11 ಮುದ್ದೆ ತಿಂದ ಸೀಗನಾಯಕ ಪ್ರಥಮ

gadi kunanayaka
Published on

ಕೊಳ್ಳೇಗಾಲ: ತಾಲೂಕಿನ ಪಾಳ್ಯ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ರಾಗಿಮುದ್ದೆ-ಕೋಳಿ ಸಾಂಬಾರ್ ತಿನ್ನುವ ಸ್ಪರ್ಧೆಯಲ್ಲಿ 6 ನಿಮಿಷದಲ್ಲಿ 11 ಮುದ್ದೆ ತಿಂದು ಗಾಡಿ ಕುನ್ನ ಸೀಗನಾಯಕ ಪ್ರಥಮ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ 8 ನಿಮಿಷದಲ್ಲಿ 5 ಮುದ್ದೆ ತಿಂದು ಮಹದೇವಮ್ಮ ಪ್ರಥಮ ಸ್ಥಾನ ಗಳಿಸಿದರು.

ಗ್ರಾಮದ ನಿವಾಸಿ ಎಸ್.ರವಿಕುಮಾರ್ ಪ್ರಥಮ ಬಾರಿಗೆ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಏರ್ಪಡಿಸಿದ್ದರು. ಪಂದ್ಯವನ್ನು 10 ನಿಮಿಷ ಊಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ನಗದು ಹಾಗೂ ಒಂದು ಸೆಟ್ ರಾಮ್‌ರಾಜ್ ಬಟ್ಟೆ, ದ್ವಿತೀಯ ಬಹುಮಾನ 2500 ನಗದು, ಒಂದು ಸೆಟ್ ರಾಮ್‌ರಾಜ್ ಬಟ್ಟೆ ಮಹಿಳೆಯರಿಗೆ ಪ್ರಥಮ ಬಹುಮಾನ 2,500 ನಗದು ಹಾಗೂ 1 ಸೀರೆ, ದ್ವಿತೀಯ ಬಹುಮಾನ 2 ಸಾವಿರ ನಗದು ಹಾಗೂ 1 ಸೀರೆ ಬಹುಮಾನ ನಿಗದಿಪಡಿಸಲಾಗಿತ್ತು.

ಪಂದ್ಯದಲ್ಲಿ 220 ಗ್ರಾಂ ತೂಕದ 200 ರಾಗಿ ಮುದ್ದೆ, 25 ಕೆಜಿ ನಾಟಿ ಕೋಳಿ ಸಾಂಬರ್ ತಯಾರಿಸಲಾಗಿತ್ತು. 11 ಜನ ಪುರುಷರು, 4 ಮಹಿಳೆಯರು ಭಾಗವಹಿಸಿದ್ದರು. ಪುರುಷರಲ್ಲಿ ಗಾಡಿ ಕುನ್ನಸೀಗ ನಾಯಕ 6 ನಿಮಿಷದಲ್ಲಿ 11 ಮುದ್ದೆ ತಿಂದು ಪ್ರಥಮ ಸ್ಥಾನ, ನಾಗಮಲ್ಲ ನಾಯಕ 7 ನಿಮಿಷದಲ್ಲಿ 9 ಮುದ್ದೆ ಊಟ ಮಾಡಿ ದ್ವಿತೀಯ ಸ್ಥಾನ ಪಡೆದರು. ಮಹಿಳೆಯರಲ್ಲಿ ಮಹದೇವಮ್ಮ 8 ನಿಮಿಷದಲ್ಲಿ 5 ಮುದ್ದೆ ತಿಂದು ಪ್ರಥಮ, ಸ್ಫೂರ್ತಿ 8 ನಿಮಿಷದಲ್ಲಿ 3 ಮುದ್ದೆ ತಿಂದು ಎರಡನೇ ಸ್ಥಾನ ಪಡೆದರು.

ಗ್ರಾಂಪಂ ಮಾಜಿ ಅಧ್ಯಕ್ಷ ಬಿ.ರವಿ, ಪಶು ಇಲಾಖೆಯ ವೈದ್ಯ ರಾಚಪ್ಪಾಜಿ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜು, ಶಿವರುದ್ರಸ್ವಾಮಿ, ಮುಖಂಡರಾದ ಶಿವಪ್ರಕಾಶ್ ನಾಯಕ, ನಂಜುಂಡಸ್ವಾಮಿ, ಮಧುನಾಯಕ ಪ್ರಸಾದ್, ರಾಮು, ರಂಗಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net