ಕೋಮಾದಿಂದ ಹೊರಬಾರದ ಕ್ಯಾನ್ಸರ್ ಆಸ್ಪತ್ರೆ: ಎರಡೂವರೆ ವರ್ಷದಿಂದ ಪರದಾಟ, ಇನ್ನೆಷ್ಟು ದಿನ ರೋಗಿಗಳ ವನವಾಸ

Cancer hospital problem Mandya
Published on

ಮಂಡ್ಯ: ಲಕ್ಷಾಂತರ ರೋಗಿಗಳಿಗೆ ಆಶ್ರಯವಾಗಬೇಕಿದ್ದ ಮಂಡ್ಯ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ ಕೋಮಾ ಸ್ಥಿತಿ ತಲುಪಿ ಎರಡೂವರೆ ವರ್ಷ ಕಳೆದಿದೆ. ಆದರೂ ಅದನ್ನು ಹೊರತರುವ ಪ್ರಕ್ರಿಯೆಗಳೇ ಆಗದಿರುವುದು ದುರಂತ.
ಮಂಡ್ಯ ಜಿಲ್ಲೆಗೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಹಿರಿಯ ರಾಜಕಾರಣಿಗಳಾಗಿದ್ದ ಡಾ.ಜಿ.ಮಾದೇಗೌಡ, ಕೆ.ಸಿಂಗಾರಿಗೌಡ, ಡಾ.ಕೆ.ಮರೀಗೌಡ ಸೇರಿದಂತೆ ಹಲವರ ಪ್ರಯತ್ನ ಫಲವಾಗಿ ಜಿಲ್ಲಾ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.5ರಂದು ಮಂಡ್ಯದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಪ್ರಾರಂಭಿಸಲಾಯಿತು. ಬೆಂಗಳೂರಿಗೆ ಮಂಡ್ಯ ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಅಲೆದಾಡಿಸುವುದನ್ನು ತಪ್ಪಿಸಲು ಇಂತಹದೊಂದು ಮಹತ್ವದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಯಿತು. ಅಂತೆಯೇ ಹಲವು ವರ್ಷ ಆಸ್ಪತ್ರೆಯಲ್ಲಿ ಉತ್ತಮ ಸೇವೆಯೂ ಸಿಗುತ್ತಿತ್ತು.
ಮಂಡ್ಯ, ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ತೀ.ನರಸೀಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಎರಡೂವರೆ ವರ್ಷದಿಂದ ಆಸ್ಪತ್ರೆಗೆ ಕಾಯಕಲ್ಪ ಸಿಗದೇ ಅವಸಾನದತ್ತ ಸಾಗಿರುವುದು ಅವಶ್ಯಕ ಯೋಜನೆಯೊಂದು ಹಳ್ಳ ಹಿಡಿಯುವಂತಾಗಿದೆ.
ಜಿಲ್ಲೆಯ ಗಣ್ಯರೆಲ್ಲರೂ ಸೇರಿದ ಕಾರಣಕ್ಕೆ ಅಂದು ದಾನಿಗಳು ಧಾರಾಳವಾಗಿ ದೇಣಿಗೆ ನೀಡಿದ್ದರು. ಜಿಲ್ಲಾ ಪಂಚಾಯಿತಿ 41 ಲಕ್ಷ ರೂ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮತ್ತು ಕಬ್ಬಿನ ಬೆಳೆಗಾರರು 15 ಲಕ್ಷ ರೂ, ಮೈಶುಗರ್ ಮತ್ತು ಕಬ್ಬಿನ ಬೆಳೆಗಾರರು 9 ಲಕ್ಷ ರೂ, ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತು ಕಬ್ಬಿನ ಬೆಳೆಗಾರರು 2.23 ಲಕ್ಷ ರೂ, ಜಿಲ್ಲಾ ಸರ್ಕಾರಿ ನೌಕರರು 10.75 ಲಕ್ಷ ರೂ, ನಗರಸಭೆ 2 ಲಕ್ಷ ರೂ, ಎಂಡಿಸಿಸಿ ಬ್ಯಾಂಕ್ ನೌಕರರು 1 ಲಕ್ಷ ರೂ, ಟಿಂಬರ್ ಅಸೋಸಿಯೇಷನ್‌ನಿಂದ 35 ಸಾವಿರ ರೂ, ಮದ್ದೂರು ಅಂಗನವಾಡಿ ಕಾರ್ಯಕರ್ತೆಯರು 42 ಸಾವಿರ ರೂ, ಚಿಕ್ಕಮಗಳೂರು ಇಂಜಿನಿಯರಿಂಗ್ ಕಾಲೇಜು ನೌಕರರು 18 ಸಾವಿರ ರೂ, ಎಪಿಎಂಸಿಎಸ್‌ನಿಂದ 57 ಸಾವಿರ ರೂ ನೀಡಲಾಗಿತ್ತು. ಇದನ್ನು ಬಳಸಿಕೊಂಡು ಕೇಂದ್ರ ಪ್ರಾರಂಭಿಸಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಅಂತೆಯೇ ರಮ್ಯಾ ಅವರು ಸಂಸದೆಯಾಗಿದ್ದ ವೇಳೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಯಂತ್ರೋಪಕರಣದೊಂದಿಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಯಿತು. ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಭಾಗವಾಗಿದ್ದ ಮಂಡ್ಯ ಕ್ಯಾನ್ಸರ್ ಆಸ್ಪತ್ರೆಗೆ 45 ಕೋಟಿ ರೂ ನೀಡಲು ನಿರ್ಧರಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಕೇಂದ್ರದಿಂದ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ 12 ಕೋಟಿ ರೂ ಬಿಡುಗಡೆಯಾಯಿತು. ಆದರೆ ಈ ಹಣದಿಂದ ಕಟ್ಟಡ ನಿರ್ಮಾಣ ಮಾಡದೇ ಸಿವಿಲ್ ಕಾಮಗಾರಿ ಮಾಡಿದ ಪರಿಣಾಮ 5.65 ಕೋಟಿ ರೂ ಹೆಚ್ಚುವರಿಯಾಯಿತು. ಈ ವೇಳೆ ಸಮರ್ಪಕ ದಾಖಲೆ ನೀಡದ ಕಾರಣಕ್ಕೆ ಅನುದಾನಕ್ಕೆ ಸರ್ಕಾರ ತಡೆ ನೀಡಿತು. ಅಂದಿನಿಂದಲೇ ಆಸ್ಪತ್ರೆಗೆ ಕಂಟಕ ಎದುರಾಯಿತು.

ಬೆಂಗಳೂರು, ಮೈಸೂರಿಗೆ ಅಲೆದಾಟ
ಸಾವಿರಾರೂ ಜನ ಕ್ಯಾನ್ಸರ್ ರೋಗಿಗಳಿಗೆ ವರವಾಗಿದ್ದ ಆಸ್ಪತ್ರೆಯ ಬಾಗಿಲು ಮುಚ್ಚುವ ಆತಂಕ ಎದುರಾಗಿದೆ. ಕಟ್ಟಡವಾಗದಿದ್ದರೂ ಒಂದಷ್ಟು ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಅದು ಕೂಡ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ.
ಮಾತ್ರವಲ್ಲದೆ ಕ್ಯಾನ್ಸರ್ ರೋಗಿಗಳು ಬಂದರೆ ಬೆಂಗಳೂರು ಮತ್ತು ಮೈಸೂರಿಗೆ ರವಾನಿಸುವ ಕೆಟ್ಟ ಚಾಳಿ ನಡೆಯುತ್ತಿದೆ. ಆದರೆ ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕನಿಷ್ಟ ಮಟ್ಟದಲ್ಲಿಯೂ ಸ್ಪಂದನೆ ಸಿಗದಿರುವುದು ವಿಪರ್ಯಾಸ. ಪ್ರತಿ ವಾರವೂ ರೋಗಕ್ಕೆ ಚಿಕಿತ್ಸೆ ಪಡೆಯಲು ಬೆಂಗಳೂರು, ಮೈಸೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಜನರು ಚಿಕಿತ್ಸೆಗೆ ಹಣ ಕೊಡುವುದಲ್ಲದೆ ದೂರದ ಪ್ರಯಾಣವನ್ನೂ ಮಾಡಬೇಕಿದೆ. ಇನ್ನು ಆರ್ಥಿಕವಾಗಿ ಹಿಂದುಳಿದವರ ಪಾಡು ಹೇಳತೀರದು. ಒಟ್ಟಾರೆ ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ರೂ ತೆರಿಗೆ ಹಣ ಈ ರೀತಿ ಪೋಲಾಗುತ್ತಿರುವುದು ಬೇಸರದ ವಿಷಯ.
ಆಸ್ಪತ್ರೆಗೆ 5.65 ಕೋಟಿ ರೂ ಬಿಡುಗಡೆ: ಅನುದಾನದ ಕೊರತೆಯಿಂದ ಮಿಮ್ಸ್ ಕ್ಯಾನ್ಸರ್ ಆಸ್ಪತ್ರೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಈ ಸಂಬಂಧ ಹಲವು ಬಾರಿ ಸಭೆಗಳನ್ನು ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಳಿಕ 5.65 ಕೋಟಿ ರೂ ಬಿಡುಗಡೆಯಾಗಿದೆ. ಇದರಿಂದ ಶೀಘ್ರದಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದ್ದರು. ಆದರೆ ಇನ್ನೂ ಕಾಮಗಾರಿ ಯಾವ ಹಂತದಲ್ಲಿದೆ ಎನ್ನುವುದೇ ತಿಳಿಯದಂತಾಗಿದೆ.

ಮಿಮ್ಸ್‌ನಲ್ಲಿ ಸಾಲುತ್ತಿಲ್ಲ ಸೌಲಭ್ಯ
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ನಲ್ಲಿ ಸಿಗುತ್ತಿರುವ ಸೌಲಭ್ಯ ಯಾವುದಕ್ಕೂ ಸಾಲದಂತಾಗಿದೆ. ಸೀರೋಗ ಮತ್ತು ಪ್ರಸೂತಿ ವಿಭಾಗ, ಮೂಳೆ, ವೈದ್ಯಶಾಸ, ಶಸಚಿಕಿತ್ಸೆ ಸೇರಿದಂತೆ ವಿವಿಧ ವಿಭಾಗಕ್ಕೆ ಪ್ರತಿನಿತ್ಯ 2 ರಿಂದ 3 ಸಾವಿರ ರೋಗಿಗಳ ಬರುತ್ತಾರೆ. ಆದರೆ ರೋಗಿಗಳ ಬೇಡಿಕೆಗೆ ಅನುಗುಣವಾಗಿ ಸೌಲಭ್ಯ ಸಿಗುತ್ತಿಲ್ಲ. ಪ್ರಸ್ತುತ 850 ಹಾಸಿಗೆ ವ್ಯವಸ್ಥೆ ಇದೆ. ಪ್ರತಿನಿತ್ಯ ಬರುವ ರೋಗಿಗಳ ಸಂಖ್ಯೆ ನೋಡಿದರೆ ಇಷ್ಟು ಯಾವುದಕ್ಕೂ ಸಾಲದು. ಇದಲ್ಲದೆ ವೈದ್ಯರು, ಸಿಬ್ಬಂದಿ ಕೊರತೆ ಕಾಡುತ್ತಿದೆ.
ಮಿಮ್ಸ್‌ಗೆ ರಾಮನಗರ, ತುಮಕೂರು, ಹಾಸನ, ಮೈಸೂರು ಭಾಗದಿಂದಲೂ ರೋಗಿಗಳು ಬರುತ್ತಾರೆ. ಅದರಲ್ಲಿಯೂ ಹೆರಿಗೆ ವಿಭಾಗಕ್ಕೆ ಬರುವವರ ಸಂಖ್ಯೆ ದುಪ್ಪಟ್ಟು. ಸೌಲಭ್ಯವಿಲ್ಲದ ಪರಿಣಾಮ ಒಂದೇ ಹಾಸಿಗೆಯನ್ನು ಇಬ್ಬರಿಗೆ ಕೊಡಬೇಕಿದೆ. ರಾಜ್ಯಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೈಸೂರು ಮತ್ತು ಬೆಂಗಳೂರಿಗೆ ಕೊಡುವಷ್ಟು ಮಹತ್ವವನ್ನು ಮಂಡ್ಯಕ್ಕೂ ಕೊಡಬೇಕಿದೆ. ಇಲ್ಲದಿದ್ದರೆ ದೊಡ್ಡಾಸ್ಪತ್ರೆಯ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದಿಲ್ಲ. ಇದಲ್ಲದೆ ವೈದ್ಯರು ಕರ್ತವ್ಯದ ಅವಧಿಯಲ್ಲಿ ಇರುವುದಿಲ್ಲ, ಔಷಧವನ್ನು ಹೊರಗೆ ತೆಗೆದುಕೊಳ್ಳುವಂತೆ ಚೀಟಿ ಕೊಡುತ್ತಾರೆನ್ನುವ ಗಂಭೀರ ಆರೋಪಗಳಿವೆ.

ಇಬ್ಬರು ಸಚಿವರ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ. ಮಿಮ್ಸ್‌ನ ಪ್ರಗತಿ ಪರಿಶೀಲನೆ ನಡೆಯಲಿದೆ. ಅದರಲ್ಲಿಯೂ ಕ್ಯಾನ್ಸರ್ ಆಸ್ಪತ್ರೆ ವಿಷಯವೂ ಇರಲಿದೆ. ಇನ್ನು ಮಿಮ್ಸ್‌ಗೆ ಅಗತ್ಯವಿರುವ ಸೌಲಭ್ಯದ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಗುವುದು.ಡಾ.ನರಸಿಂಹಸ್ವಾಮಿಮಿಮ್ಸ್ ನಿರ್ದೇಶಕ

ಕ್ಯಾನ್ಸರ್ ಆಸ್ಪತ್ರೆ ಸಮಸ್ಯೆ ಬಗೆಹರಿಸುವಂತೆ ನಮ್ಮ ಸಂಘಟನೆಯಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಣವನ್ನು ಬಿಡುಗಡೆ ಮಾಡಿತ್ತು. ಆದರೆ ಇನ್ನೂ ಯಾವುದೇ ಕಾಯಕಲ್ಪ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಸಚಿವರಿಗೆ ಮತ್ತೊಮ್ಮೆ ಮನವಿ ಸಲ್ಲಿಸುವುದರ ಜತೆಗೆ ಶೀಘ್ರದಲ್ಲೇ ಪ್ರತಿಭಟನೆ ನಡೆಸಲಾಗುವುದು.ಎಚ್.ಸಿ.ಮಂಜುನಾಥ್ಕನ್ನಡಸೇನೆ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net