

ಕೋಲಾರ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಸೈಕ್ಲೋನ್ ಪರಿಣಾಮ ಎದುರಾಗುತ್ತಿದ್ದು, ಜಡಿ ಮಳೆಯಿಂದ ವಾರ್ಷಿಕ ಬೆಳೆಗಳಾದ ರಾಗಿ, ಅವರೆ, ತೊಗರಿ ಸೇರಿ ತರಕಾರಿ ಬೆಳೆಗಳಿಗೆ ಹಾನಿಯುಂಟಾಗಿದ್ದು, ಇದರಿಂದ ರೈತರು ಕಂಗಾಲಾಗುವಂತಾಗಿದೆ. ಗುರುವಾರ ಸಂಜೆಯಿಂದ ಮತ್ತೆ ಜಡಿಮಳೆ ಶುರುವಾಗಿದ್ದು, ಶುಕ್ರವಾರ ಇಡೀ ದಿನ ಮುಂದುವರೆದಿದೆ.
ಒಂದು ತಿಂಗಳಿನಿಂದ ವಾರದಲ್ಲಿ ಮೂರು ದಿನಗಳ ಕಾಲ ಮೋಡ ಮುಚ್ಚಿದ ವಾತಾವರಣ, ತುಂತುರು ಮಳೆ, ಶೀತಗಾಳಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ವಾರ್ಷಿಕ ಬೆಳೆಗಳು ಸೇರಿ ತರಕಾರಿ ಬೆಳೆಗಳ ಮೇಲೆ ಪ್ರಭಾವ ಬೀರಿದ್ದು, ರೈತರ ಕೈಗೆ ಬೆಳೆಗಳ ಫಸಲು ಸಿಕ್ಕೂ ಸಿಗದಂತಾಗಿದೆ.
ವಾರ್ಷಿಕ ಬೆಳೆಯಾದ ರಾಗಿ ಕಟಾವಿಗೆ ಬಂದ ಸಂದರ್ಭದಲ್ಲಿ ಸೈಕ್ಲೋನ್ ಎಫೆಕ್ಟ್ನಿಂದ ಜಡಿಮಳೆ ಸುರಿದ ಪರಿಣಾಮ ಕಟಾವಿಗೆ ಬಂದ ರಾಗಿ ತೆನೆ ಮನೆಗೆ ಹಾಕಲು ರೈತರು ಹರಸಾಹಸ ಪಡಬೇಕಾಯಿತು. ವಾರದಲ್ಲಿ 2 ದಿನ ಬಿಸಿಲು ಇದ್ದರೆ 3ನೇ ದಿನವೇ ಜಡಿಮಳೆ ಪ್ರಾರಂಭವಾಗುತ್ತಿದೆ. ಇದರಿಂದ ಒಣಗಿದ ತೆನೆಯನ್ನು ರೈತರು ಕಟಾವು ಮಾಡದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೂ ಕಟಾವು ಮಾಡಿದ ರೈತರು ಸಂಕಷ್ಟ ಅನುಭವಿಸುಂತಾಗಿದೆ.
ಅವರೇಕಾಯಿ ಫಸಲು ನಷ್ಟ
ರಾಗಿ ಬೆಳೆಯ ಮಧ್ಯೆ ಅವರೆಕಾಯಿ ಬೆಳೆಯುತ್ತಾರೆ. ರಾಗಿ ಬೆಳೆ ಕಟಾವು ಮಾಡಿದರೆ ಅವರೇ ಗಿಡ ಚಿಗುರು ಹೂವು ಬಿಟ್ಟು ಕಾಯಿ ಕಟ್ಟುತ್ತದೆ. ಇದಕ್ಕೆ ಮಳೆಗಿಂತ ಮಂಜು ಹೆಚ್ಚು ಅವಶ್ಯ ಇದ್ದು, ಭೂಮಿಯಲ್ಲಿ ತೇವಾಂಶವೂ ಇರಬೇಕು. ಅವರೆ ಹೂವು ಬಿಟ್ಟ ನಂತರ ಮಳೆ ಬಂದರೆ ಬೆಳೆಗೆ ನಷ್ಟವಾಗುತ್ತದೆ. ಶೀತಗಾಳಿ ಮತ್ತು ಮಳೆಗೆ ಹೂವು ಉದುರಿಹೋಗುತ್ತದೆ. ಈಗಾಗಲೇ ಅವರೇ ಗಿಡದಲ್ಲಿ ಕಾಯಿ ಕಾಣಿಸಿಕೊಂಡಿದೆ. ಜಡಿಮಳೆಯಿಂದ ಕಾಯಿಮೇಲೆ ಸೊಗಡು ಕಳಚಿಹೋಗುತ್ತದೆ. ಆಗ ಮಾರುಕಟ್ಟೆಯಲ್ಲಿ ಅವರೇಕಾಯಿಗೆ ಬೆಲೆಯು ಕುಸಿಯುವ ಆತಂಕ ಎದುರಾಗಿದೆ.
ಕಳೆದ ಒಂದು ತಿಂಗಳಿನಿಂದ ಆಗಾಗ ಬರುತ್ತಿರುವ ಜಡಿಮಳೆಯಿಂದ ಅವರೇಕಾಯಿ ಬೆಳೆಗೆ ನಷ್ಟ ಉಂಟಾಗಿದೆ. ಶೇ.50 ಫಸಲು ರೈತರ ಕೈಗೆ ಸಿಗುವಂತಾಗಿದೆ. ಫಸಲು ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರತಿ ಕೆ.ಜಿ.ಗೆ 50 ರೂ.ಗೆ ಮಾರಾಟವಾಗುತ್ತಿದೆ. ರೈತರಿಗೆ 40 ರಿಂದ 45 ರೂ.ಗಳು ಸಿಗುತ್ತದೆ. ಇನ್ನೂ ಶೇ.50 ಹೂವು ಗಿಡಗಳಲ್ಲಿರುವುದರಿಂದ ಹೂವಿನ ಮೇಲೆ ಜಡಿಮಳೆ ಪ್ರಭಾವ ಉಂಟಾಗಿದೆ.
"ವಾರ್ಷಿಕ ಬೆಳೆಗಳಾದ ರಾಗಿ, ಅವರೆ, ತೊಗರಿ ಫಸಲಿನ ಮೇಲೆ ಜಡಿಮಳೆ ಪ್ರಭಾವ ಬೀರಿದೆ. ಕಟಾವು ಮಾಡುವ ಸಂದರ್ಭದಲ್ಲಿ ಮಳೆ ಅಡ್ಡಿ ಉಂಟುಮಾಡುತ್ತಿದೆ. ಜತೆಗೆ ತರಕಾರಿ ಬೆಳೆಗಳಿಗೂ ತೊಂದರೆಯಾಗಿದೆ. ಮೋಡ ಮುಚ್ಚಿದ ವಾತಾವರಣದಿಂದ ಟೊಮ್ಯಾಟೊ, ಆಲೂಗಡ್ಡೆ ಮುಂತಾದ ತೋಟಗಾರಿಕೆ ಬೆಳೆಗಳಿಗೆ ವೈರಸ್ ಕಾಟ ಹೆಚ್ಚಾಗುತ್ತಿದೆ. ಔಷಧ ಸಿಂಪಡಣೆಗೂ ಜಡಿಮಳೆ ಅಡ್ಡಿ ಬರುತ್ತಿದೆ. ಲಕ್ಷಾಂತರ ರೂ. ಬಂಡವಾಳ ಹೂಡಿ ಬೆಳೆದ ತರಕಾರಿ ಬೆಳೆಗಳು ರೋಗ ರುಜಿನಗಳಿಗೆ ತುತ್ತಾಗುವಂತಾಗಿದೆ."
-ನಾಗರಾಜ್, ರೈತ, ಅಣ್ಣಿಹಳ್ಳಿ