ಕೊಡಗಿನಲ್ಲಿ ಹಾಲಿನ ಉತ್ಪಾದನೆ ಕುಸಿತ

01mdk02
Published on

ಮಡಿಕೇರಿ:
ಬೇಸಿಗೆ ಶುರುವಾಗುತ್ತಿದ್ದಂತೆಯೇ ಕೊಡಗಿನಲ್ಲಿ ಹಾಲಿನ ಉತ್ಪಾದನೆ ಕುಸಿತವಾಗಿದೆ. ಜಿಲ್ಲೆಗೆ ಅಗತ್ಯವಿರುವ ಹಾಲನ್ನು ಪಕ್ಕದ ಹಾಸನ ಜಿಲ್ಲೆಯಿಂದ ತರಿಸಿಕೊಳ್ಳಲಾಗುತ್ತಿದೆ. ಮೇವಿನ ಕೊರತೆ ಮತ್ತು ಚರ್ಮಗಂಟು ರೋಗದಿಂದಾಗಿ ಈ ಪರಿಸ್ಥಿತಿ ಎದುರಾಗಿದೆ. ಪಶು ಆಹಾರದ ಬೆಲೆ ಹೆಚ್ಚಳವೂ ಹಾಲಿನ ಉತ್ಪಾದನೆ ಇಳಿಕೆ ಮೇಲೆ ಪರಿಣಾಮ ಬೀರಿದೆ.

ಕೊಡಗಿನಲ್ಲಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಹೊರತುಪಡಿಸಿದರೆ ಉಳಿದೆಡೆ ಹಾಲು ಉತ್ಪಾದನೆಗೆ ಸೂಕ್ತ ವಾತಾವರಣ ಇಲ್ಲ. ಆದರೂ ಹಾಲು ಉತ್ಪಾದನೆಗೆ ಅನುಕೂಲಕರ ತಿಂಗಳುಗಳಲ್ಲಿ ಹಾಸನ ಹಾಲು ಒಕ್ಕೂಟದ ಕೂಡಿಗೆ ಹಾಲಿನ ಡೇರಿಗೆ ಸುಮಾರು ೨೫ ಸಾವಿರ ಕೆ.ಜಿ.ಗಳಷ್ಟು ಹಾಲು ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪೂರೈಕೆ ಆಗುತ್ತದೆ. ಇದೀಗ ಮಾರ್ಚ್ ತಿಂಗಳಿನಿಂದ ಹಾಲು ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದು ೧೯ ಸಾವಿರ ಕೆ.ಜಿ. ಆಸುಪಾಸಿನಲ್ಲಿ ಕೂಡಿಗೆ ಡೇರಿಗೆ ಹಾಲು ಬರುತ್ತಿದೆ. ಶನಿವಾರದ (ಏ.೧) ಬೆಳಗ್ಗಿನ ಮಾಹಿತಿ ಪ್ರಕಾರ ಜಿಲ್ಲೆಯ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ೧೯,೪೧೯ ಕೆ.ಜಿ. ಹಾಲು ಸಂಗ್ರಹವಾಗಿದೆ.

ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ ಅತಿ ಅತಿ ಹೆಚ್ಚು ಅಂದರೆ ಒಟ್ಟು ೩೬ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವೆ. ಈ ಪೈಕಿ ಹೆಬ್ಬಾಲೆ, ಶಿರಂಗಾಲ ಹಾಗೂ ಆಲೂರು ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳು ಡೇರಿಗೆ ಹೆಚ್ಚು ಹಾಲು ಪೂರೈಸುತ್ತಿವೆ. ವಿರಾಜಪೇಟೆ ತಾಲೂಕಿನಲ್ಲಿ ಅಮ್ಮತ್ತಿ ಹೊಸೂರಿನಲ್ಲಿ ಮಾತ್ರ ಒಂದು ಸಂಘವಿದ್ದು, ಇಲ್ಲಿಂದ ಸುಮಾರು ೧೦೦ ಕೆಜಿಯಷ್ಟು ಹಾಲು ಬರುತ್ತಿದೆ. ಮಡಿಕೇರಿ ತಾಲೂಕಿನಲ್ಲಿ ಮರಗೋಡು ಗ್ರಾಮದಲ್ಲಿ ಮಾತ್ರ ಏಕೈಕ ಹಾಲು ಉತ್ಪಾದಕರ ಸಂಘ ಇದೆ. ಈ ಸಂಘ ಸುಮಾರು ೭೫ ಕೆಜಿಯಷ್ಟು ಹಾಲು ಕೂಡಿಗೆ ಡೇರಿಗೆ ಪೂರೈಸುತ್ತಿದೆ. ಈ ಎರಡು ಸಂಘಗಳಿಂದ ಹಾಲು ಸಂಗ್ರಹ ಕೂಡಿಗೆ ಡೇರಿಗೆ ನಷ್ಟ ಉಂಟು ಮಾಡುತ್ತಿದ್ದರೂ ಮುಂದೆ ಬೆಳವಣಿಗೆ ಕಾಣುವ ನಿರೀಕ್ಷೆಯಿಂದ ಹಾಗೆಯೇ ಉಳಿಸಿಕೊಳ್ಳಲಾಗಿದೆ ಎನ್ನುತ್ತಾರೆ ಡೇರಿ ಅಧಿಕಾರಿಗಳು.

ಬೇಸಿಗೆಯಲ್ಲಿ ಹಾಲಿನ ಉತ್ಪಾದನೆ ಕಡಿಮೆ ಆಗಿದ್ದರೂ ಬೇಡಿಕೆ ಜಾಸ್ತಿಯಾಗಿದೆ. ಹಾಲು ಮಾತ್ರವಲ್ಲದೆ ಮೊಸರು, ಮಜ್ಜಿಗೆ, ಲಸ್ಸಿ, ಸುವಾಸಿತ ಹಾಲು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಆಗುತ್ತಿದೆ. ಪ್ರತಿನಿತ್ಯ ಕೊಡಗಿಗೆ ಸುಮಾರು ೫೦ ಸಾವಿರ ಲೀಟರ್‌ಗಳಷ್ಟು ಹಾಲಿನ ಅಗತ್ಯತೆ ಕಂಡು ಬರುತ್ತಿದೆ. ಆದರೆ ಬೇಡಿಕೆಯಷ್ಟು ಹಾಲಿನ ಲಭ್ಯತೆ ಇಲ್ಲದ ಕಾರಣ ಪಕ್ಕದ ಹಾಸನ ಜಿಲ್ಲೆಯಿಂದ ಹಾಲು ತರಿಸಿಕೊಳ್ಳಲಾಗುತ್ತಿದೆ. ಅರಕಲಗೂಡು ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ನೇರವಾಗಿ ಕೂಡಿಗೆ ಡೇರಿಗೆ ಹಾಲು ಪೂರೈಕೆ ಆಗುತ್ತಿದೆ. ಕೊಡಗು ಮತ್ತು ಅರಕಲಗೂಡುವಿನಿಂದ ಸಂಗ್ರಹವಾಗುವ ಹಾಲನ್ನು ಕೂಡಿಗೆಯಲ್ಲಿ ಸಂಸ್ಕರಿಸಿ, ಕೊಡಗಿನ ಮಾರುಕಟ್ಟೆಗೆ ಪೂರೈಸಲಾಗುತ್ತಿದೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ವಾಡಿಕೆಯ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಹಸಿರು ಮೇವಿನ ಕೊರತೆ ಆಗಿದೆ. ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಿರುವ ಕಾರಣ ಒಣಹುಲ್ಲು ಕೂಡ ಬೇಕಾದಷ್ಟು ಸಿಗುತ್ತಿಲ್ಲ. ಕೆಲವು ಕಡೆ ಸಿಕ್ಕಿದರೂ ಪಶುಪಾಲಕರು ಭರಿಸಲಾಗದಷ್ಟು ದರ ಹೇಳಲಾಗುತ್ತಿದೆ. ಈ ಮಧ್ಯೆ ಪಶು ಆಹಾರದ ಬೆಲೆಯೂ ಗಗನಮುಖಿಯಾಗಿದೆ. ಇದರ ನೇರ ಪರಿಣಾಮ ಹಾಲು ಉತ್ಪಾದನೆಯ ಮೇಲೆ ಆಗುತ್ತಿದ್ದು, ಸಹಕಾರ ಸಂಘಗಳಲ್ಲಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಕಡಿಮೆ ಆಗುತ್ತಿದೆ.

ಜಾನುವಾರುಗಳ ಆರೋಗ್ಯದ ಮೇಲೆ ದೊಡ್ಡ ಮಟ್ಟದ ದುಷ್ಪರಿಣಾಮ ಬೀರಿದ ಚರ್ಮ ಗಂಟು ರೋಗವೂ ಹಾಲು ಉತ್ಪಾದನೆ ಕುಸಿಯುವುದಕ್ಕೆ ಕಾರಣವಾಗಿದೆ. ಕಳೆದ ವರ್ಷದ ನವೆಂಬರ್‌ನಿಂದ ಈ ವರ್ಷದ ಫೆಬ್ರವರಿ ತನಕ ಜಿಲ್ಲೆಯಲ್ಲೂ ಚರ್ಮ ಗಂಟು ರೋಗ ಕಾಣಿಸಿಕೊಂಡಿತ್ತು. ಬೇಸಿಗೆ ಶುರುವಾಗುತ್ತಿದ್ದಂತೆಯೇ ರೋಗದ ಹಾವಳಿ ನಿಧಾನಕ್ಕೆ ಕಡಿಮೆ ಆಗುತ್ತಾ ಬಂದಿದೆ. ಆದರೆ ಈ ರೋಗ ಉಂಟು ಮಾಡಿರುವ ಹಾನಿಯಿಂದ ಚೇತರಿಸಿಕೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕಿದ್ದು, ನಂತರವಷ್ಟೇ ಹಾಲಿನ ಉತ್ಪಾದನೆಯಲ್ಲಿ ಚೇತರಿಕೆ ಕಾಣಬಹುದು ಎನ್ನುವ ನಿರೀಕ್ಷೆ ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net