ತಾಲೂಕಿನಾದ್ಯಂತ ವಿಸ್ತರಿಸಿದ ಭೂಗಳ್ಳತನ

14GDG02 (1)
Published on

ಶಿವಾನಂದ ಹಿರೇಮಠ, ಗದಗ
ಕೆಂಪು ಗರಸು ಮಣ್ಣಿಗಾಗಿ ತಾಲೂಕಿನ ಕಳಸಾಪುರ, ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಗುಡ್ಡವನ್ನು ಅಗೆಯುತ್ತಿದ್ದ ಭೂ ಗಳ್ಳತನ ಈಗ ತಾಲೂಕಿನಾದ್ಯಂತ ವಿಸ್ತರಿಸಿದೆ. ತಾಲೂಕಿನ ನಭಾಪೂರು, ಬಿಂಕದಕಟ್ಟಿ, ಕುರ್ತಕೋಟಿ, ಬೆಳದಡಿ, ಸೊರಟೂರು, ಲಕ್ಕುಂಡಿ, ಬೆಂತೂರು, ಹುಲಕೋಟಿ ಸೇರಿದಂತೆ ವಿವಿಧ ಗ್ರಾಮದಲ್ಲಿ ಹವ್ಯಾತವಾಗಿ ಈ ಅಕ್ರಮ ನಡೆಯುತ್ತಿದೆ. ಪ್ರತಿ ತಿಂಗಳಿಗೆ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆಯುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೂ ಅಂಕೆ ಸಿಗದಷ್ಟು ಅಕ್ರಮದ ಬುಜಂಗ ಬಾಹುಗಳು ವಿಸ್ತರಿಸಿವೆ.
ಕಳೆದೆರೆಡು ತಿಂಗಳಿಂದ ಇಲಾಖಾ ಅಧಿಕಾರಿಗಳು ಚುನಾವಣಾ ಕಾರ್ಯಗಳಲ್ಲಿ ನಿರತರಾಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಭೂಗಳ್ಳರು ಅಧಿಕ ಲಾಭ ಗಳಿಸುವ ದೃಷ್ಟಿಯಿಂದ ಮೊದಲಿಗಿಂತಲೂ ಅಧಿಕವಾಗಿಯೇ ಮಣ್ಣ ಸಾಗಾಟ ಮಾಡಿದ್ದಾರೆ. ಆರ್​ಟಿಓ ಕಚೇರಿ ಮುಂಭಾಗದ ಗುಡ್ಡವನ್ನು ಸಂರ್ಪೂಣ ಬರಿದು ಮಾಡಲಾಗಿದ್ದು, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಭೂಮಿ ನಮ್ಮದಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.

Oplus_131072
Oplus_131072

ದಾಳಿ, ಅನುಮಾನ:
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ತಿಚೆಗೆ ಹಲವಡೆ ದಾಳಿ ನಡೆಸಿ ಪ್ರಕರಣ ದಾಖಲಿಸಿದೆ. ಕಳಸಾಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂ 104/ಬಿ, ನಭಾಪುರ ಗ್ರಾಮ ವ್ಯಾಪ್ತಿಯ ಸರ್ವೇ ನಂ 43/3, 88/2 ಬೆಳದಡಿ ಗ್ರಾಮ ವ್ಯಾಪ್ತಿಯ ಸರ್ವೇ ನಂ 20, 21 ಸೇರಿದಂತೆ ಹಲವಡೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಮತ್ತು ಅನುಮತಿಸಿದ ಭೂಮಿಯಲ್ಲಿ ನಡೆದ ಮಣ್ಣು ಗಣಿಗಾರಿಕೆ ನಡೆದ ಬಗ್ಗೆ ವರದಿ ಸಿದ್ಧಪಡಿಸಿರುವ ಅಧಿಕಾರಿಗಳು ಭೂ ಮಾಲೀಕರಿಗೆ ರಾಯಲ್ಟಿ ಕಟ್ಟುವಂತೆ ಸೂಚಿಸಲಾಗಿದೆ. ಆದರೆ, ಇಲಾಖಾ ಅಧಿಕಾರಿಗಳು ಸೃಷ್ಟಿಸಿರುವ ವರದಿಗಳಲ್ಲಿ ಸಾಕಷ್ಟು ಅನುಮಾನ ಮೂಡುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಇಲಾಖೆಯಿಂದ ಅನುಮತಿಸಿದ ಭೂ ವ್ಯಾಪ್ತಿಗಿಂತ ಅಂದಾಜು 200 ಎಕರೆಗೂ ಹೆಚ್ಚು ಗುಡ್ಡ ಕೊರೆದಿರುವುದು ಗಣಿಗಾರಿಕೆಯಿಂದ ಕಂಡು ಬರುತ್ತಿದೆ. ಹೀಗಾಗಿ ವರದಿ ಸಿದ್ದಪಡಿಸುವ ಪ್ರಕ್ರಿಯೆಯಲ್ಲಿ ಹಲವು ಅನುಮಾನಗಳು ಮೂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿವೆ. ಹಾಗೂ ದಾಳಿ ನಡೆಸಿ ತಿಂಗಳು ಕಳೆದರೂ ಇಲಾಖಾ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದು, ಚರ್ಚೆಗೆ ಪುಷ್ಠಿಕರಿಸುವಂತಿದೆ. ಇದರಿಂದ ಹತ್ತಾರು ಕೋಟಿ ಮೌಲ್ಯದ ಕಂದಾಯವು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು, ಅಧಿಕಾರಿಗಳು ಕಂಡು ಕಾಣದಂತೆ ವತಿರ್ಸುತ್ತಿದ್ದಾರೆ.

ರಾತ್ರಿ ಕೆಲಸ:
ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 7 ಗಂಟೆ ವರೆಗೂ ಭೂ ಗಳ್ಳರು ಅಕ್ರಮ ಮಣ್ಣು ಗಣಿಗಾರಿಕೆ ನಡೆಸುತ್ತಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ನಡೆಸುತ್ತಿರುವುದರಿಂದ ಅಕ್ರಮ ತಡೆಯಲು ಅಧಿಕಾರಿಗಳು ಹಿಮದೇಟು ಹಾಕುತ್ತಿದ್ದು, ರಾತ್ರಿ ಸ್ಥಳಕ್ಕೆ ಧಾವಿಸಿ ಅಕ್ರಮ ಮುಟ್ಟುಗೋಲು ಹಾಕಲು ಭಯ ಬೀಳುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಅಧಿಕಾರಿಗಳೇ ಮಾರ್ಗದರ್ಶನದಲ್ಲೇ ರಾತ್ರಿ ಸಮಯದಲ್ಲಿ ಅಕ್ರಮ ನಡೆಸಲಾಗುತ್ತಿದೆ ಎಂದು ಅಕ್ರಮ ಗಣಿಗಾರಿಕೆ ನಡೆಸುವ ಮೂಲಗಳಿಂದ ವಿಜಯವಾಣಿಗೆ ತಿಳಿದುಬಂದಿದೆ. ಇದರಲ್ಲಿ ಯಾವುದು ಸತ್ಯ? ಯಾವುದು ಮಿತ್ಯ ಎಂಬುದು ಅಧಿಕಾರಿಗಳೇ ಸ್ಪಷ್ಟಿಕರಣ ನಿಡಬೇಕಿದೆ.

ಬಳ್ಳಾರಿಗೆ ಸ್ಯಾಂಪಲ್​:
ನಾಗಾವಿ ಮತ್ತು ಕಳಸಾಪೂರ ಗ್ರಾಮಕ್ಕೆ ಹೊಂದಿಕೊಂಡಿರುವ ಕಪ್ಪತಗುಡ್ಡಗಳಲ್ಲಿ ಕೆಂಪು ಗರಸು ಮಣ್ಣಿನಲ್ಲಿ ಅಧಿಕ ಕಬ್ಬಣಾಂಶ ಇರುವ ೈನ್ಸ್​ ಸಿಗುತ್ತಿರುವ ಬಗ್ಗೆ ವಿಜಯವಾಣಿ ವರದಿ ಬಿತ್ತರಿಸಿತ್ತು. ವರದಿಯಿಂದ ಎಚ್ಚೇತ್ತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಲ್ಲಿನ ಮಣ್ಣನ್ನು ಸಂಶೋಧಿಸಲು (ಕೆಮಿಕಲ್​ ಅನಾಲಿಸಸ್​) ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕಳಿಸಲಾಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಬಳ್ಳಾರಿ ಮೈನಿಂಗ್​ ಮಣ್ಣಿನಲ್ಲಿ ಶೇ.48 ರಷ್ಟು ಕಬ್ಬಿಣಾಂಶ ಇದ್ದರೆ ಗದಗ ನಲ್ಲಿ ಸಿಗುವ ಗರಸು ಮಣ್ಣಿನಲ್ಲಿ ಶೇ.25 ರಿಂದ 28 ಗ್ರೇಡ್​ ಕಬ್ಬಿಣಾಂಶ ಸಿಗುತ್ತಿದೆ. ಇದರಿಮದ ಸರ್ಕಾರದ ಬೊಮ್ಮಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.

ಕೋಟ್​:
ನಾಗಾವಿ ಮತ್ತು ಕಳಸಾಪು ರ ಗ್ರಾಮದ ಮಣ್ಣಿನಲ್ಲಿ ಕಬ್ಬಿನಾಂಶ ಸಿಗುವ ಬಗ್ಗೆ ಬಳ್ಳಾರಿಗೆ ಸ್ಯಾಂಪಲ್​ ಮಣ್ಣು ಕಳಿಸಾಗಿದೆ. ವರದಿ ಬಂದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗುವುದು.
ಸಾವಿತ್ರಿ. ಕಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net