

ಶಿವಮೊಗ್ಗ: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ಡಯಟ್(ಶಿಕ್ಷಕರ ತರಬೇತಿ ಕೇಂದ್ರ)ಗಳನ್ನು ಸಂಶೋಧನಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲಿನ ಶಿಕ್ಷಕರಿಗೆ ಆಯಾ ಜಿಲ್ಲೆಯಲ್ಲಿ ಕನಿಷ್ಠ ಫಲಿತಾಂಶ ಪಡೆದ ಸರ್ಕಾರಿ ಅಥವಾ ಅನುದಾನಿತ ಶಾಲೆಗಳ ಉಸ್ತುವಾರಿ ಹೊಣೆ ನೀಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ತರಬೇತಿ ಪಡೆದುಕೊಳ್ಳುವ ಜತೆಗೆ ಇನ್ಮುಂದೆ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗುವುದು. ಡಯಟ್ ಶಿಕ್ಷಕರಿಗೆ ಎಲ್ಲ ಸೌಕರ್ಯಗಳನ್ನು ಶಿಕ್ಷಣ ಇಲಾಖೆ ನೀಡುತ್ತಿದೆ. ಅವರಿಗೂ ಮುಂದಿನ ದಿನಗಳಲ್ಲಿ ಜವಾಬ್ದಾರಿಗಳನ್ನು ನೀಡಲಾಗುತ್ತಿದೆ ಎಂದರು. ಒಂದು ವೇಳೆ ಡಯಟ್ ಶಿಕ್ಷಕರು ಕಡಿಮೆ ಫಲಿತಾಂಶ ಬಂದ ಶಾಲೆಗಳ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲವಾದರೆ ಅಥವಾ ನಿರ್ಲಕ್ಷೃ ತೋರಿದರೆ ಅಂಥವರನ್ನು ಮರಳಿ ಶಿಕ್ಷಣ ಇಲಾಖೆಗೆ ಕರೆಸಿಕೊಳ್ಳಲಾಗುವುದು ಎಚ್ಚರಿಸಿದರು. ಡಯಟ್‌ಗಳಲ್ಲಿ ಆಹ್ವಾನಿತ ಹಾಗೂ ವಿಷಯಾಧಾರಿತ ಶಿಕ್ಷಕರನ್ನು ಆಹ್ವಾನಿಸಿ ಅವರಿಂದ ವಿಶೇಷ ತರಗತಿಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ಆಯಾ ಜಿಲ್ಲೆಗಳಲ್ಲಿರುವ ಉತ್ತಮ ಶಿಕ್ಷಕರಿಂದ ತರಬೇತಿ ಕೊಡಿಸಲು ರಾಜ್ಯದ ಆಯ್ದ 8 ಸ್ಥಳಗಳಲ್ಲಿ ಸ್ಟುಡಿಯೋಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುವುದನ್ನು ನಿಯಂತ್ರಿಸಲು ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ತರಗತಿ ನಡೆಸಲು ಸೂಚಿಸಿದ್ದು, ಪ್ರಥಮ ಹಂತದ ಕಾರ್ಯ ಪ್ರಗತಿಯಲ್ಲಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚುವಲ್ಲಿ ನೆರವಾಗಲಿದೆ. - ಮಧು ಬಂಗಾರಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ