ಸಮೂಹ ಮಾಧ್ಯಮಗಳಿಂದ ಮನಸ್ಸು ಕಲುಷಿತ: ಶ್ರೀ ಡಾ. ಸಿದ್ಧಲಿಂಗ ಸ್ವಾಮೀಜಿ ಕಳವಳ

Sheelasampadana Math
ಶ್ರೀ ಶೀಲಸಂಪಾದನಾ ಮಠದ ಪೀಠಾಧ್ಯಕ್ಷ ಡಾ. ಸಿದ್ದಲಿಂಗ ಸ್ವಾಮೀಜಿ ಅವರು ಗಂಜಿಗಟ್ಟಿಯ ಚರಮೂರ್ತೇಶ್ವರ ಮಠದ ಷ.ಬ್ರ. ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಅಭಿನಂದಿಸಿದರು. ಎಸ್.ದಯಾಶಂಕರ್, ಜಿ.ಎ.ಹಿರೇಮಠ, ಡಾ. ಕುಮಾರಚಲ್ಯ, ಕೆ.ರುದ್ರಪ್ಪಯ್ಯ, ಎನ್.ಜೆ.ರಾಜಶೇಖರಪ್ಪ ಗೌಡ, ವಿ. ಸಂತೋಷ್ ಕುಮಾರ್ ಇದ್ದರು.
Published on

ಶಿವಮೊಗ್ಗ: ವಾಟ್ಸ್‌ಆ್ಯಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಿಂದ ಮನುಷ್ಯನ ಮನಸ್ಸು ಕಲುಷಿತಗೊಳ್ಳುತ್ತಿದೆ. ಸಂಸ್ಕಾರ ಹಾಗೂ ಸಂಸ್ಕೃತಿ ಕಡಿಮೆಯಾಗುತ್ತಿದೆ. ತಂತ್ರಜ್ಞಾನ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಶ್ರೀ ಶೀಲಸಂಪಾದನಾ ಮಠದ ಪೀಠಾಧ್ಯಕ್ಷ ಡಾ. ಶ್ರೀ ಸಿದ್ದಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಶಂಕರಘಟ್ಟ ಸಮೀಪದ ಗೋಣಿಬೀಡು ಶ್ರೀ ಶೀಲಸಂಪಾದನಾ ಮಠದಲ್ಲಿ ಸ್ಪಿರಿಚ್ಯುಯಲ್ ಫೌಂಡೇಷನ್‌ನಿಂದ ಭಾನುವಾರ ಆಯೋಜಿಸಿದ್ದ ಅನುಭಾವ ಸಂಗಮ-87ನೇ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮನಸ್ಸಿನ ಮಾಲಿನ್ಯ ತಡೆಗಟ್ಟಲು ಮಕ್ಕಳಿಗೆ ಸಂಸ್ಕಾರ ಕಲಿಸುವುದು ಅಗತ್ಯ ಎಂದರು.
ಮಕ್ಕಳು ಇಂದು ಮನೆಗೆ ಬರುವ ಅತಿಥಿಗಳನ್ನು ಸತ್ಕರಿಸುವುದು ಒತ್ತಟ್ಟಿಗಿರಲಿ ಅವರೊಂದಿಗೆ ಸರಿಯಾಗಿ ಮಾತನಾಡದೆ ಮೊಬೈಲ್‌ನಲ್ಲಿ ಮುಳುಗಿರುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಬರುವ ಅರ್ಧದಷ್ಟು ಜನ ತಲೆ ಬಗ್ಗಿಸಿಕೊಂಡು ಮೊಬೈಲ್ ನೋಡುತ್ತಿರುತ್ತಾರೆ. ಉಳಿದರ್ಧ ಜನ ಪರಸ್ಪರ ಮಾತನಾಡುತ್ತಿರುತ್ತಾರೆ. ಮೊಬೈಲ್ ಬಳಕೆ ನಮ್ಮ ಬದುಕಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಭಗವಂತನ ನಾಮಸ್ಮರಣೆ, ಧಾರ್ಮಿಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಸಂತೋಷವಾಗಿ ಬದುಕಲು ಸಾಧ್ಯ ಎಂದು ತಿಳಿಸಿದರು.
ಚರಮೂರ್ತೇಶ್ವರ ಮಠದ ಷ.ಬ್ರ. ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯುವಜನತೆ ಅಲೌಕಿಕದಿಂದ ದೂರ ಸರಿಯುತ್ತಿದ್ದಾರೆ. ಅವರಿಗೆ ಅಲೌಕಿಕಕ್ಕಿಂತಲೂ ಲವ್ ಕಿಕ್ ಮುಖ್ಯವಾಗಿದೆ. ಬಂಧನ ಮತ್ತು ಮೋಕ್ಷಕ್ಕೆ ಮನಸ್ಸೇ ಕಾರಣ. ಅಧ್ಯಾತ್ಮದಿಂದ ಮನಸ್ಸನ್ನು ನಿಯಂತ್ರಿಸಲು ಸಾಧ್ಯ ಎಂದರು.
ಆಧ್ಯಾತ್ಮಕ ಚಿಂತಕ ವಿ. ಸಂತೋಷ್‌ಕುಮಾರ್ ಉಪನ್ಯಾಸ ನೀಡಿದರು. ಫೌಂಡೇಷನ್ ಕಾರ್ಯಾಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕಾಳೇನಹಳ್ಳಿ ಶ್ರೀ ಶಿವಯೋಗಾಶ್ರಮದ ಆಡಳಿತಾಧಿಕಾರಿ ಜಿ.ಎ.ಹಿರೇಮಠ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕುಮಾರಚಲ್ಯ, ಕೆ.ರುದ್ರಪ್ಪಯ್ಯ, ಎನ್.ಜೆ.ರಾಜಶೇಖರಪ್ಪ ಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net