

ಬೆಂಗಳೂರು: ಸಾರ್ವಜನಿಕರು ಮತ್ತು ಸ್ಟೋನ್ ಕ್ರಷರ್ ಮಾಲೀಕರಿಗೆ ಲಂಚದ ಬೇಡಿಕೆ ಇಟ್ಟು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಬಿ.ಎಂ.ಲಿಂಗರಾಜು ಅವರನ್ನು ಇಂದು ಸೇವೆಯಿಂದ ಅಮಾನತು ಪಡಿಸಲಾಗಿದೆ. ಅವರ ಮೇಲೆ ಆರೋಪ ಕೇಳಿಬಂದಿದ್ದರಿಂದ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು.
ಗಮನಿಸಬೇಕಾದ ಅಂಶವೆಂದರೆ ಇದೇ ಆರೋಪದ ಮೇಲೆ ಎರಡು ವಾರಗಳ ಹಿಂದೆಯಷ್ಟೇ ಫಯಾಜ್ ಅಹಮ್ಮದ್ ಖಾನ್ ಎಂಬ ಭೂ ವಿಜ್ಞಾನಿಯನ್ನು ಸೇವೆಯಿಂದ ಅಮಾನತುಪಡಿಸಲಾಗಿತ್ತು. ಲಿಂಗರಾಜು ಈ ಹಿಂದೆ ಬಾಗಲಕೋಟೆ ಜಿಲ್ಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಸ್ಟೋನ್ ಕ್ರಷರ್ ಮಾಲೀಕರು ಮತ್ತು ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಎದುರಿಸುತ್ತಿದ್ದರು.
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಯವರು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ ವೇಳೆ ಬಿ.ಎಂ.ಲಿಂಗರಾಜು ಅವರ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಸಾರ್ವಜನಿಕರು ಮತ್ತು ಸ್ಟೋನ್ ಕ್ರಷರ್ ಮಾಲೀಕರು ದಾಖಲೆಗಳ ಸಮೇತ ದೂರು ಸಲ್ಲಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವರು ಇಲಾಖಾ ತನಿಖೆಗೆ ಆದೇಶ ಮಾಡಿದ್ದರು. ಲಿಂಗರಾಜು ವಿರುದ್ಧ ತನಿಖೆ ನಡೆಸಿದ ವೇಳೆ ಗುಲ್ಬರ್ಗ ಜಿಲ್ಲೆ, ಸ್ಟೋನ್ ಕ್ರಷರ್ ಇಂಡಸ್ಟ್ರೀಸ್ ಅಸೋಸಿಯೇಷನ್‍ನಿಂದ ಹೆಚ್ಚುವರಿ ರಾಜಧನ ಪಡೆದಿರುವುದು ಸಾಬೀತಾಗಿತ್ತು.