

ಮಂಡ್ಯ: ದುರಾಡಳಿತ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಕೋಮಾ ಸ್ಥಿತಿ ತಲುಪಿದ ಮಂಡ್ಯ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಗೆ ಕಾಯಕಲ್ಪ ಸಿಗುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಕೆಲವೊಂದು ಬೆಳವಣಿಗೆಯೂ ನಡೆದಿದೆ. ಅದರಂತೆ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಬಿಡುಗಡೆ ಜತೆಗೆ ರೋಗಿಗಳಿಗೆ ಚಿಕಿತ್ಸೆ ನೀಡಲು ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಹಲವು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಕಾರ್ಯಕ್ರಮಕ್ಕೆ ಮರುಚಾಲನೆ ನೀಡುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತ್ತು ಶಾಸಕ ರವಿಕುಮಾರ್ ಗಣಿಗ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಅದರಂತೆ ಎಂಟು ವರ್ಷದಿಂದ ಸ್ಥಗಿತಗೊಂಡಿದ್ದ ಮಂಡ್ಯದಿಂದ ಕೌಡ್ಲೆವರೆಗಿನ ಹೆದ್ದಾರಿ ಕಾಮಗಾರಿಗೆ ಇತ್ತೀಚೆಗಷ್ಟೇ ಚಾಲನೆ ನೀಡಲಾಯಿತು. ಇನ್ನು ಬರೋಬರಿ 12 ವರ್ಷದಿಂದ ಬಗೆಹರಿಯದೇ ಉಳಿದುಕೊಂಡಿದ್ದ ಮಂಡ್ಯ ನಗರದ ನೀರಿನ ದರ ಪರಿಷ್ಕರಣೆಯೂ ಆಗಿದೆ. ಇದೀಗ ಕ್ಯಾನ್ಸರ್ ಆಸ್ಪತ್ರೆ ಸಮಸ್ಯೆಗೂ ಮುಕ್ತಿ ಸಿಗಲಿದೆ.
ಶೀಘ್ರ ಚಿಕಿತ್ಸೆ ಪ್ರಾರಂಭ: ಸುಮಾರು ಎರಡು ವರ್ಷದಿಂದ ಸ್ಥಗಿತಗೊಂಡಿರುವ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಮರು ಚಾಲನೆ ನೀಡಲು ಸಿದ್ಧತೆ ನಡೆಯುತ್ತಿದೆ. ಪ್ರಮುಖವಾಗಿ ಇರುವ ಕೇಂದ್ರದಲ್ಲಿಯೇ ಚಿಕಿತ್ಸೆ ಕೊಡಲು ತಜ್ಞ ವೈದ್ಯರ ಕೊರತೆ ಇತ್ತು. ಈ ಸಂಬಂಧ ತಜ್ಞ ವೈದ್ಯರನ್ನು ನಿಯೋಜನೆ ಮಾಡಿದ್ದು, ಅವರು ಕೆಲವೇ ದಿನದಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದಾದ ಬಳಿಕ ಅಗತ್ಯತೆ ತಕ್ಕಂತೆ ಸಿಬ್ಬಂದಿ ನೇಮಕ ಅಥವಾ ನಿಯೋಜನೆ ಪ್ರಕ್ರಿಯೆಯೂ ನಡೆಯಲಿದೆ. ಇನ್ನು ಬಾಕಿ ಇರುವ ಸಿವಿಲ್ ಕಾಮಗಾರಿ ಮಾಡಲು ರಾಜ್ಯಸರ್ಕಾರದಿಂದ ಸುಮಾರು 5 ಕೋಟಿ ರೂ ಅನುದಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸವೂ ಪ್ರಾರಂಭವಾಗಲಿದೆ.
ನಿರ್ಲಕ್ಷ್ಯಕ್ಕೊಳಗಾಗಿದ್ದ ಕ್ಯಾನ್ಸರ್ ಕೇಂದ್ರ: ಮಂಡ್ಯ ಜಿಲ್ಲೆಗೆ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಹಿರಿಯ ರಾಜಕಾರಣಿಗಳಾಗಿದ್ದ ಡಾ.ಜಿ.ಮಾದೇಗೌಡ, ಕೆ.ಸಿಂಗಾರಿಗೌಡ, ಡಾ.ಕೆ.ಮರೀಗೌಡ ಸೇರಿದಂತೆ ಹಲವರ ಪ್ರಯತ್ನ ಫಲವಾಗಿ ಜಿಲ್ಲಾ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.5ರಂದು ಮಂಡ್ಯದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು.
ಜಿಲ್ಲೆಯ ಗಣ್ಯರೆಲ್ಲರೂ ಸೇರಿದ ಕಾರಣಕ್ಕೆ ಅಂದು ದಾನಿಗಳು ಧಾರಾಳವಾಗಿ ದೇಣಿಗೆ ನೀಡಿದ್ದರು. ಜಿಲ್ಲಾ ಪಂಚಾಯಿತಿ 41 ಲಕ್ಷ ರೂ, ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮತ್ತು ಕಬ್ಬಿನ ಬೆಳೆಗಾರರು 15 ಲಕ್ಷ ರೂ, ಮೈಶುಗರ್ ಮತ್ತು ಕಬ್ಬಿನ ಬೆಳೆಗಾರರು 9 ಲಕ್ಷ ರೂ, ಪಾಂಡವಪುರ ಸಕ್ಕರೆ ಕಾರ್ಖಾನೆ ಮತ್ತು ಕಬ್ಬಿನ ಬೆಳೆಗಾರರು 2.23 ಲಕ್ಷ ರೂ, ಜಿಲ್ಲಾ ಸರ್ಕಾರಿ ನೌಕರರು 10.75 ಲಕ್ಷ ರೂ, ನಗರಸಭೆ 2 ಲಕ್ಷ ರೂ, ಎಂಡಿಸಿಸಿ ಬ್ಯಾಂಕ್ ನೌಕರರು 1 ಲಕ್ಷ ರೂ, ಟಿಂಬರ್ ಅಸೋಸಿಯೇಷನ್‌ನಿಂದ 35 ಸಾವಿರ ರೂ, ಮದ್ದೂರು ಅಂಗನವಾಡಿ ಕಾರ್ಯಕರ್ತೆಯರು 42 ಸಾವಿರ ರೂ, ಚಿಕ್ಕಮಗಳೂರು ಇಂಜಿನಿಯರಿಂಗ್ ಕಾಲೇಜು ನೌಕರರು 18 ಸಾವಿರ ರೂ, ಎಪಿಎಂಸಿಎಸ್‌ನಿಂದ 57 ಸಾವಿರ ರೂ ನೀಡಲಾಗಿತ್ತು. ಇದನ್ನು ಬಳಸಿಕೊಂಡು ಕೇಂದ್ರ ಪ್ರಾರಂಭಿಸಿ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಬೆಂಗಳೂರಿಗೆ ಅಲೆದಾಡಿಸುವುದನ್ನು ತಪ್ಪಿಸಲು ಇಂತಹದೊಂದು ಮಹತ್ವದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಯಿತು. ಅಂತೆಯೇ ಹಲವು ವರ್ಷ ಆಸ್ಪತ್ರೆಯಲ್ಲಿ ಉತ್ತಮ ಸೇವೆಯೂ ಸಿಗುತ್ತಿತ್ತು. ಮಾತ್ರವಲ್ಲದೆ ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಟಿ.ನರಸೀಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು.
ರಮ್ಯಾ ಅವರು ಸಂಸದೆಯಾಗಿದ್ದ ವೇಳೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಯಂತ್ರೋಪಕರಣದೊಂದಿಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಯಿತು. ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಭಾಗವಾಗಿದ್ದ ಮಂಡ್ಯ ಕ್ಯಾನ್ಸರ್ ಆಸ್ಪತ್ರೆಗೆ 45 ಕೋಟಿ ರೂ ನೀಡಲು ನಿರ್ಧರಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಕೇಂದ್ರದಿಂದ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ 12 ಕೋಟಿ ರೂ ಬಿಡುಗಡೆಯಾಯಿತು. ಆದರೆ ಈ ಹಣದಿಂದ ಕಟ್ಟಡ ನಿರ್ಮಾಣ ಮಾಡದೇ ಸಿವಿಲ್ ಕಾಮಗಾರಿ ಮಾಡಿದ ಪರಿಣಾಮ 5.65 ಕೋಟಿ ರೂ ಹೆಚ್ಚುವರಿಯಾಯಿತು. ಈ ವೇಳೆ ಸಮರ್ಪಕ ದಾಖಲೆ ನೀಡದ ಕಾರಣಕ್ಕೆ ಅನುದಾನಕ್ಕೆ ಸರ್ಕಾರ ತಡೆ ನೀಡಿತು. ಪರಿಣಾಮ ಮಹತ್ವದ ಯೋಜನೆಯೊಂದು ನಿರ್ಲಕ್ಷೃಕ್ಕೆ ಒಳಗಾಗುವಂತಾಯಿತು.
ಕಟ್ಟಡ ಪೂರ್ಣಗೊಳ್ಳದಿದ್ದರೂ ಒಂದಷ್ಟು ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಹಂತ ಹಂತವಾಗಿ ನಿಲ್ಲಿಸಲಾಯಿತು. ಮಾತ್ರವಲ್ಲದೆ ಕ್ಯಾನ್ಸರ್ ರೋಗಿಗಳು ಬಂದರೆ ಬೆಂಗಳೂರು ಮತ್ತು ಮೈಸೂರಿಗೆ ರವಾನಿಸುವ ಕೆಟ್ಟ ಚಾಳಿ ನಡೆಯುತ್ತಿದೆ. ಪ್ರತಿ ವಾರವೂ ರೋಗಕ್ಕೆ ಚಿಕಿತ್ಸೆ ಪಡೆಯಲು ಬೆಂಗಳೂರು, ಮೈಸೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಜನರು ಚಿಕಿತ್ಸೆಗೆ ಹಣ ಕೊಡುವುದಲ್ಲದೆ ದೂರದ ಪ್ರಯಾಣವನ್ನೂ ಮಾಡಬೇಕಿದೆ. ಇನ್ನು ಆರ್ಥಿಕವಾಗಿ ಹಿಂದುಳಿದವರ ಪಾಡು ಹೇಳತೀರದಂತಾಯಿತು.
ಗಮನಹರಿಸಿದ ಸಚಿವ ಸಿಆರ್‌ಎಸ್: ಕ್ಯಾನ್ಸರ್ ಕೇಂದ್ರದ ಅವ್ಯವಸ್ಥೆ ಸಂಬಂಧ ಸಾರ್ವಜನಿಕರು ನೀಡಿದ ದೂರಿನ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಗಮನಹರಿಸಿದರು. ಅದರಂತೆ ಕೆಲ ದಿನದ ಹಿಂದೆ ಮಿಮ್ಸ್‌ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದರು. ಜತೆಗೆ ಸರ್ಕಾರದಿಂದ ಆಗಬೇಕಿರುವ ಕೆಲಸವನ್ನು ತಮ್ಮ ಹಂತದಲ್ಲಿ ಮಾಡಿಸಿಕೊಡುವುದಾಗಿ ತಿಳಿಸಿದರು. ಇದೀಗ ಸಮಸ್ಯೆಗೆ ಮುಕ್ತಿ ಸಿಗುವ ಹಂತಕ್ಕೆ ಬಂದಿದೆ.
ಎಲ್ಲ ಅಂದುಕೊಂಡಂತಾಗಿದ್ದರೆ ಜನವರಿಯಲ್ಲಿ ಹೊಸ ಕಟ್ಟಡದಲ್ಲಿ ಚಿಕಿತ್ಸೆ ಪ್ರಾರಂಭವಾಗಬೇಕಿತ್ತು. ಆದರೆ ಕಾಮಗಾರಿ ಕಾರಣ ಸ್ವಲ್ಪ ದಿನ ಮುಂದಕ್ಕೆ ಹೋಗಲಿದೆ. ಈ ನಡುವೆ ಚಿಕಿತ್ಸೆ ಪ್ರಾರಂಭಕ್ಕೆ ಸಿದ್ಧತೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇನ್ನು ಕ್ಯಾನ್ಸರ್ ಕೇಂದ್ರ ಸೇರಿದಂತೆ ಮಿಮ್ಸ್‌ಗೆ ಅಗತ್ಯವಿರುವ ಸೌಲಭ್ಯದ ಬಗ್ಗೆ ಚರ್ಚಿಸಲು ಡಿ.14ರಂದು ಬೆಳಗಾವಿಯಲ್ಲಿ ಸಭೆ ಆಯೋಜಿಸಲಾಗಿದೆ. ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಹತ್ವದ ಚರ್ಚೆ ನಡೆಯಲಿದೆ.