ಕಿಲ್ಟನ್ ದ್ವೀಪದ ಸಮೀಪ ಲಕ್ಷದ್ವೀಪದ ಮಿನಿ ನೌಕೆ ಭಾಗಶಃ ಮುಳುಗಡೆ

ship new
Published on

ಮಂಗಳೂರು: ಮಂಗಳೂರು ಹಳೇ ಬಂದರಿನಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೇರಿಕೊಂಡು ಲಕ್ಷದ್ವೀಪಕ್ಕೆ ಹೋಗುತ್ತಿದ್ದ ಮಿನಿ ನೌಕೆ ಲಕ್ಷದ್ವೀಪ ಸಮೀಪ ಸಮುದ್ರದಲ್ಲಿ ಭಾಗಶಃ ಮುಳುಗಡೆಯಾಗಿದ್ದು, ಅದರಲ್ಲಿದ್ದ ಏಳು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

ಫೈಸಲ್ ಹುಸೈನ್ ಹೆಸರಿನ ಈ ಮಿನಿ ನೌಕೆ ಮಾಲೀಕ ಲಕ್ಷದ್ವೀಪದವರು ಎಂದು ತಿಳಿದುಬಂದಿದೆ. ಸೋಮವಾರ ಮಂಗಳೂರು ಹಳೇ ಬಂದರಿನಿಂದ 700 ಚೀಲ ಸಿಮೆಂಟ್, 2 ಸಾವಿರ ಚೀಲ ಜಲ್ಲಿ, ಸಿಮೆಂಟ್‌ನಿಂದ ತಯಾರಿಸಿದ 400 ಇಟ್ಟಿಗೆ, ಸ್ಟೀಲ್, ಎಂಸ್ಯಾಂಡ್‌ನ್ನು ಹೊತ್ತುಕೊಂಡು ಈ ನೌಕೆ ಲಕ್ಷದ್ವೀಪದ ಕಡೆಗೆ ಪ್ರಯಾಣ ಬೆಳೆಸಿತ್ತು. ಮಂಗಳವಾರ ರಾತ್ರಿ ದಾರಿಮಧ್ಯೆ ನೌಕೆಯೊಳಗೆ ನೀರು ಉಕ್ಕತೊಡಗಿತ್ತು. ರಾತ್ರಿ ಲಕ್ಷದ್ವೀಪ ಸಮೀಪದ ಕಿಲ್ಟನ್ ದ್ವೀಪದ ಬಳಿ ಸಮುದ್ರದಲ್ಲೇ ನೌಕೆಯನ್ನು ಲಂಗರು ಹಾಕಲಾಯಿತು. ಅಲ್ಲಿಯೇ ನೌಕೆ ಭಾಗಶಃ ನೀರಿನಲ್ಲಿ ಮುಳುಗಿತು.

ತಕ್ಷಣ ಲಕ್ಷದ್ವೀಪದ ಜನರಿಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಂದ ದೋಣಿಯಲ್ಲಿ ಬಂದ ತಂಡ ಮುಳುಗುತ್ತಿದ್ದ ನೌಕೆಯಲ್ಲಿದ್ದ ಎಲ್ಲ 7 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ. ನೌಕೆ ಭಾಗಶಃ ಮುಳುಗಿರುವುದರಿಂದ ದಡಕ್ಕೆ ಕೊಂಡೊಯ್ಯಲು ಅಸಾಧ್ಯ ಎಂಬ ಸ್ಥಿತಿಯಲ್ಲಿದೆ. ಅದರಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಸಾಮಗ್ರಿಗಳು ನೀರುಪಾಲಾಗಿದೆ ಎಂದು ಮಂಗಳೂರಿನ ಸೈಲಿಂಗ್ ವೆಸೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್ ತಿಳಿಸಿದ್ದಾರೆ.
ಅರಬ್ಬಿ ಸಮುದ್ರ ಮಧ್ಯೆ ಇರುವ ಭಾರತದ ಭೂಪ್ರದೇಶ ಲಕ್ಷದ್ವೀಪಕ್ಕೆ ಬಹುತೇಕ ಸಾಮಗ್ರಿಗಳು ಕೇರಳದ ಕೊಚ್ಚಿ ಮತ್ತು ಮಂಗಳೂರು ಹಳೇ ಬಂದರಿನಿಂದ ರವಾನೆಯಾಗುತ್ತವೆ. ಈ ಹಿಂದೆಯೂ ಇಂತಹ ಹಲವು ದುರ್ಘಟನೆಗಳು ನಡೆದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net