ದೀಪದಾರತಿಗೆ ಲಕ್ಷಾಂತರ ಭಕ್ತರು ಸಾಕ್ಷಿ

11 TNP Deepadarathi 1
ತಿ.ನರಸೀಪುರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮಂಗಳವಾರ ರಾತ್ರಿ ತ್ರಿವೇಣಿ ಸಂಗಮದಲ್ಲಿ ವಾರಾಣಸಿಯಿಂದ ಬಂದಿದ್ದ ಆಗಮಿಕರು ಮತ್ತು ವೈದಿಕರ ತಂಡ ದೀಪದಾರತಿ ನೆರವೇರಿಸಿದರು.
Published on

ತಿ.ನರಸೀಪುರ: ಝಗಮಗಿಸುವ ವಿದ್ಯುತ್ ದೀಪಾಲಂಕಾರ ನಡುವೆ ಕಂಗೊಳಿಸುತ್ತಿರುವ ತ್ರಿವೇಣಿ ಸಂಗಮದ ಕುಂಭಮೇಳದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಕಾವೇರಿ ಮಾತೆಗೆ ದೀಪದಾರತಿ ಲಕ್ಷಾಂತರ ಜನರನ್ನು ಆಕರ್ಷಿಸಿತು.

ವಾರಣಾಸಿ ಗಂಗಾರತಿ ಮಾದರಿಯಲ್ಲಿಯೇ ದಕ್ಷಿಣ ಪ್ರಯಾಗ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ನಡೆಯುತ್ತಿರುವ ಕುಂಭಮೇಳದಲ್ಲಿಯೂ ಜೀವನದಿ ಕಾವೇರಿಗೆ ದೀಪದಾರತಿಯನ್ನು ನೆರವೇರಿಸಲಾಯಿತು. ತಂಪಾದ ನದಿ ಪಾತ್ರದಲ್ಲಿ ಕತ್ತಲಿನಲ್ಲಿ ಆಕರ್ಷಣೀಯವಾಗಿ ಕಂಗೊಳಿಸಿದ ದೀಪದ ಆರತಿಯನ್ನು ನೆರೆದಿದ್ದ ಲಕ್ಷಾಂತರ ಜನರು ಕಣ್ತುಂಬಿಕೊಂಡರು.

ಸಂಜೆಯ ವೇಳೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತ್ರಿವೇಣಿ ಸಂಗಮಕ್ಕೆ ಆಗಮಿಸಿದ ವಿವಿಧ ಮಠಾಧೀಶರು ಯಾಗ ಮಂಟಪದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೀಪದಾರತಿಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ವಾರಾಣಸಿಯಿಂದ ಆಗಮಿಸಿದ್ದ ಆಗಮಿಕರು ಮತ್ತು ವೈದಿಕರ ತಂಡ ಅಚ್ಚುಕಟ್ಟಾಗಿ ದೀಪದಾರತಿ ಕಾರ್ಯವನ್ನು ನೆರವೇರಿಸಿದರು. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಖುದ್ದು ಹಾಜರಿದ್ದು, ಸಂಭ್ರಮದ ದೀಪದಾರತಿಗೆ ಸಾಕ್ಷಿಯಾದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮಿಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ಕೈಲಾಸ ಆಶ್ರಮಠದ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net