ಮಳೆಗಾಳಿಗೆ ನೆಲಕಚ್ಚಿದ ರಾಗಿ

2
ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ ಮಳೆಗೆ ರಾಗಿ ನೆಲಕಚ್ಚಿರುವುದು.
Published on

ತೆನೆಯಲ್ಲೇ ಕಾಳುಕಟ್ಟುವ ಆತಂಕ - ಕಮರಿದ ರೈತನ ಕನಸು

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ರಾಗಿ ಬೆಳೆ ನೆಲಕಚ್ಚಿದೆ. ಇದರಿಂದ ಫಸಲು ನಷ್ಟವಾಗುವ ಆತಂಕ ಶುರುವಾಗಿದೆ.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ತಾಲೂಕಿನಲಿ 31,500 ಹೆಕ್ಟೇರ್​ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಆದರೆ, ಸೆಪ್ಟೆಂಬರ್​ನಲ್ಲಿ ಮಳೆ ಬೀಳದೆ ರೈತನಿಗೆ ಆಘಾತ ನೀಡಿತ್ತು. ರಾಗಿ ಕಾಳು ಕಟ್ಟುವ ಹಂತದಲ್ಲಿ ಉತ್ತಮ ಮಳೆಯಾಯಿತು. ಬೆಳೆ ಕೈ ಸೇರಲ್ಲ ಎನ್ನುತ್ತಿದ್ದವರಿಗೆ ಇಡೀ ವಾರ ತುಂತುರು ಮಳೆಯಾಗಿದ್ದರಿಂದ ಆಸೆಯ ಚಿಗುರೊಡೆದು ಈ ವರ್ಷ ಬಂಪರ್​ ಬೆಳೆ ಎನ್ನುವಷ್ಟರಲ್ಲಿ ಮತ್ತೆ ಮಳೆ ಸುರಿದು ರೈತರನ್ನು ಆತಂಕಕ್ಕೀಡು ಮಾಡಿದೆ.

ಬೆಳೆದು ನಿಂತ ರಾಗಿ ತೆನೆಗಳಲ್ಲಿ ತೇವಾಂಶ ಉಳಿದುಕೊಂಡಿದ್ದು, ಬೆಳೆಗಾರರಿಗೆ ನಷ್ಟದ ಆತಂಕ ಎದುರಾಗಿದೆ. ಈಗಾಗಲೇ ಕೊಯ್ಲು ಮಾಡಿರುವ ರಾಗಿ ಒಣಗಿಸಿ, ಕಣ ಮಾಡಿ ತೆನೆ ಬೇರ್ಪಡಿಸಲು ಅಡ್ಡಿಯಾಗಿದೆ.

ಚಾಪೆ ಹಾಸಿದಂತೆ ಮಲಗಿದ ಬೆಳೆ

ನೆಲ ಕಚ್ಚಿರುವ ರಾಗಿ ಪೈರನ್ನು ಎತ್ತಿಕಟ್ಟುವ ಕಾರ್ಯವಾಗಬೇಕು. ಆದರೆ ಬೆಳೆಗಾರರು ಜಮೀನಿನಲ್ಲಿ ಕಾಲಿಡದಂತಾಗಿದೆ. ರಾಗಿ ಬೆಳೆ ಚಾಪೆ ಹಾಸಿದಂತೆ ಮಲಗಿದೆ. ಅಲ್ಲದೆ, ಬಿಸಿಲಿಲ್ಲದೆ ಮೋಡಕವಿದ ವಾತವರಣ ಇರುವುದರಿಂದ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಅಂತಿಮ ಹಂತದಲ್ಲಿ ಇದೇ ರೀತಿ ಮಳೆ ಸುರಿದರೆ ತೆನೆಯಲ್ಲೇ ರಾಗಿ ಕಾಳು ಮೊಳಕೆ ಬರುವ ಸಾಧ್ಯತೆ ಇದೆ. ರಾಗಿ ಬೆಳೆ ಸಂಪೂರ್ಣ ನೆಲಕ್ಕೆ ಬಿದ್ದಿರುವುದರಿಂದ ಯಂತ್ರಗಳಿಂದ ಕಟಾವು ಮಾಡಲಾಗದೆ, ಕೂಲಿಕಾರ್ಮಿಕರನ್ನು ಆಶ್ರಯಿಸಬೇಕಿದೆ. ಇತ್ತ ಕೂಲಿ ಹಣ ಹೆಚ್ಚಾಗುವ ಸಾಧ್ಯತೆ ಇದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಬೀಳುವ ಮಳೆಯನ್ನೇ ಅವಲಂಬಿಸಿದೆ ರಾಗಿ ಬೆಳೆಗಾರರ ಭವಿಷ್ಯ.

ಕಳೆದ ವರ್ಷ ಬರದಿಂದ ಬೆಳೆ ಕೈಗೆ ಬರಲಿಲ್ಲ. ಈ ಬಾರಿ ಉತ್ತಮ ಮಳೆಯಾದ ಕಾರಣ ಹುಳಿಯಾರು ಸಮೀಪದ ಕಂಪನಹಳ್ಳಿ ಬಳಿ 1 ಎಕರೆ ಜಮೀನಿನಲ್ಲಿ ಸಾಲ ಮಾಡಿ ಅಜ್ಜಅಜ್ಜಿ ಇಬ್ಬರೇ ರಾಗಿ ಬಿತ್ತಿದೆವು. ನಂತರ ಗೊಬ್ಬರ ಹಾಕಿ, ಕಳೆ ಸಹ ಕೀಳಿಸಿದ್ದೆ. ಉತ್ತಮವಾಗಿ ಬೆಳೆ ಬಂದಿತ್ತು. ಆದರೆ ಮತ್ತೆ ಸುರಿದ ಮಳೆಯಿಂದ ಬಹುತೇಕ ಬೆಳೆ ಹಾನಿಗೀಡಾಗಿದೆ. ಏನು ಮಾಡುವುದು ಎಂಬುದಕ್ಕೆ ದಿಕ್ಕೇ ತೋಚುತ್ತಿಲ್ಲ. ಪ್ರತಿ ಬಾರಿ ಒಂದಿಲ್ಲೊಂದು ರೀತಿಯಲ್ಲಿ ನಷ್ಟವಾಗುತ್ತಿದೆ. ಮತ್ತೆ ಮಳೆ ಬಂದರಂತೂ ಹಾಕಿದ ಬಂಡವಾಳವೇ ಬರುವುದಿಲ್ಲ. - ಲಲಿತಮ್ಮ, ರೈತಮಹಿಳೆ,ಕೆ.ಸಿ.ಪಾಳ್ಯ, ಹುಳಿಯಾರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net