

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಕನಿಷ್ಟ ಬೆಂಬಲ ಯೋಜನೆಯಡಿ ನೋಂದಾಯಿತ ರೈತರಿಂದ ರಾಗಿ ಖರೀದಿ ಪ್ರಕ್ರಿಯೆಗೆ ಮಾ.1 ರಿಂದ ಜಿಲ್ಲೆಯಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಇದುವರೆಗೆ ಜಿಲ್ಲೆಯ ನಾಲ್ಕೂ ರಾಗಿ ಖರೀದಿ ಕೇಂದ್ರಗಳಲ್ಲಿ ಶೇ.73 ರಾಗಿ ಖರೀದಿಯಾಗಿದೆ.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಇದುವರೆಗೆ 25585 ರೈತರು ಹೆಸರು ನೋಂದಣಿ ಮಾಡಿಕೊಂಡಿದ್ದು, 18697 ರೈತರು ರಾಗಿ ಮಾರಾಟಮಾಡಿದ್ದಾರೆ. ಇದುವರೆಗೆ 26,4217 ಕ್ವಿಂಟಾಲ್ ರಾಗಿ ದಾಸ್ತಾನು ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ 13143 ರೈತರು ನೋಂದಣಿ ಮಾಡಿಕೊಂಡಿದ್ದು 186,094 ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದು ಜಿಲ್ಲೆಯಲ್ಲಿ ಹೆಚ್ಚು ರಾಗಿ ಮಾರಾಟ ಮಾಡಿದ್ದಾರೆ. ನಂತರದಲ್ಲಿ ನೆಲಮಂಗಲ ತಾಲೂಕಿನ 6597 ರೈತರು ನೋಂದಣಿ ಮಾಡಿಕೊಂಡಿದ್ದು 95,314 ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದಾರೆ. ದೇವನಹಳ್ಳಿ ಭಾಗದಲ್ಲಿ 4469 ರೈತರು ನೋಂದಣಿಯಾಗಿದ್ದು 60,425 ಕ್ವಿಂಟಾಲ್ ಹಾಗೂ ಕೊನೆಯ ಸ್ಥಾನದಲ್ಲಿ ಹೊಸಕೋಟೆ ಇದ್ದು 1376 ರೈತರ ನೋಂದಣಿಯಲ್ಲಿ 19,692 ಕ್ವಿಂಟಾಲ್‌ನಷ್ಟು ರಾಗಿ ಸಂಗ್ರಹಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಶೇ.76 ರಾಗಿ ಖರೀದಿಯಾಗಿದ್ದು, ದೇವನಹಳ್ಳಿಯಲ್ಲಿ ಶೇ.69 ರಾಗಿ ಸಂಗ್ರಹಿಸಲಾಗಿದೆ.
ರಾಗಿ ಮಾರಾಟದಲ್ಲಿ ಏರಿಳಿತ: 2022-23ರಲ್ಲಿ 30815 ರೈತರು ನೋಂದಾಯಿಸಿಕೊಂಡಿದ್ದು 433188 ಕ್ವಿಂಟಾಲ್ ರಾಗಿ ಖರೀದಿಲಾಗಿತ್ತು. 2023-24ರಲ್ಲಿ ಕಡಿಮೆ ನೋಂದಣಿಯಾಗಿತ್ತು 13630 ರೈತರ ನೋಂದಣಿಯಲ್ಲಿ 235962 ಕ್ವಿಂಟಾಲ್ ಸಂಗ್ರಹಿಸಲಾಗಿತ್ತು, ಕಳೆದ ಮೂರು ವರ್ಷದ ಅವಧಿಯಲ್ಲಿ ಮೊದಲಿಗೆ ಹೆಚ್ಚಿನ ರೈತರು ಹೆಸರು ನೋಂದಾಯಿಸಿಕೊಂಡಿದ್ದರು ಅದೇ ರೀತಿ ಹೆಚ್ಚು ರಾಗಿ ಖರೀದಿಲಾಗಿತ್ತು, ನಂತರದ ವರ್ಷದಲ್ಲಿ ಕಡಿಮೆ ರೈತರ ನೋಂದಣಿಯಿಂದಾಗಿ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಈ ಬಾರಿ ಎರಡು ವರ್ಷದ ಹಿಂದಿಗಿಂತ ಕಡಿಮೆ ರೈತರು ನೋಂದಣಿಯಾಗಿದ್ದಾರೆ ಆದರೆ ಕಳೆದ ವರ್ಷಕ್ಕಿಂತ ಹೆಚ್ಚು ರಾಗಿ ಸಂಗ್ರಹಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಖಾಸಗಿಯಾಗಿಯೂ ಮಾರಾಟ!: ನೋಂದಾಯಿಸಿಕೊಂಡ ರೈತರು ಕಡ್ಡಾಯವಾಗಿ ರಾಗಿ ನೀಡಬೇಕು ಎಂಬ ನಿಯಮವಿಲ್ಲ ಅಥವಾ ಇಷ್ಟೇ ಪ್ರಮಾಣ ನೀಡಬೇಕು ಎಂಬುದು ಕಡ್ಡಾಯವಾಗಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ರಾಗಿ ಖರೀದಿಯಾಗಲಿದೆ ಎಂಬ ಅಂಕಿ ಅಂಶ ದೊರಕಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನ್ಯಧ್ಯೆ ರಾಗಿಗೆ ಉತ್ತಮ ಬೇಡಿಕೆ ಇರುವುದರಿಂದ ಬೆಂಬಲ ಬೆಲೆಗಿಂತ ಹೆಚ್ಚಿನ ದರದಲ್ಲಿ ಖಾಸಗಿಯಾಗಿ ರೈತರು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಾಗಿ ಖರೀದಿ 30 ಕ್ವಿಂಟಾಲ್ಗೆ ಹೆಚ್ಚಳ ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿತ ರೈತರಿಂದ ರಾಗಿ ಖರೀದಿಸುವ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಖರೀದಿ ಕೇಂದ್ರಗಳಿಗೆ ಇನ್ನೂ ರಾಗಿ ನೀಡದ ರೈತರಿಂದ ಮಾತ್ರ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ 30 ಕ್ವಿಂಟಾಲ್ ರಾಗಿಯನ್ನು ಖರೀದಿ ಮಾಡಲಾಗುವುದು, ರಾಗಿ ಖರೀದಿ ಪ್ರಕ್ರಿಯೆಗೆ ಮಾ.1 ರಿಂದ ಚಾಲನೆ ನೀಡಲಾಗಿದ್ದು ಜೂ.30 ರವರೆಗೆ ರಾಗಿ ಖರೀದಿ ಪ್ರಕ್ರಿಯೆ ಅವಧಿ ವಿಸ್ತರಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ನೋಂದಾಯಿತ ರೈತರು ಸಂಬಂಧಪಟ್ಟ ತಾಲೂಕುಗಳ ಖರೀದಿ ಕೇಂದ್ರಗಳಿಗೆ ರಾಗಿಯನ್ನು ನಿಯಮಾನುಸಾರ ನೀಡಬಹುದಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2024-25 ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ತೆರೆದು, ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆಗಳನ್ನು ಪಡೆದು ನೋಂದಾಯಿಸಿಕೊಳ್ಳಲಾಗಿದೆ.
ಸಂಪರ್ಕಿಸಬಹುದು:
ರಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಖರೀದಿ ಏಜೆನ್ಸಿಯಾದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಖರೀದಿ ಅಧಿಕಾರಿಗಳನ್ನು ನೇಮಿಸಲಾಗಿದೆ. ನೆಲಮಂಗಲ ತಾಲೂಕು ಖರೀದಿ ಅಧಿಕಾರಿ ನಾರಾಯಣಮೂರ್ತಿ 9482991630, ದೊಡ್ಡಬಳ್ಳಾಪುರ ಎಚ್.ಎನ್.ನಾರಾಯಣ್ 9886141435, ದೇವನಹಳ್ಳಿ ಎಂ.ಅಚ್ಯೂತ್ 9900136687, ಹೊಸಕೋಟೆ ಲಕ್ಷ್ಮೀ ನಾರಾಯಣ 9880700975 ಅವರನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಮಾ.3ರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ, ಜೂ.30ರವರೆಗೆ ಅವಕಾಶವಿದೆ. ಇದುವರೆಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ 25585 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದುವರೆಗೆ 264217 ಲಕ್ಷ ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. ನೋಂದಾಯಿಸಿಕೊಂಡ ರೈತರ ಆಧಾರ ಮೇಲೆ 361524 ಕ್ವಿಂಟಾಲ್ ಸಂಗ್ರಹವಾಗುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಗುರಿ ಮುಟ್ಟುವ ನಿರೀಕ್ಷೆ ಇದೆ.
ಶಂಕರ್‌ಮೂರ್ತಿ, ಉಪನಿರ್ದೇಶಕ ಆಹಾರ ಇಲಾಖೆ ಬೆಂ.ಗ್ರಾಮಾಂತರ