿಡ್ ತಡೆ ಲಸಿಕೆ ನೀಡಲಾಗಿದೆ. ಸಿಆರ್‌ಎಸ್ ನಿಧಿಯಿಂದ ವೆನ್‌ಲಾಕ್ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆಯಾಗಿ ನೀಡಿದೆ ಎಂದು ಎಂ.ವಿ.ಸುಬ್ಬರಾವ್ ತಿಳಿಸಿದರು.