ಗಣಿ ಶೂಟ್ ಔಟ್ ಪ್ರಕರಣ, ರೈತನಿಗೆ ಗುಂಡೇಟು ಖಂಡಿಸಿ ಪ್ರತಿಭಟನೆ

IMG-20250424-WA0200.jpg
Published on

ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ಶೂಟ್ ಔಟ್ ಪ್ರಕರಣವನ್ನು ವಿರೋಧಿಸಿ ರೈತರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟು ಧರಣಿ ನಡೆಸಿದ ಪ್ರತಿಭಟನಾಕಾರರು ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶೂಟ್ ಔಟ್ ಪ್ರಕರಣದಲ್ಲಿ ಭಾಗಿಯಾಗಿರುವವರು ವಿರುದ್ಧ ನಿರ್ದಾಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರಗೆ ದೂರು ಸಲ್ಲಿಸಿದರು.

*ಸಂಸದರ ವಿರುದ್ಧ ಆಕ್ರೋಶ
ಗಣಿಗಾರಿಕೆ ಪರವಾನಗಿ ಹಾಗೂ ಶೂಟ್ ಔಟ್ ಪ್ರಕರಣದಲ್ಲಿ ಸಂಸದ ಡಾ ಕೆ.ಸುಧಾಕರ್ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಮಂಚೇನಹಳ್ಳಿಯಲ್ಲಿ ಗಣಿಗಾರಿಕೆಗೆ ವಿರೋಧದ ನಡುವೆಯೂ ಸುಧಾಕರ್ ಆಡಳಿತದಾವಧಿಯಲ್ಲಿಯೇ ಪರವಾನಗಿ ನೀಡಲಾಗಿದೆ. ಶೂಟ್ ಔಟ್ ನಡೆಸಿದ ಆರೋಪಿಯು ಬಿಜೆಪಿಗೆ ಸೇರಿದವರು. ಹೀಗಿದ್ದರೂ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದೊಂದಿಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಮೇಲೆ ಹೊಣೆಗಾರರನ್ನಾಗಿಸಲು ಯತ್ನಿಸಿದ್ದಾರೆ. ಆದರೆ, ವಾಸ್ತವಾಂಶದ ದಾಖಲೆಗಳು ಹೊರ ಬಿದ್ದು ಮುಖಭಂಗ ಅನುಭವಿಸಿದ್ದಾರೆ ಎಂದು ಆರೋಪಿಸಿದರು.
ಕರೊನಾ ಹಗರಣ, ಕ್ಷೇತ್ರದಲ್ಲಿ ಸರ್ಕಾರದ ಅನುದಾನದಲ್ಲಿ ಕಮೀಷನ್, ಅವ್ಯವಹಾರ ಸೇರಿದಂತೆ ನಾನಾ ಆರೋಪಗಳನ್ನು ಹೊತ್ತಿರುವ ಸಂಸದರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಹೊಂದಿಲ್ಲ ಎಂದು ವ್ಯಂಗ್ಯವಾಡಿದರು.  
ಪ್ರತಿಭಟನೆಯಲ್ಲಿ ಜಿ.ಪಂ.ಮಾಜಿ ಸದಸ್ಯ ಕೆ.ಎಂ.ಮುನೇಗೌಡ, ನಗರಸಭಾ ಸದಸ್ಯರಾದ ಎಸ್.ಎಂ.ರಫಿಕ್, ಅಂಬರೀಷ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಬೇರ್ ಅಚ್ಚು, ವಕ್ತಾರ ಆದಿನಾರಾಯಣ, ಮುಖಂಡರಾದ ಸು.ಧಾ.ವೆಂಕಟೇಶ್, ಡ್ಯಾನ್ಸ್ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net