ಇನ್ನು ಸಿರಿಧಾನ್ಯದ ಬಿಸಿಯೂಟ?

millets
Published on

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲಾಗುವ ಬಿಸಿಯೂಟದಲ್ಲಿ ಇನ್ಮುಂದೆ ಸಿರಿಧಾನ್ಯ ಪದಾರ್ಥ ಸೇರ್ಪಡೆಗೊಂಡರೂ ಅಚ್ಚರಿಯಿಲ್ಲ. ಮಕ್ಕಳಿಗೆ ಶಕ್ತಿಯುತ ಆಹಾರ ನೀಡುವ ಉದ್ದೇಶದಿಂದ ಮಧ್ಯಾಹ್ನದ ಊಟದಲ್ಲಿ ಸಿರಿಧಾನ್ಯ ಬಳಕೆ ಮಾಡುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್​ಆರ್​ಡಿ) ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಈ ಸಲಹೆಯನ್ನು ಸ್ವೀಕರಿಸಿರುವ ರಾಜ್ಯ ಸರ್ಕಾರ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಎಂಎಚ್​ಆರ್​ಡಿ ಕಳೆದ ವರ್ಷವೇ ಈ ಪ್ರಸ್ತಾವನೆಯನ್ನು ರಾಜ್ಯಗಳ ಮುಂದಿಟ್ಟಿತ್ತು. ಮೈತ್ರಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣ ಭೈರೇಗೌಡ ಸಿರಿಧಾನ್ಯ ಬಳಕೆಗೆ ಸೂಚನೆ ಸಹ ನೀಡಿದ್ದರು. ಆದರೆ, ಸರ್ಕಾರ ಬದಲಾದಂತೆ ಈ ಪ್ರಸ್ತಾವನೆ ಮೂಲೆ ಸೇರಿತ್ತು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಶೋಧನೆಗಳು ನಡೆದು ಸಿರಿಧಾನ್ಯದಿಂದ ಅಧಿಕ ಪೌಷ್ಟಿಕಾಂಶ ದೊರೆಯುತ್ತದೆ ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಬೆಳೆಯುವ ಹಂತದಲ್ಲೇ ಸಿರಿಧಾನ್ಯ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಆಲೋಚಿಸಿದೆ.

ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆದ ಸಭೆಯಲ್ಲಿ ಸಿರಿಧಾನ್ಯ ಬಳಕೆ ಬಗ್ಗೆ ವಿಸ್ತ ೃ ಚರ್ಚೆ ನಡೆದಿದೆ. ಆನಂತರ ಎಂಎಚ್​ಆರ್​ಡಿ ರಾಜ್ಯಗಳಿಗೆ ಸಲಹೆ ರವಾನಿಸಿದೆ.

ಸಿರಿಧಾನ್ಯ ಲಾಭ?: ಕ್ಯಾಲ್ಸಿಯಂ, ಕಬ್ಬಿಣಾಂಶ, ಪ್ರೊಟೀನ್, ಫೈಬರ್ ಹೇರಳವಾಗಿದ್ದು ಮಕ್ಕಳ ಬೆಳವಣಿಗೆಗೆ ಸಹಕಾರಿ. 

ಯಾವುದು ಸಿರಿಧಾನ್ಯ?: ಸಾಮೆ, ರಾಗಿ, ಬರಗು, ನವಣೆ, ಆರ್ಕ, ಕೊರ್ಲೆ, ಜೋಳ, ಸಜ್ಜೆ, ಊದಲು ಇವುಗಳೆಲ್ಲವನ್ನು ಸೇರಿಸಿ ಸಿರಿಧಾನ್ಯ ಅಥವಾ ನವಧಾನ್ಯಗಳು ಎಂದು ಕರೆಯುತ್ತಾರೆ.

ಸರ್ಕಾರಕ್ಕೆ ಹೊರೆ!

ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರಪಟ್ಟಿಯನ್ನು ಎಂಎಚ್​ಆರ್​ಡಿ ಕೇಳಿದೆ. ಸದ್ಯ ರಾಜ್ಯದಲ್ಲಿ ಹೆಚ್ಚಾಗಿ ಅಕ್ಕಿ ಬಳಸಲಾಗುತ್ತಿದೆ. ಸಿರಿಧಾನ್ಯ ಲಭ್ಯತೆ ಕಡಿಮೆ ಇದ್ದು, ದರ ಕೂಡ ಹೆಚ್ಚಿರುವುದರಿಂದ ಈ ಯೋಜನೆ ಜಾರಿಗೊಂಡರೆ ಆರ್ಥಿಕ ಹೊರೆ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಿರಿಧಾನ್ಯ ಬಳಕೆಗೆ ಕೊಂಚ ಹಿಂದೇಟು ಹಾಕುತ್ತಿರುವುದಾಗಿ ತಿಳಿದು ಬಂದಿದೆ. ಸದ್ಯ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಪೂರೈಕೆ ಮಾಡುತ್ತಿರುವ ಆಕ್ಷಯ ಪಾತ್ರ ಸಂಸ್ಥೆ ಈ ಹಿಂದೆ ಒಂದು ಸಾವಿರ ಶಾಲೆಗಳಿಗೆ ಸಿರಿಧಾನ್ಯದ ಪದಾರ್ಥ ತಯಾರಿಸಿ ನೂರು ದಿನ ನೀಡುತ್ತಿತ್ತು. ಇದರ ಪ್ರಗತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

59 ಲಕ್ಷ ಮಕ್ಕಳಿಗೆ ಊಟ

ಮಕ್ಕಳನ್ನು ಶಾಲೆಗೆ ಕರೆತರುವ ಉದ್ದೇಶದಿಂದ ಆರಂಭಿಸಿದ ಮಧ್ಯಾಹ್ನದ ಬಿಸಿಯೂಟ ಯೋಜನೆ ಲಾಭವನ್ನು 55,464 ವಿದ್ಯಾಸಂಸ್ಥೆಗಳ 1ರಿಂದ 10ನೇ ತರಗತಿಯ 59.49 ಲಕ್ಷ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಬಿಸಿಯೂಟದಿಂದ ಪ್ರತಿ ಪ್ರಾಥಮಿಕ ಶಾಲಾ ಮಗುವಿಗೆ ದಿನವೊಂದಕ್ಕೆ 490 ಕ್ಯಾಲರಿ ಪೌಷ್ಟಿಕಾಂಶ ಹಾಗೂ 8ರಿಂದ 10 ಗ್ರಾಂ ಪ್ರೋಟೀನ್, ಪ್ರೌಢಶಾಲಾ ವಿದ್ಯಾರ್ಥಿಗೆ 720 ಕ್ಯಾಲರಿ ಪೌಷ್ಟಿಕಾಂಶ ಹಾಗೂ 12 ರಿಂದ 16 ಗ್ರಾಂ ಪ್ರೋಟೀನ್ ದೊರೆಯುತ್ತಿದೆ.

ದೇವರಾಜ್ ಎಲ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net