

ಬೆಂಗಳೂರು: ಕೇಂದ್ರದ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಕಳೆದ ಎರಡು ವರ್ಷಗಳಿಂದ ಆಕಾಂಕ್ಷಿಗಳಿಂದ ಕೋಟ್ಯಂತರ ರೂ. ವಸೂಲಿ ಮಾಡಿದ್ದ ಬೆಂಗಳೂರಿನ ಓರ್ವ ಸೇರಿ ಮೂವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಅಜಯ್ ಕುಮಾರ್, ಜಾರ್ಖಂಡ್ ಮೂಲದ ಅಮನ್ ಕುಮಾರ್ ಅಲಿಯಾಸ್ ರೂಪೇಶ್ ಮತ್ತು ಬಿಹಾರ ಮೂಲಕ ವಿಶಾಲ್ ಅಲಿಯಾಸ್ ಅಭಿಷೇಕ್ ಸಿಂಗ್ ಬಂಧಿತರು. ಒಟ್ಟು 6 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಶುಕ್ರವಾರ ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು, ಅಂತಾರಾಜ್ಯ ನಕಲಿ ಉದ್ಯೋಗ ದಂಧೆಯನ್ನು ಬಯಲಿಗೆಳೆದು ಬಿಹಾರದ ಪಾಟ್ನಾ, ಮಹಾರಾಷ್ಟ್ರದ ಮುಂಬೈ, ಕರ್ನಾಟಕದ ಬೆಂಗಳೂರು, ಮಂಗಳೂರು ಮತ್ತು ಜಾರ್ಖಂಡ್‌ನ ಧನ್‌ಬಾದ್‌ನ ಒಂಬತ್ತು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಕಳೆದೆರಡು ವರ್ಷಗಳಿಂದ ಸರ್ಕಾರಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ಸಿದ್ದತೆ ನಡೆಸುತ್ತಿದ್ದ ಉದ್ಯೋಗ ಆಕಾಂಕ್ಷಿಗಳನ್ನು ಸಂಪರ್ಕಿಸುವ ದಂಧೆ ಕೋರರು ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ೧೦ ರಿಂದ ೨೦ ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿದ್ದರು. ಸಂಸ್ಕರಣಾ ಶುಲ್ಕ, ಭದ್ರತಾ ಠೇವಣೆ ಹೆಸರಿನಲ್ಲಿ ಅಭ್ಯರ್ಥಿಗಳಿಂದ ಕೆಲವೊಂದು ಕಂತುಗಳಲ್ಲಿಯೂ ಹಣ ವಸೂಲಿ ಮಾಡಿದ್ದಾರೆ.
ಖಾಸಗಿ ವ್ಯಕ್ತಿಗಳನ್ನು ಒಳಗೊಂಡ ಸಿಂಡಿಕೇಟ್‌ನ ಸದಸ್ಯರು ದೇಶದ ಅನೇಕ ನಗರಗಳಲ್ಲಿ ನಕಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಆಕಾಂಕ್ಷಿಗಳಿಗೆ ನಕಲಿ ತರಬೇತಿಗಳನ್ನು ನೀಡಿದ್ದಾರೆ. ಇದರಲ್ಲಿ ಸುಮಾರು ೨೫ ಉದ್ಯೋಗ ಆಕಾಂಕ್ಷಿಗಳಿಗೆ ನಕಲಿ ತರಬೇತಿಯನ್ನು ನೀಡಿ, ನಕಲಿ ನೇಮಕಾತಿ ಪತ್ರಗಳನ್ನು ನೀಡಲಾಗಿದೆ. ಎ್ಸಿಐ, ರೈಲ್ವೇ, ಜಿಎಸ್‌ಟಿ ಮುಂತಾದ ಕೇಂದ್ರ ಸೇರಿ ಸಕಿನಾಕಾ ತರಬೇತಿ ಕೇಂದ್ರದಲ್ಲಿ ಶೋಧ ನಡೆಸಿದಾಗ, ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಕರ್ನಾಟಕದವರು ಮತ್ತು ಕೆಲವರು ಮಹಾರಾಷ್ಟ್ರದವರು ಎಂದು ತಿಳಿದು ಬಂದಿದೆ. ನಕಲಿ ಕರೆ ಪತ್ರಗಳು, ನಕಲಿ ನೇಮಕಾತಿ ಪತ್ರಗಳು ಮತ್ತು ನಕಲಿ ತರಬೇತಿ ದಾಖಲೆಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ನೈಜತೆಯನ್ನು ಸಾಬೀತುಪಡಿಸಲು, ಸಿಂಡಿಕೇಟ್ ವಿವಿಧ ರಾಜ್ಯಗಳಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ಅವಧಿಗಳನ್ನು ನಡೆಸುತ್ತಿದೆ ಮಂಗಳೂರಿನಲ್ಲಿ ಪ್ರಮುಖ ಇಬ್ಬರು ಕಿಂಗ್‌ಪಿನ್ (ಆರೋಪಿಗಳು) ಉದ್ಯೋಗಾಕಾಂಕ್ಷಿಗಳಿಗಾಗಿ ಹೊಸ ನಕಲಿ ತರಬೇತಿ ಕೇಂದ್ರವನ್ನು ಸ್ಥಾಪಿಸಲು ತಯಾರಿ ನಡೆಸುತ್ತಿರುವುದು ಕಂಡುಬಂದಿದೆ. ಸದ್ಯ ಮೂವರನ್ನು ಬಂಧಿಸಲಾಗಿದೆ. ನಾಗ್ಪುರ (ಮಹಾರಾಷ್ಟ್ರ), ಧನ್‌ಬಾದ್ (ಜಾರ್ಖಂಡ್), ಪಾಟ್ನಾ ಮತ್ತು ಬಕ್ಸರ್ (ಬಿಹಾರ) ಮತ್ತು ಬೆಂಗಳೂರು (ಕರ್ನಾಟಕ) ಕಡೆಗಳಲ್ಲಿ ಆರೋಪಿಗಳು ಉದ್ಯೋಗಾಕಾಂಕ್ಷಿಗಳಿಗೆ ನಕಲಿ ತರಬೇತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಉದ್ಯೋಗ ಆಕಾಂಕ್ಷಿಗಳನ್ನು ಸಂಪರ್ಕಿಸಿ ಅವರಿಂದ ಹಣ ಪಡೆಯುವುದು ಇವರ ಪ್ರಮುಖ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.