

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯವು ಸೆ. 9ರಿಂದ 12ರವರೆಗೆ ಕೃಷಿ ಮೇಳವನ್ನು ಆಯೋಜಿಸಲಿದೆ. ಕೃಷಿ ವಿವಿಯ ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ ಸಿಹಿ ಮತ್ತು ಖಾರದ ಖಾದ್ಯಗಳ ಸ್ಪರ್ಧೆಯನ್ನು ಆ. 11ರಂದು ಬೆಳಗ್ಗೆ 10 ಗಂಟೆಗೆ ಆಹಾರ ಮತ್ತು ಪೋಷಣಾ ವಿಭಾಗದಲ್ಲಿ ಏರ್ಪಡಿಸಲಾಗಿದೆ.
ಆಸಕ್ತ ಮಹಿಳೆಯರು ಸಿರಿಧಾನ್ಯ ಆಧಾರಿತ ಸಿಹಿ ಅಥವಾ ಖಾರದ ತಿಂಡಿ- ತಿನಿಸಿನೊಂದಿಗೆ, ಅದನ್ನು ತಯಾರಿಸುವ ವಿವರವಾದ ವಿಧಾನದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ತಿಂಡಿಯ ಪೌಷ್ಠಿಕತೆ, ರುಚಿ ಹಾಗೂ ವಿಷಯ ಮಂಡಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುವುದು. ಆಸಕ್ತರು ಆ. 10ರೊಳಗೆ ಕೃಷಿ ವಿವಿಯ ಸಮುದಾಯ ವಿಜ್ಞಾನ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಮೊದಲು ನೋಂದಾಯಿಸಿದ ೨೫ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ. ವಿಜೇತರಿಗೆ ಕೃಷಿ ಮೇಳದಲ್ಲಿ ಸ್ಮರಣಿಕೆ, ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿಸ್ತರಣಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.