ಹಲವು ಕಾಯಿಲೆಗಳಿಗೆ ಮನಸ್ಸೇ ಮೂಲ

17 anavatti 1
ಬೆಂಡೆಕಟ್ಟೆ ಗ್ರಾಮದಲ್ಲಿ ಆಯೋಜಿಸಿದ್ದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮವನ್ನು ಡಾ. ಮಾನೆ ಮಲ್ಲಿಕಾರ್ಜುನ ಧರ್ಮಣ್ಣ ಉದ್ಘಾಟಿಸಿದರು. ಡಾ. ಮಹೇಶ್, ಡಾ. ಎಸ್.ಟಿ.ಮುರಳೀಧರ, ಡಾ. ನದಾಫ್ ಇತರರಿದ್ದರು.
Published on

ಆನವಟ್ಟಿ: ಮಾನಸಿಕ, ಆಧ್ಯಾತ್ಮಿಕ, ಶಾರೀರಿಕವಾಗಿ ಆರೋಗ್ಯವನ್ನು ಕಾಯ್ದುಕೊಳ್ಳುವುದೇ ಆಯುರ್ವೇದದ ಮೂಲಮಂತ್ರ. ಕಾಯಿಲೆ ಎಂದರೆ ಕೇವಲ ಶಾರೀರಿಕ ವಿಕೃತಿಯಲ್ಲ. ಹಲವು ಕಾಯಿಲೆಗಳ ಮೂಲ ಮನಸ್ಸು ಎಂದು ಆಯುರ್ವೇದದಲ್ಲಿ ದೃಢಪಟ್ಟಿದೆ. ಉದಾತ್ತ ನಡವಳಿಕೆಗಳನ್ನು ಅಳವಡಿಸಿಕೊಂಡು, ಆಧ್ಯಾತ್ಮಿಕ ಸಮಸ್ಥಿತಿ ಕಾಯ್ದುಕೊಂಡಾಗ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯ ಎಂದು ಡಾ. ಮಾನೆ ಮಲ್ಲಿಕಾರ್ಜುನ ಧರ್ಮಣ್ಣ ತಿಳಿಸಿದರು.

ಆನವಟ್ಟಿ ಸಮೀಪದ ಬೆಂಡೆಕಟ್ಟೆ ಗ್ರಾಮದಲ್ಲಿ ಜಿಪಂ, ಆಯುಷ್ ಇಲಾಖೆಯು ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಶನಿವಾರ ಹಮ್ಮಿಕೊಂಡಿದ್ದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಯುರ್ವೇದ ಎಂದರೆ ಕೇವಲ ಗಿಡಮೂಲಿಕೆಗಳಿಂದ ತಯಾರಾದ ಔಷಧವಲ್ಲ. ನಾವು ದಿನನಿತ್ಯ ಅಡುಗೆಯಲ್ಲಿ ಉಪಯೋಗಿಸುವ ಬಹಳಷ್ಟು ಪದಾರ್ಥಗಳು ಆಯುರ್ವೇದ ಔಷಧೀಯ ಗುಣಗಳನ್ನು ಹೊಂದಿವೆ. ನಾವು ಮಲೆನಾಡು ಭಾಗದವರಾಗಿದ್ದು ದಿನನಿತ್ಯ ನೋಡುವ ಹಲವಾರು ಗಿಡ, ಬಳ್ಳಿ, ಮರಗಳಲ್ಲಿ ಔಷಧೀಯ ಗುಣಗಳವೆ. ಅವುಗಳ ಬಗ್ಗೆ ಸಂಪೂರ್ಣವಾಗಿ ಅರಿತು ಕಾಯಿಲೆಗಳಿಗೆ ಅನುಗುಣವಾಗಿ ಮನೆ ಮದ್ದಿನಿಂದಲೇ ಸದೃಢ ಆರೋಗ್ಯವನ್ನು ಪಡೆಯಬೇಕು ಎಂದು ಹೇಳಿದರು.
ಉದ್ರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಡಾ. ಮಹೇಶ್ ಮಾತನಾಡಿ, ಸರ್ಕಾರವು ಜನರಲ್ಲಿ ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ಯೋಜನೆ ಆರಂಭಿಸಿದೆ. ಜನರಿಗೆ ಅವರ ವೈಯಕ್ತಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುವುದರ ಜತೆಗೆ ಮನೆ ಮದ್ದುಗಳಿಂದ ಪ್ರಾಥಮಿಕ ಚಿಕಿತ್ಸೆಯನ್ನು ಮಾಡಿಕೊಳ್ಳುವುದು. ದೈನಂದಿನ ಚಟುವಟಿಕೆಗಳು, ಉಟೋಪಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ಎಸ್.ಟಿ.ಮುರಳೀಧರ, ಡಾ. ನದಾಫ್, ಟಿ.ಜಿ.ಮಹಾಲಿಂಗಪ್ಪ, ಪಪಂ ಅಧಿಕಾರಿ ಪ್ರಭು ಇತರರಿದ್ದರು. ಪ್ರಕಾಶ್ ಮಡ್ಲೂರು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net