

ಖಾನಾಪುರ: ತಾಲೂಕಿನ ಕಣಕುಂಬಿ ಅರಣ್ಯ ವಲಯದ ಅಮಟೆ ಗ್ರಾಮದ ಬಳಿ ಖಾಸಗಿ ಜಮೀನಿನಿಂದ ಅನಧಿಕೃತವಾಗಿ ಗಣಿಗಾರಿಕೆ ಕೈಗೊಂಡು ಬಾಕ್ಸೈಟ್ ಅದಿರು ಸಾಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಖಾನಾಪುರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ಒಂದು ಜೆಸಿಬಿ ಮತ್ತು ಟಿಪ್ಪರ್ ವಶಕ್ಕೆ ಪಡೆದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕು ಬೆಳಗುಂದಿ ನಿವಾಸಿ ಶಾಮ ಭಾಂಡಗೆ, ಕಿಣಗೆ ನಿವಾಸಿ ಆಕಾಶ ಡುಕರೆ, ವಡಗಾಂವ ನಿವಾಸಿ ಮಂಜುನಾಥ ಜಂಪಿಕಟ್ಟಿ ಮತ್ತು ತಾಲೂಕಿನ ಗಣೆಬೈಲ್ ನಿವಾಸಿ ಸಚಿನ ಗುರವ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಗಣಿಗಾರಿಕೆಯ ಮತ್ತೊಬ್ಬ ಪ್ರಮುಖ ಆರೋಪಿ ತಾಲೂಕಿನ ಗರ್ಲಗುಂಜಿ ಗ್ರಾಮದ ನಿವಾಸಿ ಕೃಷ್ಣಾ ಮೇಲಗೆ ಎಂಬಾತನ ವಿರುದ್ಧವೂ ದೂರು ದಾಖಲಾಗಿದ್ದು, ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಖಾನಾಪುರ ಠಾಣೆಯ ಪಿಎಸ್‌ಐ ಬಸನಗೌಡ ಪಾಟೀಲ ಹಾಗೂ ಸಿಬ್ಬಂದಿ ಭಾಗವಹಿಸಿದ್ದು, ಅಕ್ರಮ ಗಣಿಗಾರಿಕೆಯನ್ನು ಬಯಲಿಗೆಳೆಯುವಲ್ಲಿ ಸಫಲರಾದ ಖಾನಾಪುರ ಪೊಲೀಸರ ಕಾರ್ಯವನ್ನು ಪರಿಸರವಾದಿಗಳು ಶ್ಲಾಘಿಸಿದ್ದಾರೆ.