

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿಗೆ ಗುರುವಾರ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಎಂ.ನಳಿನಿಕುಮಾರಿ ಭೇಟಿ ನೀಡಿದರು.
ಮಿಮ್ಸ್‌ನ ಹೆರಿಗೆ ವಾರ್ಡ್‌ನಲ್ಲಿರುವ ಸಮಸ್ಯೆ ಸರಮಾಲೆ ಬಗ್ಗೆ ಸಾರ್ವಜನಿಕರೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅವರು, ಅಲ್ಲಿನ ಅವ್ಯವಸ್ಥೆಯ ದರ್ಶನ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾರಂಭದಲ್ಲಿ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಅವರು, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಕ್ಕಳೊಂದಿಗೆ ಆಟವಾಡುತ್ತಾ ಕೆಲವೊತ್ತು ಕಾಲಕಳೆದರು. ಇದಷ್ಟು ಹೊತ್ತಿನಲ್ಲಿ ಹೆರಿಗೆ ವಾರ್ಡ್‌ನ ಹಣೆಬರಹ ಬಯಲಾಯಿತು. ಶಿಥಿಲಗೊಂಡಿರುವ ಕಟ್ಟಡದ ಜತೆಗೆ ಮಳೆ ನೀರಿನಲ್ಲಿಯೇ ರೋಗಿ ಹಾಗೂ ಸಂಬಂಧಿಕರು ಇದ್ದರು. ಇತ್ತ ಸಿಬ್ಬಂದಿ ಮಾತ್ರ ಅಚ್ಚುಕಟ್ಟಾದ ಜಾಗದಲ್ಲಿ ಕುಳಿತು ಊಟ ಮಾಡುತ್ತಿರುವುದನ್ನು ಕಂಡ ಅವರು, ಚಿಕಿತ್ಸೆ ಪಡೆಯಲು ಬರುವವರಿಗೂ ಇಂತಹ ವ್ಯವಸ್ಥೆಯನ್ನೇ ಮಾಡಬೇಕು ಎಂದು ತಾಕೀತು ಮಾಡಿದರು.
ಮಿಮ್ಸ್ ನಿರ್ದೇಶಕ ಡಾ.ಎಂ.ಆರ್.ಹರೀಶ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಇದ್ದರು.