

ಮೈಸೂರು: ಇತ್ತೀಚಿನ ವರ್ಷಗಳಲ್ಲಿ ಮತ್ತೆ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳಿಗೆ ಮಹತ್ವ ದೊರೆಯುತ್ತಿದೆ ಎಂದು ಸಿಎಸ್‌ಐಆರ್ ಸಿಎಫ್‌ಟಿಆರ್‌ಐ ಸಂಶೋಧನಾ ಮಂಡಳಿ ಅಧ್ಯಕ್ಷೆ ಪ್ರೊ.ರೇಖಾ ಎನ್. ಸಿಂಘಾಲ್ ಹೇಳಿದರು.
ನಗರದ ಸಿಎಫ್‌ಟಿಆರ್‌ಐನಲ್ಲಿ ಹಮ್ಮಿಕೊಂಡಿರುವ ‘ಒಂದು ವಾರ, ಒಂದು ಪ್ರಯೋಗಾಲಯ’ ಕಾರ್ಯಕ್ರಮದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ‘ಸಿರಿಧಾನ್ಯ ದಿನ’ ಕಾರ್ಯಕ್ರಮದಲ್ಲಿ ಸಿರಿಧಾನ್ಯದ ಮಹತ್ವದ ಕುರಿತು ಮಾತನಾಡಿದರು. ದೇಶದ ಆಹಾರ ಪದ್ಧತಿಯು ವೈವಿಧ್ಯತೆಯಿಂದ ಕೂಡಿದ್ದು, ಪ್ರತಿಯೊಂದು ಪ್ರದೇಶದಲ್ಲೂ ಭಿನ್ನವಾದ ಆಹಾರ ಪದ್ಧತಿ ಇದೆ. ಆರ್ಯರು, ಬೌದ್ಧರು, ಜೈಭರು, ಗ್ರೀಕರು, ಪರ್ಷಿಯನ್ನರು, ಮೊಘಲರು ಹಾಗೂ ಬ್ರಿಟಿಷರ ಅಡುಗೆ ಪದ್ಧತಿಗಳೆಲ್ಲ ಸೇರಿ ಭಾರತೀಯ ಆಹಾರ ಪದ್ಧತಿ ಮೇಲೆ ಪರಿಣಾಮ ಬೀರಿದೆ. ದೇಶದ ಆಹಾರ ಸಂಸ್ಕೃತಿಯು ವೈಜ್ಞಾನಿಕವಾಗಿದ್ದು, ಔಷಧೀಯ ಗುಣವನ್ನು ಹೊಂದಿದೆ ಎಂದರು.
ಸಿಎಫ್‌ಟಿಆರ್‌ಐ ಮುಕ್ತ ದಿನ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಆಹಾರ ತಂತ್ರಜ್ಞಾನದ ಕುರಿತು ತಿಳಿದುಕೊಳ್ಳಲು ವೇದಿಕೆ ಒದಗಿಸಿರುವುದು ಸ್ವಾಗತಾರ್ಹ. ಇದು ವಿದ್ಯಾರ್ಥಿಗಳಲ್ಲಿರುವ ಕುತೂಹಲವನ್ನು ತಣಿಸಲು ಸಹಕಾರಿಯಾಗಲಿದೆ ಎಂದರು.
ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ವಿಜ್ಞಾನಿ ಡಾ.ಕೆೆಎಸ್‌ಎಂಎಸ್ ರಾಘವ ರಾವ್ ಇದ್ದರು.
9 ಉತ್ಪನ್ನಗಳನ್ನು ಬಿಡುಗಡೆ
ನಗರದ ಸಿಎಫ್‌ಟಿಆರ್‌ಐನಲ್ಲಿ ಹಮ್ಮಿಕೊಂಡಿರುವ ‘ಒಂದು ವಾರ, ಒಂದು ಪ್ರಯೋಗಾಲಯ’ ಕಾರ್ಯಕ್ರಮದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ‘ಸಿರಿಧಾನ್ಯ ದಿನ’ ಕಾರ್ಯಕ್ರಮದಲ್ಲಿ 9 ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ರಾಗಿ ಕೇಸರಿ ಹಲ್ವ ಮಿಶ್ರಣ, ರಾಗಿ ಕಿಚಡಿ ಮಿಶ್ರಣ, ರಾಗಿ ಉಪ್ಪಿಟ್ಟು ಮಿಶ್ರಣ, ರಾಗಿ ರವೆ, ರಾಗಿ ರವಾ ಇಡ್ಲಿ ಮಿಶ್ರಣ, ಸಿರಿಧಾನ್ಯಗಳ ಪುಟ್ಟು ಪುಡಿ, ರಾಗಿ ಮಾಲ್ಟ್, ಮಕ್ಕಳಿಗಾಗಿ ಅಕ್ಕಿ ಗಂಜಿ ಮಿಶ್ರಣ, ಬಯೋಡೀಗ್ರೇಡಬಲ್ ಕೀ ಬಂಚ್ ಅನ್ನು ಬಿಡುಗಡೆ ಮಾಡಲಾಯಿತು.