

ಹರಪನಹಳ್ಳಿ: ಸ್ಕೃತಿಕ ಕ್ಷೇತ್ರಗಳಿಂದ ಮನಸ್ಸು ಚುರುಕುಗೊಳ್ಳುತ್ತದೆ ಎಂದು ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪುರಾತನ ಕಾಲದಲ್ಲಿ ಸಾಂಸ್ಕೃತಿಕ, ಚಿತ್ರಕಲೆಗಳ ಮೂಲಕ ಅನ್ಯ ಜನರಿಗೆ ದೇಶಿಯ ಭಾಷೆಯ ಬಗೆಗೆ ಪರಿಚಯ ಮಾಡಲಾಗುತ್ತಿತ್ತು ಎಂದ ಅವರು, ಸಾಂಸ್ಕೃತಿಕ ಕ್ಷೇತ್ರಕ್ಕೆ ಎಂ.ಪಿ. ಪ್ರಕಾಶ್ ಕುಟುಂಬ ಅಪಾರ ಕೊಡುಗೆ ನೀಡಿದೆ ಎಂದರು.
ರಾಣಿ ಚನ್ನಮ್ಮ ವಿವಿ ವಿಶ್ರಾಂತ ಕುಲ ಸಚಿವ ಶಾಂತಿನಾಥ ದಿಬ್ಬದ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಆತುರದ ನಿರ್ಧಾರಗಳು ಹೆಚ್ಚು. ಜೀವನದಲ್ಲಿ ಯಶಸ್ಸು ಸಿಗಲು ಶಾಂತ ಸಮಚಿತ್ತದಿಂದ ಆಲೋಚಿಸಿ ಮುನ್ನಡೆಯಬೇಕು. ಏಕೆಂದರೆ ನಮ್ಮ ಬದುಕಿನ ಕತೃ ನಾವೇ ಆಗಿದ್ದೇವೆ ಎಂಬುದನ್ನು ಅರಿಯಬೇಕು. ಅಧುನಿಕ ಹೆಚ್ಚಿದಂತೆ ನಾಡಿನ ಅನೇಕ ಸಾಂಸ್ಕೃತಿಕ ವಿಚಾರಗಳನ್ನು ಕಳೆದುಕೊಳ್ಳುತ್ತಿದ್ದೇವೆ.
ಇಂಗ್ಲಿಷ್ ಭಾಷೆಯ ವ್ಯಾಮೋಹಕ್ಕೆ ಮರುಳಾಗಿ ಗ್ರಾಮಿಣ ಸೊಗಡನ್ನು ಕಳೆದುಕೊಳ್ಳಬಾರದು. ಪೂರ್ವಜರ ಪರಂಪರೆಯನ್ನು ಭವಿಷ್ಯದ ಹಿತದೃಷ್ಟಿಯಿಂದ ನಾವು ಬೆಳೆಸಬೇಕಾದ ಅಗತ್ಯವಿದೆ. ಜಾನಪದ ಸಾಹಿತ್ಯವನ್ನು ಹಿಂದಿನಿಂದಲೂ ಎರಡನೇ ದರ್ಜೆಯ ಸಾಹಿತ್ಯ ಪ್ರಕಾರವಾಗಿಯೇ ಕಾಣತ್ತಾ ಬಂದಿದ್ದೇವೆ. ಆದರೆ ಅದಕ್ಕಿರುವ ಮಹತ್ವ ಗಂಭೀರವಾಗಿದೆ ಎಂದರು.
ಪ್ರಾಚಾರ್ಯರಾದ ಎಸ್‌ಎಂ ಸಿದ್ಧಲಿಂಗಮೂರ್ತಿ, ಮಹೇಶ್ ಉಪ್ಪಿನ, ಉಪನ್ಯಾಸಕರಾದ ವೆಂಕಟೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ, ಲಾಟಿ ದಾದಾಪೀರ್ ಎಲ್‌ಎಂ ಮಂಜ್ಯಾನಾಯ್ಕ, ಜಗದೀಶ ಗೌಡ ಇತರರಿದ್ದರು.