

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್) ಪಕ್ಕದ ತಮಿಳು ಕಾಲನಿ ಹಾಗೂ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಜಾಗಕ್ಕೆ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಪರಿಶೀಲನೆ ನಡೆಸಿದರು. ಅಂತೆಯೇ ಒತ್ತುವರಿ ಪತ್ತೆ ಮಾಡಲು ಗೂಗಲ್ ಸರ್ವೇ ಮಾಡಲು ತೀರ್ಮಾನಿಸಲಾಯಿತು.
ಮಿಮ್ಸ್‌ನಲ್ಲಿ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ವಶಕ್ಕೆ ಪಡೆಯಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಮಾತ್ರವಲ್ಲದೆ ಜು.1ರಂದು ಕನ್ನಡಿಗರ ಜಾಗೃತಿ ಜಾಥಾ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತಷ್ಟು ಒತ್ತುವರಿ ತೆರವುಗೊಳಿಸುವ ಸಂಬಂಧ ಕಂದಾಯ ಇಲಾಖೆ ಮುಂದಾಗಿದ್ದು, ಅದರ ಭಾಗವಾಗಿ ಇಂದು ಉಪ ವಿಭಾಗಾಧಿಕಾರಿ ಶಿವಮೂರ್ತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪವಿಭಾಗಧಿಕಾರಿ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಜಾಗವನ್ನು ಒಂದು ಸುತ್ತು ಸುತ್ತುಹಾಕುವ ಮೂಲಕ ಸ್ಥಳ ಸಮೀಕ್ಷೆ ನಡೆಸಿದರು. ಸುಮಾರು 18 ಎಕರೆ ಜಮೀನು ಒತ್ತುವರಿಯಾಗಿದ್ದು, ಸುಮಾರು ಎರಡು ನೂರು ಕೋಟಿ ರೂ.ಗೂ ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಮಿಮ್ಸ್ ನಿರ್ದೇಶಕ ಡಾ.ನರಸಿಂಹಮೂರ್ತಿ, ಪೌರಾಯುಕ್ತೆ ಪಂಪಶ್ರೀ ಇತರರಿದ್ದರು.
ಶೀಘ್ರವೇ ತೆರವುಗೊಳಿಸಿ: ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡರ ಬಣ) ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ ಮಾತನಾಡಿ, ಶೀಘ್ರ ತಮಿಳು ಕಾಲನಿ ನಿವಾಸಿಗಳನ್ನು ಸ್ಥಳಾಂತರ ಮಾಡುವುದರ ಜತೆಗೆ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ ಸಂಪೂರ್ಣ ಜಮೀನನ್ನು ವೈದ್ಯಕೀಯ ಕಾಲೇಜಿಗೆ ಹಸ್ತಾಂತರಿಸಬೇಕು. ಆ ಮೂಲಕ ಕಾಲೇಜಿನ ಅಭಿವೃದ್ಧಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸೇರಿ ಇತರೆ ಅತ್ಯಾಧುನಿಕ ಸೌಲಭ್ಯಗಳು ಜಿಲ್ಲೆಯ ಜನರಿಗೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಒಟ್ಟಾರೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳು ಮತ್ತು ಹೋರಾಟಗಾರರು ಈ ಜಾಗದ ಉಳಿವಿಗಾಗಿ ಕಾನೂನು ಹೋರಾಟ ಮಾಡಿದ್ದರು. ಅದರ ಫಲವಾಗಿ ತಮಿಳುಕಾಲೋನಿ ಸ್ಥಳಾಂತರಕ್ಕೆ ಈಗಾಗಲೇ ಚಿಕ್ಕಮಂಡ್ಯ ಸಮೀಪ 576 ಮನೆಗಳನ್ನು ನಿರ್ಮಿಸಲಾಗಿದೆ. ಶೀಘ್ರ ನಿವಾಸಿಗಳನ್ನು ಸ್ಥಳಾಂತರ ಮಾಡುವ ಸಾಧ್ಯತೆಗಳಿವೆ.