

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಪಕ್ಕದಲ್ಲಿರುವ ಶ್ರಮಿಕ ನಿವಾಸಿಗಳನ್ನು ಫೆಬ್ರವರಿಯೊಳಗೆ ಚಿಕ್ಕಮಂಡ್ಯ ಸಮೀಪ ನಿರ್ಮಾಣ ಮಾಡಿರುವ ಮನೆಗಳಿಗೆ ಸ್ಥಳಾಂತರ ಮಾಡಬೇಕು. ಈ ಸಂಬಂಧ ತ್ವರಿತವಾಗಿ ಕೆಲಸಗಳು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚನೆ ನೀಡಿದರು.
ನಗರದ ಮಿಮ್ಸ್‌ನಲ್ಲಿ ಆಯೋಜಿಸಿದ್ದ ನಿವಾಸಿಗಳ ಸ್ಥಳಾಂತರ ಕುರಿತ ಸಭೆಯಲ್ಲಿ ಮಾತನಾಡಿದರು. ಇಂಜಿನಿಯರ್‌ಗಳು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಹಿಂದೆಯೇ ಸೂಚನೆ ನೀಡಿದರೂ ಯಾವುದೇ ಕ್ರಮವಾಗಿಲ್ಲ. ಸಮಸ್ಯೆಗಳಿದ್ದರೆ ಗಮನಕ್ಕೆ ತಂದು ಬಗೆಹರಿಸುತ್ತಿಲ್ಲ. ಈ ಸಂಬಂಧ ಇನ್ನೂ ಎರಡು ಸಭೆ ಮಾಡಲಾಗುವುದು. ಅಷ್ಟರೊಳಗೆ ಕೆಲಸಗಳು ಆಗುತ್ತಿರಬೇಕು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿ, ಅಲ್ಲಿನ ಮನೆಗಳಿಗೆ ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ತುರ್ತು ಕ್ರಮವಾಗಬೇಕು. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಅರ್ಹರಿಗೆ ಸಿಗಲಿ: ಇದಲ್ಲದೆ 576 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 524 ಜನ ಫಲಾನುಭವಿಗಳಿದ್ದಾರೆ. ಯಾರಾದರೂ ಅರ್ಜಿ ಸಲ್ಲಿಸಿದರೆ ಸೂಕ್ತವಾಗಿ ಪರಿಶೀಲನೆ ನಡೆಸಬೇಕು. ಅರ್ಹರಿಗೆ ಮಾತ್ರ ಮನೆ ಹಂಚಿಕೆ ಮಾಡಬೇಕು. ನಿವಾಸಿಗಳು ಅಲ್ಲಿಗೆ ಹೋದರೆ ಇಲ್ಲಿಗಿಂತಲೂ ಆರಾಮಾಗಿರುತ್ತಾರೆ ಎಂದು ಜಯರಾಂ ರಾಯಪುರ ಮತ್ತು ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.
ಸಹಿ ಹಾಕಿ ಹೋಗ್ತಾರಂತೆ: ಜಯರಾಂ ರಾಯಪುರ ಮಾತನಾಡಿ, ಮಿಮ್ಸ್‌ನ ವೈದ್ಯರು ಸಹಿ ಹಾಕಿ ಹೊರಗೆ ಹೋದರೆ ಸಂಜೆಗೆ ಬರುತ್ತಾರೆ. ಮಾತ್ರವಲ್ಲದೆ ಊಟಕ್ಕೆಂದು ಮೂರ‌್ನಾಲ್ಕು ಗಂಟೆ ಹೋಗುತ್ತಾರೆ ಎನ್ನುವ ಆರೋಪವಿದೆ. ಹೀಗಾದರೆ ರೋಗಿಗಳ ಕಥೆ ಏನೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಈ ಬಗ್ಗೆ ಗಮನಹರಿಸಲಾಗುತ್ತಿದೆ ಎಂದಾಗ ಜಯರಾಂ ರಾಯಪುರ ಮಾತನಾಡಿ, ಹೀಗಾದರೆ ಕಷ್ಟ. ಯಾರಾದರೂ ಸಹಿ ಹಾಕಿ ಹೊರಗೆ ಹೋದರೆ ತಕ್ಷಣ ಕ್ರಮ ತೆಗೆದುಕೊಳ್ಳಿ. ಮುಂದಿನ ದಿನಗಳಲ್ಲಿ ಮಿಮ್ಸ್‌ಗೆ ದಿಢೀರ್ ಭೇಟಿ ನೀಡಲಾಗುವುದು. ಆ ವೇಳೆ ಅವ್ಯವಸ್ಥೆ ಕಂಡರೆ ತಕ್ಷಣ ಕ್ರಮವಹಿಸಲಾಗುವುದು. ಸಧ್ಯದ ಪರಿಸ್ಥಿತಿ ಗಮನಿಸಿದರೆ ಒಂದು ನೀರಿನ ನಲ್ಲಿ ಹಾಳಾದರೂ ಸರಿಪಡಿಸಿಲ್ಲ. ಶೌಚಗೃಹ ವ್ಯವಸ್ಥೆ ಸರಿಯಿಲ್ಲ. ಆದ್ದರಿಂದ ಹೊರಗುತ್ತಿಗೆಯಲ್ಲಿ ಸಿಬ್ಬಂದಿ ನೇಮಿಸಿಕೊಂಡು ಸಮಸ್ಯೆಯನ್ನು ಸರಿಪಡಿಸಿ ಎಂದು ಸೂಚನೆ ನೀಡಿದರು.
ಇನ್ನು ಮಿಮ್ಸ್‌ನ ಗಾರ್ಡನ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಗಿಡ ನೆಟ್ಟು ಪೋಷಣೆ ಮಾಡಿ. ನೋಡಲು ಸುಂದರವಾಗಿ ಕಾಣುತ್ತದೆ. ಇದಕ್ಕೂ ನಿಮಗೆ ಸಮಸ್ಯೆಯೇ ಎಂದು ಪ್ರಶ್ನಿಸಿದ ಅವರು, ರೋಗಿಗಳ ಸಂಬಂಧಿಕರು ಬಂದಾಗ ಕುಳಿತುಕೊಂಡು ಊಟ ಮಾಡಲು ಒಂದೊಳ್ಳೆ ಜಾಗವಿಲ್ಲ. ಆದ್ದರಿಂದ ಜಾಗವನ್ನು ಗುರುತಿಸಿ ಅವರಿಗೆ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಿ ಎಂದರು. ಈ ವೇಳೆ ಡಾ.ಬಿ.ಜೆ.ಮಹೇಂದ್ರ ಅವರು ಜಾಗದ ಸಮಸ್ಯೆ ಎಂದಾಗ ಪ್ರತಿಕ್ರಿಯಿಸಿದ ಡಿಸಿ, ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿದರೆ ಜಾಗ ಸಿಗುತ್ತದೆ. ನಾನೇ ಸ್ಥಳವನ್ನು ತೋರಿಸುತ್ತೇನೆ ಬನ್ನಿ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ, ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ಸಿಎಒ ಜಾನ್ಸನ್, ಆರ್ಥಿಕ ಸಲಹೆಗಾರ್ತಿ ಲತಾ, ತಹಸೀಲ್ದಾರ್ ಕುಂಞ ಅಹಮದ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಇತರರಿದ್ದರು.