

ನೆಲಮಂಗಲ: ಸಾರಿಗೆ ಇಲಾಖೆಗೆ ಲಕ್ಷಾಂತರ ರೂ. ತೆರಿಗೆ ವಂಚಿಸಿ ಕಳ್ಳ ದಾರಿಯಲ್ಲಿ ಓಡಾಡುತ್ತಿದ್ದ ಹೊರರಾಜ್ಯದ 6 ಖಾಸಗಿ ಬಸ್‌ಗಳನ್ನು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಆರ್‌ಟಿಒ ಅಧಿಕಾರಿಗಳು ಹಿಡಿದಿದ್ದು, ಬರೋಬ್ಬರಿ 41 ಲಕ್ಷ ರೂ. ದಂಡ ವಿಧಿಸಿದ್ದಾರೆ.
ಜಪ್ತಿ ಮಾಡಿರುವ ಬಸ್‌ಗಳಲ್ಲಿ ಕೆಲವು ಒಂದೇ ನೋಂದಣಿ ಫಲಕವನ್ನು ಅಳವಡಿಸಿಕೊಂಡು ಓಡಾಡಿದರೆ ಮತ್ತೆ ಕೆಲವು ಬೆಂಗಳೂರಿಗೆ ಬಂದರೆ ತೆರಿಗೆ ವಂಚನೆ ಬಯಲಾಗುತ್ತದೆಂಬ ಭಯದಿಂದ ಹೊರವಲಯದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದ ವಿಚಾರವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಖಾಸಗಿ ಬಸ್‌ಗಳ ಕಳ್ಳಾಟ ಹಾಗೂ ಅವುಗಳನ್ನು ಹಿಡಿಯಲು ಆರ್‌ಟಿಒ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯ ಕುರಿತು ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿ ಬಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್ ಮಾಹಿತಿ ನೀಡಿದರು. ಜಪ್ತಿ ಮಾಡಿರುವ ಬಸ್‌ಗಳ ಚಾಸ್ಸಿ ನಂಬರ್ ಹಾಗೂ ಬಸ್ ನೋಂದಣಿ ನಂಬರ್‌ಗಳಲ್ಲೂ ವ್ಯತ್ಯಾಸ ಕಂಡು ಬಂದಿದ್ದು, ಅಸಲಿ ಮಾಲೀಕರನ್ನು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾಗಿದ್ದಾರೆ.
ಸಾರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಟಿ.ಹಾಲಸ್ವಾಮಿ, ಓಂಕಾರೇಶ್ವರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ, ಹಿರಿಯ ಮೋಟಾರು ನಿರೀಕ್ಷಕ ಎಚ್.ರಾಜಣ್ಣ, ಎಂ.ಎನ್.ಸುಧಾಕರ್, ಡಾ.ಡಿ.ಎಸ್.ಓಡೆಯರ್, ಕೃಷ್ಣಾನಂದ್, ಶಿವಪ್ರಸಾದ್ ಮತ್ತಿತರರು ಕಾರ್ಯಾಚರಣೆ ತಂಡದಲ್ಲಿದ್ದರು.
ಬೆಂಗ್ಳೂರಿಗೆ ಬರದೆ ತೆರಿಗೆ ಚೀಟ್!: ನ.18ರಂದು ಜೋಧಪುರ ಟು ಬೆಂಗಳೂರಿಗೆ ಓಡಾಡುವ ಆರ್‌ಜೆ-19ಪಿಸಿ 3131 ಸ್ಲೀಪರ್ ಕೋಚ್ ಬಸ್ ದಾಬಸ್‌ಪೇಟೆ-ನೆಲಮಂಗಲ ನಡುವಿನ ಡಾಬಾ ಬಳಿ ನಿಂತಿತ್ತು. ಇದನ್ನು ಗಮನಿಸಿದ ಆರ್‌ಟಿಒ ಅಧಿಕಾರಿಗಳು ನಂಬರ್ ಪರಿಶೀಲಿಸಿದಾಗ ಅ.31ಕ್ಕೆ ರಹದಾರಿ ಮತ್ತು ತೆರಿಗೆ ಪಾವತಿ ಅವಧಿ ಮುಗಿದಿತ್ತು. ಬಳಿಕ ವಾರ್ಷಿಕ 6.4 ಲಕ್ಷ ತೆರಿಗೆ ಪಾವತಿಸುವ ಬದಲು ತ್ರೈಮಾಸಿಕ ಕಟ್ಟಿರುವುದಾಗಿ ದಾಖಲೆ ಸೃಷ್ಟಿಸಿದ್ದರು. ಬೆಂಗಳೂರಿನ ಒಳಗೆ ಪ್ರವೇಶಿಸಿದರೆ ಸಿಕ್ಕಿಬೀಳುವ ಭಯದಿಂದ ಹೊರವಲಯದಲ್ಲೇ ನಿಲ್ಲಿಸಿ ಅಲ್ಲಿಂದ ಇನ್ನೊಂದು ವಾಹನದಲ್ಲಿ ಪ್ರಯಾಣಿಕರನ್ನು ಕಳುಹಿಸಿಕೊಡುತ್ತಿದ್ದರು. ಅದೇ ರೀತಿ ಬುಕ್ ಮಾಡಿದ ಪ್ರಯಾಣಿಕರನ್ನು ನಗರದ ಒಳಗಿಂದ ಬೇರೆ ವಾಹನದಲ್ಲಿ ಕರೆದುಕೊಂಡು ನೆಲಮಂಗಲದಿಂದ ಜೋಧಪುರಕ್ಕೆ ಕರೆದೊಯ್ಯುತ್ತಿದ್ದರು. ಬಸ್ ಜಪ್ತಿ ಮಾಡಿ ದಂಡ ಹಾಕಲಾಗಿದೆ.
ಒಂದೇ ನಂಬರ್ ಹಲವು ಬಸ್: ಜೋಧಪುರ ಬಸ್ ಜಪ್ತಿ ಕಾರ್ಯಾಚರಣೆಯಲ್ಲಿದ್ದ ಅಧಿಕಾರಿಗಳಿಗೆ ಆನಂದ್ ಟ್ರಾನ್ಸ್ ಲಿಂಕ್ ಹೆಸರಿನ ಎನ್‌ಎಲ್01ಬಿ1794 ನಂಬರ್ ಬಸ್ ಕಣ್ಣಿಗೆ ಬಿದ್ದಿದೆ. ಆದರೆ, ಇದೇ ನಂಬರ್‌ನ ಬಸ್ಸನ್ಸು ತೆರಿಗೆ ಪಾವತಿಸದ ಕಾರಣಕ್ಕೆ ಈ ಮೊದಲೇ ಜಪ್ತಿಯಾಗಿತ್ತು. ಆ ನೋಂದಣಿ ಸಂಖ್ಯೆಯನ್ನೇ ಅಳವಡಿಸಿಕೊಂಡು ಇನ್ನೊಂದು ಬಸ್ ಓಡಾಡುತ್ತಿರುವ ವಿಚಾರ ಗೊತ್ತಾಗಿ ತನಿಖೆ ಮುಂದುವರಿಸಿ ಅಧಿಕಾರಿಗಳು, ಹೊಸೂರು ರಸ್ತೆ ಡೇರಿ ವೃತ್ತದ ಬಳಿ ಇನ್ನೊಂದು ಬಸ್ ಜಪ್ತಿ ಮಾಡಿದ್ದಾರೆ. ನಂತರ ಎನ್‌ಎಲ್ 01ಬಿ1797 ಹಾಗೂ ಎನ್‌ಎಲ್ 01ಬಿ1795 ಬಸ್‌ಗಳನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ತೆರಿಗೆ ಕಟ್ಟದೆ ಓಡಾಡುತ್ತಿದ್ದ ಜಿಜೆ03ಬಿವಿ9015 ಸಂಖ್ಯೆಯ ಬಸ್ಸನ್ನೂ ಜಪ್ತಿ ಮಾಡಿ 6 ಬಸ್‌ಗಳ ಮೇಲೆ 41 ಲಕ್ಷ ದಂಡ ಹಾಕಿದ್ದಾರೆ.