ಎಲ್ಲ ವಿಭಾಗಗಳಲ್ಲಿ ಮೈನಿಂಗ್ ಅದಾಲತ್

12 Dwd 4
Published on

ಧಾರವಾಡ: ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಏಕಗವಾಕ್ಷಿ ಯೋಜನೆ ಜಾರಿ ಮೂಲಕ ಉದ್ಯಮಿಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮ ವಹಿಸಲಾಗುವುದು. ಎಲ್ಲ ಕಂದಾಯ ವಿಭಾಗಗಳಲ್ಲಿ ಮೈನಿಂಗ್ ಅದಾಲತ್ ಆಯೋಜಿಸಲಾಗುವುದು. ಅದಾಲತ್ ನಡೆಯುವ ಸ್ಥಳದಲ್ಲಿಯೇ ಗಣಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಧಿಕಾರಿಗಳು ಹಾಗೂ ಸ್ಟೋನ್ ಕ್ರಶರ್ ಮತ್ತು ಕಲ್ಲು ಗಣಿಗಾರಿಕೆ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಹೊಸ ಮೈನಿಂಗ್ ನೀತಿಯಲ್ಲಿ ಲೈಸೆನ್ಸ್ ಸರಳೀಕರಣಕ್ಕೆ ಆದ್ಯತೆ ನೀಡಲಾಗಿದೆ. ಕ್ರಶರ್ ಮಾಲೀಕರ ಬೇಡಿಕೆಗಳಿಗೆ ಸ್ಪಂದಿಸಲಾಗಿದೆ. ಪಟ್ಟಾ ಭೂಮಿ ಹಾಗೂ ಸರ್ಕಾರಿ ಭೂಮಿಗಳಲ್ಲಿ ನಡೆಯುವ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ರಾಜಧನ ಮೊತ್ತವನ್ನು ಬೇರೆ ಬೇರೆಯಾಗಿ ನಿಗದಿಗೊಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 62 ಸ್ಟೋನ್ ಕ್ರಶರ್ ಮತ್ತು 136 ಕಲ್ಲು ಗಣಿಗಾರಿಕೆಗಳಿವೆ. ನಿಯಮ ಉಲ್ಲಂಘಿಸಿ ಗಣಿಗಾರಿಕೆ ಹಾಗೂ ಸ್ಟೋನ್​ಕ್ರಶರ್ ನಡೆಯುತ್ತಿದ್ದರೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಪ್ರತಿ ತಿಂಗಳು ಜಿಲ್ಲಾ ಟಾಸ್ಕ್​ಫೋರ್ಸ್ ಸಭೆ ಜರುಗಿಸಿ ನಿಯಮಾನುಸಾರ ಲೈಸೆನ್ಸ್ ನೀಡಲಾಗುತ್ತಿದೆ. ಪ್ರತಿ ಗಣಿಗಾರಿಕೆ ಹಾಗೂ ಸ್ಟೋನ್ ಕ್ರಶರ್ ಸ್ಥಳದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಅನುಮತಿಗೆ ವಿಧಿಸಿದ ನಿಯಮಗಳ ಪಾಲನೆ ಕುರಿತು ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ, ಡಿಸಿಎಫ್ ಯಶವಂತ ಕ್ಷೀರಸಾಗರ್, ಡಿಸಿಪಿ ರಾಮರಾಜನ್, ಪರಿಸರ ಅಧಿಕಾರಿ ಶೋಭಾ ಪೋಳ ಹಾಗೂ ಧಾರವಾಡ ಜಿಲ್ಲಾ ಸ್ಟೋನ್ ಕ್ರಶರ್ ಮತ್ತು ಕಲ್ಲು ಗಣಿಗಾರಿಕೆ ಸಂಘಗಳ ಅಧ್ಯಕ್ಷ ಕಲ್ಲಪ್ಪ ಹಟ್ಟಿಯವರ, ಉಪಾಧ್ಯಕ್ಷ ವಿ.ಎಸ್. ಪಾಟೀಲ, ಹಿರಿಯ ಭೂವಿಜ್ಞಾನಿ ಚಂದ್ರಶೇಖರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net