

ಮೈಸೂರು: ಸಹಜ ಸಮೃದ್ಧ ಸಂಸ್ಥೆಯು ಆ.26 ರಿಂದ 27ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ನಗರದ ನಂಜರಾಜಬಹದ್ದೂರ್ ಛತ್ರದಲ್ಲಿ ಸಿರಿಧಾನ್ಯ ಮೇಳ ಹಮ್ಮಿಕೊಂಡಿದ್ದು, 250ಕ್ಕೂ ಹೆಚ್ಚಿನ ಸಿರಿಧಾನ್ಯಗಳ ತಳಿಗಳು ಪ್ರದರ್ಶನಗೊಳ್ಳಲಿವೆ.
ಎರಡು ದಿನಗಳ ಸಿರಿಧಾನ್ಯ ಮೇಳಕ್ಕೆ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು. ನಟಿ ಯಮುನಾ ಶ್ರೀನಿಧಿ ಅವರು ರಾಗಿ ಪೋಸ್ಟರ್ ಬಿಡುಗಡೆ ಮಾಡುವರು. ರಾಜ್ಯದ ವಿವಿಧ ರೈತ ಗುಂಪುಗಳು ಸಿರಿಧಾನ್ಯ, ಅಕ್ಕಿ ಹಾಗೂ ಮೌಲ್ಯವರ್ಧಿತ ತಿನಿಸುಗಳನ್ನು ಪ್ರದರ್ಶಿಸಲಿದ್ದಾರೆ. ಜಾಖರ್ಂಡ್, ಒಡಿಶಾ, ಛತ್ತೀಸಗಢ, ಮಧ್ಯಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯದ ಸಿರಿಧಾನ್ಯ ಬೆಳೆಗಾರರ ಗುಂಪುಗಳು ಭಾಗಿಯಾಗಲಿವೆ. ಮಧ್ಯಪ್ರದೇಶದ ಬೈಗಾ ಸಮುದಾಯದ ಸಿಖಿಯಾ, ನಾಗಾಲ್ಯಾಂಡಿನ ಅಪರೂಪದ ಜಾಬ್ ಟಿಯರ್ಸ್ ಸಿರಿಧಾನ್ಯ ಪ್ರದರ್ಶ ನಗೊಳ್ಳಲಿದೆ ಎಂದು ಸಂಸ್ಥೆಯ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂದಗೋಳದ ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ಕೈಗೆಟುಕುವ ದರದಲ್ಲಿ ಸಿರಿಧಾನ್ಯಗಳ ಅಕ್ಕಿಯನ್ನು ಮಾರಾಟ ಮಾಡಲಿದೆ. ಮಹಿಳಾ ರೈತ ಗುಂಪುಗಳು ಮೌಲ್ಯವರ್ಧಿತ ಪದಾರ್ಥಗಳನ್ನು ಮರಾಟ ಮಾಡಲಿದ್ದಾರೆ. ಸಿರಿಧಾನ್ಯಗಳ ಅಡುಗೆ ಹಾಗೂ ರುಚಿಕರ ತಿನಿಸುಗಳನ್ನು ಪ್ರದರ್ಶನದಲ್ಲಿ ಸವಿಯಬಹುದು. ಮರೆತು ಹೋಗುತ್ತಿರುವ ವೈವಿಧ್ಯಮಯ ದೇಸಿ ತಿಂಡಿಗಳಾದ ಸಿರಿಧಾನ್ಯದ ಬಿಸ್ಕೆಟ್, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಉಂಡೆಗಳ ಮಾರಾಟ ಏರ್ಪಡಿಸಲಾಗಿದೆ. ಬಾಯಿ ಚಪ್ಪರಿಸಲು ದೇಸಿ ಅಡುಗೆ, ಕೈತೋಟದಲ್ಲಿ ಬಿತ್ತಲು ನಾಟಿ ಬೀಜ ಮತ್ತು ಸಾವಯವ ಪದಾರ್ಥಗಳು ಲಭ್ಯವಿವೆ. ಹಣ್ಣಿನ ಗಿಡಗಳು, ಬಾಕಾಹು (ಬಾಳೆಕಾಯಿ ಹುಡಿ) ಪದಾರ್ಥಗಳು, ಸಾವಯವ ಬೀಜ, ಶುದ್ಧ ನೈಸರ್ಗಿಕ ಎಣ್ಣೆ, ಉಪ್ಪಿನಕಾಯಿ, ಐಸ್ ಕ್ರೀಂ, ಕರಕುಶಲ ಸಾಮಗ್ರಿಗಳು ಮಾರಾಟಕ್ಕೆ ಬರಲಿವೆ ಎಂದು ತಿಳಿಸಿದ್ದಾರೆ.
ಆ.26 ರಂದು ಸಂಜೆ 4ಕ್ಕೆ ಸಿರಿಧಾನ್ಯಗಳ ತಿನಿಸು ಸವಿದು, ಯಾವ ಧಾನ್ಯದಿಂದ ಅದನ್ನು ಮಾಡಲಾಗಿದೆ ಎಂದು ಊಹಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಆ.27 ರಂದು ಮಧ್ಯಾಹ್ನ 12ಕ್ಕೆ ಹಿರಿಯರಿಗೆ ಸಿರಿಧಾನ್ಯ ಅಡುಗೆ ಸ್ಪರ್ಧೆ, ಮಕ್ಕಳಿಗೆ ಸಿರಿಧಾನ್ಯಗಳ ಚಿತ್ರಕಲಾ ಸ್ಪರ್ಧೆ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಮನೆಯಲ್ಲಿ ತಯಾರಿಸಿದ ಬಗೆಬಗೆಯ ಅಡುಗೆಗಳನ್ನು ಸ್ಪರ್ಧೆಗೆ ತರಬಹುದು. ವಿಜೇತರಿಗೆ ಬಹುಮಾನ ನೀಡಲಾಗುವುದು. ಇದರ ಜತೆಗೆ ಅಂದು ಬೆಳಗ್ಗೆ 10ಕ್ಕೆ ಮಕ್ಕಳಿಗೆ ಸಿರಿಧಾನ್ಯಗಳ ಬಗ್ಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಮಾಹಿತಿಗೆ ಮೊ: 9972077998 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.