ಲಕ್ಷಾಂತರ ರೂ. ಲಾಭ ತಂದ ಸಮಗ್ರ ಬೇಸಾಯ: ಗುಂಡ್ಲಹಳ್ಳಿ ಯುವ ರೈತ ಶೇಖರ್ ಸಾಧನೆ

Untitled design
ತೋರಣಗಲ್ ಹೋಬಳಿ ಗುಂಡ್ಲಹಳ್ಳಿಯಲ್ಲಿ ಕಲ್ಲಂಗಡಿ ಬೆಳೆಯೊಂದಿಗೆ ಯುವ ರೈತ ಶೇಖರ್.
Published on

ಸಂಡೂರು: ಮೆಟ್ರಿಕಿ ಗ್ರಾಪಂ ವ್ಯಾಪ್ತಿಯ ಗುಂಡ್ಲಹಳ್ಳಿ ಗ್ರಾಮದ ಯುವ ರೈತ ಶೇಖರ್, ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಲಾಭಗಳಿಸುವ ಮೂಲಕ ಮಾದರಿಯಾಗಿದ್ದಾರೆ.


ಬಿಬಿಎಂ ಪದವಿ ಮುಗಿಸಿರುವ ಶೇಖರ್, 25 ಎಕರೆ ಜಮೀನಿನಲ್ಲಿ ಪಪ್ಪಾಯ, ಕಲ್ಲಂಗಡಿ, ಟೊಮ್ಯಾಟೋ, ದಾಳಿಂಬೆ ಬೆಳೆದಿದ್ದು, ವೈಯಕ್ತಿಕ ಹಾಗೂ ಇಲಾಖೆ ಸಹಾಯಧನ ಪಡೆದು ಹನಿ ನೀರಾವರಿ ಮೂಲಕ ಉತ್ತಮ ಫಸಲು ತೆಗೆಯುತ್ತಿದ್ದಾರೆ.

ಲಕ್ಷಾಂತರ ರೂ. ಆದಾಯ ಗಳಿಸಿ ಹಲವು ರೈತರಿಗೆ ಮಾದರಿಯಾಗಿದ್ದಾರೆ. ಒಟ್ಟು 25 ಎಕೆರೆ ಪೈಕಿ 5 ಎಕರೆ ಪಪ್ಪಾಯ ಬೆಳೆಯಲ್ಲಿ ಅಂತರ ಬೆಳೆಯಾಗಿ ಕಲ್ಲಂಗಡಿ ಬೆಳೆದಿದ್ದಾರೆ.

ಎರಡ್ಮೂರು ಲಕ್ಷ ರೂ. ಖರ್ಚು ಮಾಡಿದ್ದು, ಸುಮಾರು 5 ಎಕರೆಯಲ್ಲಿ 72 ಟನ್ ಕಲ್ಲಂಗಡಿ ಬೆಳೆದು ರಾಜ್ಯವಲ್ಲದೆ ಮುಂಬೈ, ಬೇರೆೆ ರಾಜ್ಯಗಳಿಗೆ ಪ್ರತಿ ಟನ್‌ಗೆ 14 ಸಾವಿರ ರೂ.ರಂತೆ ಮಾರಾಟ ಮಾಡಿದ್ದಾರೆ.

ಇದರಿಂದ 11 ಲಕ್ಷ ರೂ. ಆದಾಯಗಳಿಸಿದ್ದಾರೆ. ಅಲ್ಲದೆ ಐದು ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದು, ಅದರಿಂದ ಕಳೆದ ವರ್ಷ 21 ಲಕ್ಷ ರೂ. ಗಳಿಸಿದ್ದಾರೆ. ಈ ವರ್ಷ ಬೆಲೆ ಉತ್ತಮವಾಗಿದ್ದಲ್ಲಿ 25 ಲಕ್ಷ ರೂ. ಆದಾಯ ಬರಬಹುದು ಎಂಬ ನಿರೀಕ್ಷೆ ಹೊಂದಿದ್ದಾರೆ.


ಇನ್ನು ಮೂರು ಎಕರೆಯಲ್ಲಿ ಟೊಮ್ಯಾಟೊ ಜತೆಗೆ ಉಳಿದ ಜಮೀನಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು ಬೆಳೆದು ಉತ್ತಮ ಲಾಭ ಗಳಿಸುತ್ತಿದ್ದಾರೆ. ಬೆಂಗಳೂರು, ಕೋಲಾರ, ಚಿತ್ರದುರ್ಗ ರೈತರಂತೆ ಸಮಗ್ರ ಬೇಸಾಯ ಪದ್ಧತಿಯಲ್ಲಿ 3 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದಾರೆ. ಈವರೆಗೆ 8 ಲಕ್ಷ ರೂ. ಆದಾಯಗಳಿಸಿದ್ದಾರೆ.

ಇನ್ನ್ನೆರಡು ತಿಂಗಳು ಕಟಾವು ಮಾಡಿ ಅಧಿಕ ಲಾಭ ನಿರೀಕ್ಷೆಯಲ್ಲಿದ್ದಾರೆ. ಪ್ರತಿದಿನ 230-250 ಬಾಕ್ಸ್ ಮಾರಾಟ ಮಾಡಲಾಗುತ್ತಿದೆ. ಕೋಲಾರ, ಬೆಂಗಳೂರಿಗೆ ಹೋದರೆ ಹೆಚ್ಚು ಲಾಭ ಬರುತ್ತದೆ.

ಆದರೆ, ಒಂದೇ ದಿನದಲ್ಲಿ ಹೋಗಿ ಬರಲಾಗುವುದಿಲ್ಲ. ಹೀಗಾಗಿ ಚಳ್ಳೆಕೆರೆ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿ ಸಂಜೆ ವಾಪಸ್ ಬರುತ್ತೇನೆ. ಸದ್ಯ ಒಂದು ಬಾಕ್ಸ್‌ಗೆ 460 ರೂ. ಬೆಲೆ ಇದೆ ಎನ್ನುತ್ತಾರೆ ಶೇಖರ್.

ಹೊಸ ಪದ್ಧತಿ ಅಳವಡಿಕೆ

ಪಪ್ಪಾಯ ಬೆಳೆಯಲ್ಲಿ ಕಲ್ಲಂಗಡಿಯನ್ನು ಅಂತರ ಬೆಳೆಯಾಗಿ ಬೆಳೆದಿರುವ ಶೇಖರ್, ನೂತನ ಬೇಸಾಯ ಪದ್ಧತಿಗಳಾದ ಹನಿ ನೀರಾವರಿ, ರಸಾವರಿ ಪದ್ದತಿ ಮತ್ತು ಪ್ಲಾಸ್ಲಿಕ್ ಹೊದಿಕೆ ಬಳಸುವ ಮೂಲಕ ನೀರಿನ ಉಳಿತಾಯ ಮಾಡುವುದರ ಜತೆಗೆ ಅತಿ ಕಡಿಮೆ ಕೂಲಿ ವೆಚ್ಚದಲ್ಲಿ ಉತ್ತಮ ಇಳುವರಿ ಹಾಗೂ ದ್ವಿಗುಣ ಆದಾಯಗಳಿಸಿದ್ದಾರೆ.

ಬೆಳೆಯ ಪ್ರತಿ ಹಂತದಲ್ಲೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದಿದ್ದಾರೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದೊಂದಿಗೆ ಕಲ್ಲಂಗಡಿ, ಟೊಮ್ಯಾಟೊ, ದಾಳಿಂಬೆ. ಪಪ್ಪಾಯ ಬೆಳೆದು ಉತ್ತಮ ಇಳುವರಿ, ಲಾಭ ಪಡೆದಿದ್ದಾರೆ.

ಹನಿ ನೀರಾವರಿ, ಪ್ಲಾಸ್ಟಿಕ್ ಹೊದಿಕೆ, ಉದ್ಯೋಗ ಖಾತ್ರಿ ಯೋಜನೆಗಳಿಂದ ರೈತ ಶೇಖರ್ ಮೂರು ಲಕ್ಷ ರೂ. ಸಹಾಯಧನ ಪಡೆದು ಉತ್ತಮ ಇಳುವರಿ ಪಡೆದಿದ್ದಾರೆ. ಬೆಳೆಗಳಿಗೆ ರೋಗ ಬಂದಾಗ ಸಿಂಪಡಿಸಬೇಕಾದ ಔಷಧಗಳ ಬಗ್ಗೆ ಸಲಹೆ ಪಡೆದಿದ್ದಾರೆ. ಕೃಷಿಯಲ್ಲಿ ಸಾಧನೆ ಮಾಡಿ ಹಲವರಿಗೆ ಮಾದರಿಯಾಗಿದ್ದಾರೆ.ಹನುಮಪ್ಪ ನಾಯಕ,ಎಡಿ, ತೋಟಗಾರಿಕೆ ಇಲಾಖೆ, ಸಂಡೂರು ಈ ಮೊದಲು 25 ಎಕರೆಯಲ್ಲಿ ಆದಾಯ ನೀಡದ ಬೆಳೆ ಬೆಳೆದು ಕೈಸುಟ್ಟುಕೊಂಡಿದ್ದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಹಾಯಧನದಿಂದ ಉತ್ತಮ ಇಳುವರಿ ಹಾಗೂ ಲಾಭ ಪಡೆಯಲು ಸಾಧ್ಯವಾಗಿದೆ.ಶೇಖರ್,ಯುವರೈತ, ಗುಂಡ್ಲಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net