

ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಮಿಣಿ ಮಿಣಿ ಪೌಡರ್ ಹೆಚ್ಚು ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣ, ವಾಟ್ಸ್ ಆಪ್ನಲ್ಲಿ ಮಿಣಿ ಮಿಣಿ ಜೋಕ್ಸ್ ಹರಿದಾಡಿ ಜನಸಾಮಾನ್ಯರನ್ನು ರಂಜಿಸಿದೆ. ಮಂಗಳೂರು ಬಾಂಬ್ ಪ್ರಕರಣ ಸಂಬಂಧ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ‘ಬಾಂಬ್ನಲ್ಲಿ ಅದೆಂಥದ್ದೋ ಮಿಣಿ ಮಿಣಿ ಪೌಡರ್’ ಬಳಸಲಾಗಿತ್ತು ಎಂದಿದ್ದರು.
ಈ ಪದಗಳನ್ನಿಷ್ಟುಕೊಂಡು ರಂಗುರಂಗಿನ ಹಾಸ್ಯ ಚಟಾಕಿ ಸೃಷ್ಟಿಯಾಗಿದ್ದು, ಕುಮಾರಸ್ವಾಮಿ ಅವರನ್ನು ಟ್ರೋಲ್ ಮಾಡಲಾಗಿದೆ. ಚಲನಚಿತ್ರದ ವಿಡಿಯೋ ತುಣುಕುಗಳನ್ನು ಹೊಸೆದೂ ಎಚ್ಡಿಕೆ ಅವರನ್ನು ಹಾಸ್ಯದ ವಸ್ತುವಾಗಿ ಮಾಡಲಾಗಿದೆ. ನ್ಯೂಜಿಲೆಂಡ್ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯದಲ್ಲೂ ಮಿಣಿ ಮಿಣಿ ಪೌಡರ್ ಎಂಬ ಪೋಸ್ಟರ್ ಕಾಣಿಸಿದೆ. ಕ್ರಿಕೆಟ್ ಅಭಿಮಾನಿಯೊಬ್ಬ ಮಿಣಿ ಮಿಣಿ ಪೌಡರ್ ಎಂದು ಉದ್ಘರಿಸುತ್ತಾ ಪೋಸ್ಟರ್ ಹಿಡಿದ ವಿಡಿಯೋ ವೈರಲ್ ಆಗಿದೆ.
ಅಧಿಕಾರದಿಂದ ಕೆಳಗಿಳಿದ ನಂತರ ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮಂಗಳೂರು ಗಲಭೆ ವಿಷಯದಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡಿದರು. ಇದೀಗ ಬಿಜೆಪಿ, ಆರ್ಎಸ್ಎಸ್ನಿಂದ ಜೀವ ಬೆದರಿಕೆಯಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ದಾಖಲೆಗಳಿದ್ದರೆ ಪೊಲೀಸರಿಗೆ ನೀಡಲಿ. | ನಳಿನ್ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ