

ಕಾಸರಗೋಡು/ ಬದಿಯಡ್ಕ: ಜಿಲ್ಲೆಯ ಹೊಳೆ, ತೋಡುಗಳಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರ ಕುಡಿಯುವ ನೀರಿನ ಸಮಗ್ರ ಯೋಜನೆ ರೂಪಿಸುವಲ್ಲಿ ವಿಫಲವಾಗಿರುವುದರಿಂದ ಜನರಲ್ಲಿ ಬೇಸಿಗೆಯ ಹೆದರಿಕೆ ಶುರುವಾಗಿದೆ. ಬರದ ಆತಂಕದಲ್ಲೂ ಕೃಷಿಗೆ, ಕುಡಿಯಲು ನೀರು ಒದಗಿಸುವಲ್ಲಿ ಆಶಾಕಿರಣವಾಗಿರುವುದು ಕಿಂಡಿ ಅಣೆಕಟ್ಟುಗಳು.
ಪಯಸ್ವಿನಿ ನದಿಗೆ ಕುಂಟಾರಿನಲ್ಲಿ ನಿರ್ಮಿಸಿದ ಚೆಕ್‌ಡ್ಯಾಂನಲ್ಲಿ ನೀರು ಭರ್ತಿಯಾಗಿದೆ. ಈ ವರ್ಷ ನೀರಿನ ಕೊರತೆ ಉಂಟಾಗದು ಎಂದು ಜನರ ಆಶಾಭಾವ. ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ 2014ರಲ್ಲಿ ಬಾವಿ ಕೊರೆಯುವ ಕಾಮಗಾರಿಯನ್ನು ಪಂಚಾಯಿತಿ ಕೈಗೆತ್ತಿಕೊಂಡಾಗ ಕುಂಟಾರಿನ ಜನರ ವಿರೋಧಿಸಿದ್ದರಿಂದ ಬಾವಿ ಕೊರೆಯುವ ಕಾಮಗಾರಿ ಕೈಬಿಟ್ಟರು. ಬಳಿಕ ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ನಬಾರ್ಡ್ ನೇತೃತ್ವದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ನಿರ್ಧರಿಸಲಾಯಿತು.
ಕುಂಟಾರು ತೂಗುಸೇತುವೆಗಿಂತ 75 ಮೀ.ನಷ್ಟು ದೂರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಈಗಾಗಲೇ ಫೈಬರ್ ಹಲಗೆಗಳ ಶಟರ್ ಹಾಕಲಾಗಿದ್ದು, ನೀರು ತುಂಬಿ ಅಣೆಕಟ್ಟಿನ ಮೇಲಿನಿಂದ ಹರಿಯುತ್ತಿದೆ. ಮೇ ತಿಂಗಳ ತನಕ ನೀರು ತುಂಬಿಕೊಂಡರೆ ಈ ಬಾರಿ ನೀರಿನ ಸಮಸ್ಯೆಯೇ ಎದುರಾಗದು.
ಬೆಳ್ಳೂರಿಗೆ ಕುಂಟಾರಿನ ನೀರು: ಬೆಳ್ಳೂರು ಗ್ರಾಪಂ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯ ಸರ್ಕಾರ ಮತ್ತು ಗ್ರಾಪಂನ ಆರ್ಥಿಕ ಸಹಾಯದೊಂದಿಗೆ ಕುಂಟಾರು ಅಣೆಕಟ್ಟಿನಿಂದ ನೀರು ಕೊಡೊಯ್ಯಲು ಯೋಜನೆ ಹಾಕಲಾಗಿದೆ. ಬೆಳ್ಳೂರು ಗ್ರಾಪಂನ 13 ವಾರ್ಡ್‌ಗಳ 1,126 ಕುಟುಂಬಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ 7.37 ಕೋಟಿ ರೂ. ವೆಚ್ಚದ ಬೃಹತ್ ಕುಡಿಯುವ ನೀರಿನ ಯೋಜನೆ ಇದು. ನೀರು ಹಾಯಿಸಲು ಬೇಕಾದ ಟ್ಯಾಂಕ್ ನಿರ್ಮಾಣ, ಮೋಟಾರು ಜೋಡಣೆ, ಕೊಳವೆ ಜೋಡಿಸುವ ಕೆಲಸ ಪೂರ್ಣಗೊಂಡು ವರ್ಷಗಳು ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಪೂರ್ಣವಾಗದೆ ಯೋಜನೆ ಕುಂಟುತ್ತಾ ಸಾಗಿತ್ತು. ಈ ವರ್ಷ ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತವಾಗಬಹುದು. ಪಯಸ್ವಿನಿ ನದಿಗೆ ಇಂತಹ ಕಿಂಡಿ ಅಣೆಕಟ್ಟುಗಳು ಅಲ್ಲಲ್ಲಿನಿರ್ಮಾಣಗೊಂಡರೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ತಪ್ಪಿಸಲು ಸಾಧ್ಯವಾಗಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ಅಡ್ಕಸ್ಥಳ ಕಿರುಕಟ್ಟಿನಲ್ಲಿ ತುಂಬಿದ ನೀರು ಅಡ್ಕಸ್ಥಳದಲ್ಲಿ 2011ರಲ್ಲಿ ಯೋಜನೆ ಆರಂಭಗೊಂಡಿದ್ದರೂ ಮಾರ್ಚ್ ತಿಂಗಳ ವೇಳೆಗೆ ಹೊಳೆಯಲ್ಲಿ ನೀರು ಲಭ್ಯವಾಗದೆ ಸಂಪೂರ್ಣ ಯೋಜನೆ ಉಪಯೋಗ ಶೂನ್ಯವಾಗಿತ್ತು. ಕಿರು ನೀರಾವರಿ ಇಲಾಖೆಯಿಂದ ಕಳೆದವರ್ಷ ಹೊಳೆಗೆ ನಿರ್ಮಿಸಿರುವ ಶಾಶ್ವತ ಕಿರು ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿದ್ದು, ಈ ಬಾರಿ ಮೇ ತಿಂಗಳ ವರೆಗೂ ನೀರು ಲಭ್ಯವಾಗುವ ಸಾಧ್ಯತೆ ಕಂಡುಬರುತ್ತಿದೆ. *ಕಟ್ಟಗಳೇ ಜೀವಾಳ: ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕದ ಹಿಂದೆ 40ಕ್ಕೂ ಹೆಚ್ಚು ಕಟ್ಟಗಳು ಕಾರ್ಯಾಚರಿಸುತ್ತಿದ್ದರೆ, ಇಂದು ಬೆರಳೆಣಿಕೆ ಕಟ್ಟಗಳು ಮಾತ್ರ ಅಸ್ತಿತ್ವದಲ್ಲಿದೆ. ಹತ್ತುವರ್ಷಗಳಿಗೂ ಹಿಂದೆ 42ರಷ್ಟು ಸಣ್ಣ ಹಾಗೂ ದೊಡ್ಡ ಕಟ್ಟಗಳು ಕಾರ್ಯಾಚರಿಸುತ್ತಿದ್ದ ಸಂದರ್ಭ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆಯೂ ಅಷ್ಟಾಗಿ ಕಾಡುತ್ತಿರಲಿಲ್ಲ. ಕೊಳವೆಬಾವಿಗಳ ಹೆಚ್ಚಳದೊಂದಿಗೆ, ಕಟ್ಟಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಅಂತರ್ಜಲಮಟ್ಟ ಗಣನೀಯವಾಗಿ ಕುಸಿಯಲಾರಂಭಿಸಿದೆ. ಕೊಳವೆಬಾವಿಗಳಿಗೆ ನೀರು ಲಭ್ಯವಾಗದೆ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ಕೊಳವೆಬಾವಿ ಆಶ್ರಿತ ಪಂಪಿಂಗ್ ವ್ಯವಸ್ಥೆ ತಟಸ್ಥಗೊಂಡಿದೆ.
ಕುಂಟಾರು ಕಿಂಡಿಣ್ಕೆಟ್ಟು ನಿರ್ಮಾಣದಿಂದ ಈ ವರ್ಷ ಅಂತರ್ಜಲ ಮಟ್ಟದಲ್ಲಿ ಧನಾತ್ಮಕ ಬದಲಾವಣೆ ಸಾಧ್ಯವಾಗಿದೆ. ಈ ಪ್ರದೇಶದ ಬಹುತೇಕ ಎಲ್ಲ ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿದೆ. ಎಲ್ಲೆಡೆ ಇಂತಹ ಕಿರು ಅಣೆಕಟ್ಟುಗಳ ನಿರ್ಮಾಣ ಆಗಲೇಬೇಕು. ಬಾಲಕೃಷ್ಣ ಭಟ್ ಕುಂಟಾರು, ಕಟ್ಟ ನಿರ್ಮಾಣ ಸಮಿತಿ ಕಾರ್ಯಕರ್ತ
ಹಲವೆಡೆ ಕುಡಿಯುವ ನೀರು ಯೋಜನೆ ನಿರ್ಲಕ್ಷೃ ಎಣ್ಮಕಜೆ ಮತ್ತು ಬದಿಯಡ್ಕ ಗ್ರಾಮ ಪಂಚಾಯಿತಿಗಳ ಕೆಲವೊಂದು ಪ್ರದೇಶದಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿ ಶುದ್ಧ ಕುಡಿಯುವ ನೀರು ಪೂರೈಸುವ ಸಮಗ್ರ ಯೋಜನೆಗಳಿಲ್ಲ. ಎಣ್ಮಕಜೆಯಲ್ಲಿ 2019-20ನೇ ಸಾಲಿನಲ್ಲಿ ಸುಮಾರು 42ಲಕ್ಷ ರೂ. ಕುಡಿಯುವ ನೀರಿಗಾಗಿ ಮೀಸಲಿರಿಸಿದ್ದರೂ, ಇದರಲ್ಲಿ ಎಲ್ಲ ಮೊತ್ತ ಖರ್ಚು ಮಾಡಲು ಸಾಧ್ಯವಾಗಿಲ್ಲ. ಜತೆಗೆ ಬೇಸಿಗೆ ಕಾಲದಲ್ಲಿ ಸುಮಾರು 10ಲಕ್ಷ ರೂ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಬಳಸಿಕೊಳ್ಳಲಾಗಿದೆ. ಅಡ್ಕಸ್ಥಳ ಹೊಳೆಯಲ್ಲಿ ಬೃಹತ್ ಬಾವಿ ನಿರ್ಮಿಸಿ ನೀರು ಪಂಪಿಂಗ್ ನಡೆಸಿ, ಅಲ್ಲಿಂದ ಗೋಳಿತ್ತಡ್ಕದ ಶುದ್ಧೀಕರಣ ಘಟಕಕ್ಕೆ ಹಾಯಿಸಿ, ಅಲ್ಲಿಂದ ಪೆರ್ಲದಲ್ಲಿರುವ ಸುಮಾರು 7ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕಿಯಲ್ಲಿ ಸಂಗ್ರಹಿಸಿ ಇಲ್ಲಿಂದ ವಿವಿಧೆಡೆ ರವಾನಿಸಲಾಗುತ್ತಿದೆ. ಅಲ್ಲಲ್ಲಿ ಪೈಪು ಒಡೆದಿದ್ದು, ಫಲಾನುಭವಿಗಳಿಗೆ ಯೋಜನೆ ಉಪಯೋಗಶೂನ್ಯವಾಗುತ್ತಿದೆ. ಹತ್ತೊಂಬತ್ತು ವಾರ್ಡುಗಳನ್ನು ಒಳಗೊಂಡಿರುವ ಬದಿಯಡ್ಕ ಗ್ರಾಮ ಪಂಚಾಯಿತಿಯಲ್ಲೂ ಸಮಗ್ರ ಕುಡಿಯುವ ನೀರಿನ ಸಮಗ್ರ ಯೋಜನೆಯಿಲ್ಲ. ಬದಿಯಡ್ಕ ಮತ್ತು ನೀರ್ಚಾಲು ಗ್ರಾಮಗಳಿಗೆ ನೀರು ವಿತರಿಸಲಿರುವ ತಲಂಬಾಡಿ ಕುಡಿಯುವ ನೀರಿನ ಯೋಜನೆ ಹೊರತುಪಡಿಸಿದರೆ ಬೇರೆ ಯಾವುದೇ ಸಮಗ್ರ ನೀರು ಪೂರೈಕೆ ವ್ಯವಸ್ಥೆಯಿಲ್ಲ. ಇನ್ನು ಆಯಾ ಪ್ರದೇಶದಲ್ಲಿ ಒಳವೆಬಾವಿ ನಿರ್ಮಿಸಿ ನೀರು ವಿತರಿಸುತ್ತಿದ್ದರೂ, ಇದ್ಯಾವುದೂ ಕಾರ್ಯಕ್ಷಮತೆಯಿಂದ ಕೂಡಿಲ್ಲ. 2007ರಲ್ಲಿ 4.71ಕೋಟಿ ರೂ. ವೆಚ್ಚದಲ್ಲಿ ಜಲಪ್ರಾಧಿಕಾರ ವತಿಯಿಂದ ಯೋಜನೆ ಜಾರಿಗೊಳಿಸಲಾಗಿದ್ದು, ಬದಿಯಡ್ಕ ಪಂಚಾಯಿತಿ ತಲಂಬಾಡಿಯಲ್ಲಿ ನೀರು ಶುದ್ಧೀಕರಣ ಘಟಕ, 4.91ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಪಳ್ಳತ್ತಡ್ಕ ಹೊಳೆಯಲ್ಲಿ ಎರಡು ಬೃಹತ್ ಬಾವಿ ನಿರ್ಮಿಸಿ, ಇಲ್ಲಿಂದ ನೀರು ತಲಂಬಾಡಿಗೆ ಪಂಪ್ ಮಾಡಿ, ಅಲ್ಲಿ ಶುದ್ಧಿಕರಿಸಿದ ನೀರನ್ನು ಎರಡು ಗ್ರಾಮಗಳಿಗೆ ವಿತರಿಸಲಾಗುತ್ತಿದೆ. ಇದಕ್ಕಾಗಿ 69560ಮೀ. ಪೈಪು ಅಳವಡಿಸಲಾಗಿದೆ. ಯೋಜನೆ ಆರಂಭದ ವರ್ಷದಲ್ಲೇ ಪೈಪುಗಳಲ್ಲಿ ಸೋರಿಕೆ ಆರಂಭಗೊಂಡಿದ್ದು, 13ವರ್ಷಗಳ ನಂತರವೂ, ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿಲ್ಲ.
ಪಂಚಾಯಿತಿಯ ನಾನಾ ಪ್ರತಿವರ್ಷ ಕಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಹೊಳೆ, ತೋಡುಗಳಿಗೆ ಕಟ್ಟ ನಿರ್ಮಾಣಗೊಳ್ಳುವ ಪ್ರದೇಶದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿಲ್ಲ. ಬರಿದಾಗಿರುವ ಅಂತರ್ಜಲ ಮೇಲಕ್ಕೆತ್ತಲು ಜಲಸಂರಕ್ಷಣೆಯೊಂದೇ ದಾರಿ. ಡಿ.ಶಂಕರ, ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ