

ದೇವದುರ್ಗ: ಭಕ್ತರ ಪಾಲಿನ ಆರಾಧ್ಯದೈವ ಗಬ್ಬೂರು ಶ್ರೀಬೂದಿಬಸವೇಶ್ವರ ಸಂಸ್ಥಾನ ಕಾಮಧೇನು ಕಲ್ಪವೃಕ್ಷವಾಗಿದೆ. ಬೂದಿಯಿಂದಲೇ ಭಕ್ತರ ಭವಣೆ ನೀಗಿಸಿದ ಪವಾಡ ಪುರುಷ. ಸ್ವಾಮೀಜಿ ಇಂದಿಗೂ ಲಕ್ಷಾಂತರ ಭಕ್ತರ ಮಧ್ಯೆ ಮಿಣಿ ಇಲ್ಲದೇ ತೇರು ಎಳೆದು ಪವಾಡ ಮಾಡುತ್ತಿದ್ದಾರೆ.
ಶ್ರೀಮಠಕ್ಕೆ 450ವರ್ಷಗಳ ಇತಿಹಾಸವಿದ್ದು, 16ನೇ ಶತಮಾನದಲ್ಲಿ ಶ್ರೀಮಠದ ಸ್ವಾಮೀಜಿಗಳು ಅನೇಕ ಪವಾಡ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೆ ಶ್ರೀಮಠದ ಪೀಠಾಧಿಪತಿಗಳು ಪೂಜೆ ಸಲ್ಲಿಸಿ ಬಾ ಬಸವ ಎಂದು ಕರೆದು ಮಿಣಿ ಇಲ್ಲದೆ ತೇರು ಎಳೆಯುತ್ತಾರೆ. ಈ ಪವಾಡ ನೋಡಲು ಹೊರಜಿಲ್ಲೆ, ರಾಜ್ಯದಿಂದ ಲಕ್ಷಾಂತರ ಭಕ್ತರು ಸೇರುತ್ತಾರೆ.
450ವರ್ಷಗಳ ಹಿಂದೆ ಶ್ರೀಬೂದಿಬಸವೇಶ್ವರ ಹಾಗೂ ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶ್ರೀಮಠ ಸ್ಥಾಪಿಸಿದ್ದಾರೆ. ದೇವಸ್ಥಾನ 12ಕಂಬಗಳ ಉದ್ದ ಹಾಗೂ 8ಲಂಬ ಸಾಲು ಒಳಗೊಂಡ 108ಕಂಬಗಳಿಂದ ವಿನ್ಯಾಸ ಮಾಡಲಾಗಿದ್ದು, ಎರಡನೇ ಹಂಪಿ ಎಂದೇ ಪ್ರಸಿದ್ಧಿಯಾಗಿದೆ. 1999ರಲ್ಲಿ 8ನೇ ಪೀಠಾಧಿಪತಿಯಾಗಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರ ಸ್ವೀಕರಿಸಿದ್ದು 25ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಶ್ರೀಶಾಂತಮೂರ್ತಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಆರಂಭಿಸಿ ತ್ರಿವಿಧ ದಾಸೋಹ ಸೇವೆ ಮಾಡುತ್ತಿದ್ದಾರೆ.
ಮದುವೆ ಮಾಡಿ ನೋಡು, ಮನೆ ಕಟ್ಟಿನೋಡು ಎನ್ನುವಂತೆ 20ವರ್ಷಗಳಿಂದ ಸಾಮೂಹಿಕ ವಿವಾಹ ಆಯೋಜಿಸಿ ಶ್ರೀಮಠ ಬಡವರ ಮನೆಗಳನ್ನು ಬೆಳಗುತ್ತಿದೆ. ದುಬಾರಿ ದುನಿಯಾದಲ್ಲಿ ಮದುವೆ ಮಾಡುವುದು ಬಡವರಿಗೆ ಬಲುಕಷ್ಟ. ಶ್ರೀಮಠ 2004ರಿಂದ ಸಾಮೂಹಿಕ ವಿವಾಹ ಆಯೋಜಿಸಿ ಮೊದಲವರ್ಷ 68ಜೋಡಿ ಬಾಳಿಗೆ ಬೇಳಕಾಗಿತ್ತು. ವರ್ಷದಿಂದ ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುವವರ ಜೋಡಿಗಳ ಸಂಖ್ಯೆ ಅಧಿಕವಾಗಿದೆ. 2019ರಲ್ಲಿ 226ಜೋಡಿ, 2020ರಲ್ಲಿ 175ಜೋಡಿ, 2021ರಲ್ಲಿ 200, 2022ರಲ್ಲಿ 196, 2023ರಲ್ಲಿ 200, 2024ರಲ್ಲಿ 225 ಸೇರಿ 2,465 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ. ಈ ವರ್ಷ 175 ಜೋಡಿಗಳು ಸಪ್ತಪದಿ ತುಳಿಯಲಿದ್ದಾರೆ.
ಪವಾಡ ಪುರುಷ
17ನೇ ಶತಮಾನದಲ್ಲಿ ಮಲೆನಾಡಹಳ್ಳಿ ಸ್ವಾಮೀಜಿ ಗಬ್ಬೂರು ಗುಹೆಗೆ ಬಂದುನೆಲೆಸಿದ್ದರು. ಗ್ರಾಮದ ಛಲವಾದಿ ಚನ್ನಮ್ಮರ ಸತ್ತಿದ್ದು ಎತ್ತನ್ನು ಪವಾಡ ಶಕ್ತಿಯಿಂದ ಬೂದಿಹಚ್ಚಿ ಬದುಕಿಸಿದ್ದರು. ಅಂದಿನಿಂದ ಶ್ರೀಗಳಿಗೆ ಬೂದಿಬಸವ ಎನ್ನುವ ಹೆಸರು ಬಂದಿದೆ. 18ನೇ ಶತಮಾನದಲ್ಲಿ ಹೈದರಾಬಾದ್‌ನ ನಿಜಾಮ್ ಸಾಮ್ರಾಜ್ಯ ವಿಸ್ತರಣೆಗೆ ಗಬ್ಬೂರಿಗೆ ಬಂದಾಗ ಅಂದು ಜಾತ್ರೆ ನಡೆಯುತ್ತಿತ್ತು. ತೇರು ಎಳೆಯಲು ಮುಂದಾಗಿ ಆನೆ, ಒಂಟೆ, ಕುದುರೆ ಸೇರಿ ತನ್ನ ಸೈನಿಕರಿಂದ ತೇರು ಎಳೆದರೂ ಮುಂದೆ ಬರಲಿಲ್ಲ. ಶ್ರೀಗಳು ಮಂತ್ರ ಶಕ್ತಿಯಿಂದ ಮಿಣಿ ಇಲ್ಲದೆ ತೇರು ಎಳೆದು ನಿಜಾಮಗೆ ನೀರುಣಿಸಿದ್ದರು. ಶರಣಾದ ನಿಜಾಮ ನನ್ನ ಕುದುರೆ ಒಂದು ದಿನದಲ್ಲಿ ಎಲ್ಲೆಲ್ಲಿ ಮೇಯುವುದೋ ಅಲ್ಲಿಯವರೆಗೆ ಜಮೀನು ಬಿಟ್ಟುಕೊಡುವುದಾಗಿ ಹೇಳಿದ್ದ. ಕುದುರೆ 96ಎಕರೆಯಲ್ಲಿ ಮೇಯಿದಿದ್ದು ಅದು ಅಂದಿನಿಂದ ಶ್ರೀಮಠದ ಸ್ವತ್ತಾಗಿದೆ. ಇಂದಿಗೂ ಆ ಜಮೀನಿಗೆ ತೇರು ಜಮೀನು ಎನ್ನುತ್ತಾರೆ.
ಸಮಾಜಸೇವೆಯೇ ದೇವರೆಂದ ಶ್ರೀಗಳು ಪೀಠಾಧಿಪತಿ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಪಟ್ಟಕ್ಕೇರಿ 26ವರ್ಷ ಪೂರೈಸಿದೆ. ಸ್ವಾಮೀಜಿ ಪಟ್ಟಾಧಿಕಾರಿವಹಿಸಿಕೊಂಡ ನಂತರ ಶ್ರೀಮಠದಲ್ಲಿ ದೈವಕಳೆ ದ್ವಿಗುಣಗೊಂಡಿದೆ. 1999 ಜ.25ರಂದು ಶ್ರೀಮಠದ 8ನೇ ಪೀಠಾಧಿಪತಿಯಾಗಿ ಬಂದ ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಮಠವನ್ನು ಭಕ್ತರ ತಾಣವಾಗಿ ಮಾಡಿದ್ದಾರೆ. ದೇವಸ್ಥಾನಕ್ಕೆ ಗೋಪುರ ನಿರ್ಮಾಣ, ಮಠದ ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. 2002ರಿಂದ ಸಾಮೂಹಿಕ ವಿವಾಹ ಆಯೋಜಿಸಿ ಭಕ್ತರ ಮನೆಗಳನ್ನು ಬೆಳಗುತ್ತಿದ್ದಾರೆ. ಇದುವರೆಗೆ 2,465ಜೋಡಿಗಳ ಸಾಮೂಹಿಕ ವಿವಾಹ ಮಾಡಿಸಿ ಬಡವರಿಗೆ ಸಹಾಯಹಸ್ತ ಚಾಚಿದ್ದಾರೆ. ಅಲ್ಲದೆ ಎಸ್ಸಿ, ಎಸ್ಟಿ, ಪ್ರವರ್ಗ 1 ಸಮಾಜದ ದಂಪತಿಗಳಿಗೆ ಸರ್ಕಾರದಿಂದ 50ಸಾವಿರ ರೂ., ಸಾಮಾನ್ಯ ವರ್ಗದ ಜೋಡಿಗಳಿಗೆ 15ಸಾವಿರ ರೂ. ಸಹಾಯಧನ ಒದಗಿಸಿದ್ದಾರೆ. ಪ್ರತಿ ಅಮಾವಾಸ್ಯೆ ದಿನ ಮಾಸಿಕ ಶಿವಾನುಭವಗೋಷ್ಠಿ ಆಯೋಜಿಸಿ ಭಕ್ತರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದ್ದಾರೆ. ಶ್ರೀಮಠದಲ್ಲಿ ಗೋಶಾಲೆ ಆರಂಭಿಸಿ 66ಗೋವುಗಳಿಗೆ ಆಶ್ರಯ ನೀಡಿದ್ದಾರೆ. 2002ರಲ್ಲಿ ಶ್ರೀಬೂದಿಬಸವೇಶ್ವರ ಟ್ರಸ್ಟ್ ಪ್ರಾರಂಭಿಸಿ ಸಾಮಾಜಿಕ ಸೇವೆಗೆ ಮುನ್ನುಡಿ ಬರೆದಿದ್ದಾರೆ. ಬಡವರ ಮಕ್ಕಳಿಗೆ ತ್ರಿವಿಧ ದಾಸೋಹ ನೀಡಲು ಶಾಲೆ ಪ್ರಾರಂಭಿಸಿದ್ದು ಅನ್ನ, ಅಕ್ಷರ, ಆಶ್ರಯ(ವಸತಿ) ನೀಡುತ್ತಿದ್ದು 500ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಕಲಾವಿದರನ್ನು ಪ್ರೋತ್ಸಾಹಿಸಲು ಶ್ರೀಶಾಂತಮೂರ್ತಿ ನಾಟ್ಯ ಸಂಘ ಸ್ಥಾಪಿಸಿ ರಂಗಭೂಮಿ ಕಲೆ ಪ್ರೋತ್ಸಾಹಿಸುತ್ತಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ 100ಕ್ಕೂ ಹೆಚ್ಚು ನಾಟಕಗಳು ಪ್ರದರ್ಶನಗೊಂಡಿವೆ. ಅಲ್ಲದೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಂಗೀತ, ಹಾಸ್ಯ ಕಾರ್ಯಕ್ರಮ ಆಯೋಜಿಸಿ ಭಕ್ತರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ. ಇದಲ್ಲದೆ ಶ್ರೀಮಠಕ್ಕೆ ಬೇಡಿಬರುವ ಬಡವರ ಮದುವೆಗೆ ತಾಳಿ, ಮದುವೆ ಬಟ್ಟೆ, ಅನ್ನದಾಸೋಹ ನೀಡುವ ಮೂಲಕ ಭೂಮಿಗೆ ಬಂದ ಭಗವಂತನಂತೆ ಕಂಗೊಳಿಸುತ್ತಿದ್ದಾರೆ.
ಶ್ರೀ ಬೂದಿಬಸವೇಶ್ವರ ಜಾತ್ರೆಯಲ್ಲಿ ಮಿಣಿ ಇಲ್ಲದೇ ತೇರು ಎಳೆಯಲಾಗುತ್ತಿದೆ. ಶ್ರೀಮಠ ಹಲವು ವರ್ಷಗಳಿಂದ ಸಮಾಜಸೇವೆ ಮಾಡುತ್ತಿದೆ. 2,465ಜೋಡಿ ಮದುವೆ ಮಾಡಿಸಿದ್ದಾರೆ. ರಂಗಭೂಮಿ ಕಲೆ ಉಳಿಸಲು ನಾಟಕ ಪ್ರದರ್ಶನ, ಧಾರ್ಮಿಕ, ಸಂಗೀತ, ಹಾಸ್ಯ ಕಾರ್ಯಕ್ರಮ ನಡೆಯಲಿದೆ. ಶ್ರೀಬೂದಿಬಸವ ಶಿವಾಚಾರ್ಯ ಸ್ವಾಮೀಜಿ ಆಧ್ಯಾತ್ಮ ಬೋಧನೆ ಮೂಲಕ ಭಕ್ತರನ್ನು ಜ್ಞಾನದ ಬೆಳಕಿನಕಡೆ ಕರೆದೊಯ್ಯುತ್ತಿದ್ದಾರೆ. ಚನ್ನಬಸವಸ್ವಾಮಿ ಹಿರೇಮಠ ಶ್ರೀಮಠದ ಆಡಳಿತಾಧಿಕಾರಿ