

ಮಂಗಳೂರು: ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ನೀಡುವ ಸಬ್ಸಿಡಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಮಾತ್ರ ಲಾಭದಾಯಕವಾಗುತ್ತಿದ್ದು, ಉತ್ತರ ಕರ್ನಾಟಕ ಭಾಗದ ರೈತರು ಈ ಯೋಜನೆ ಲಾಭ ಪಡೆಯುವಲ್ಲಿ ಸಂಪೂರ್ಣ ವಂಚಿತರಾಗಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ 2007ರಲ್ಲಿ ಮೊದಲ ಅವಧಿಗೆ ಸಿಎಂ ಆಗಿದ್ದಾಗ ಸಹಕಾರಿ ಸಂಘಗಳ ಮೂಲಕ ಹಾಲು ನೀಡುವವರಿಗೆ ಪ್ರತಿ ಲೀಟರ್‌ಗೆ 2 ರೂ.ಸಬ್ಸಿಡಿ ನೀಡುವ ಯೋಜನೆ ಜಾರಿಗೊಳಿಸಿದ್ದರು. ಪ್ರಸ್ತುತ ಈ ಮೊತ್ತ 2 ರೂ.ನಿಂದ 5 ರೂ. ಏರಿದೆ. ಈ ಸಬ್ಸಿಡಿ ಪರಿಣಾಮ 2007ರಲ್ಲಿ ರಾಜ್ಯದಲ್ಲಿ ದಿನಕ್ಕೆ 30 ಲಕ್ಷ ಲೀ.ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಇಂದು ಸರಾಸರಿ 75 ಲಕ್ಷ ಲೀ.ಗೆ ತಲುಪಿದೆ. ಇದು ಮಹತ್ತರ ಬೆಳವಣಿಗೆಯಾದರೂ, ರಾಜ್ಯದ ಎಲ್ಲ ಭಾಗದ ರೈತರಿಗೆ ಇದರ ಲಾಭ ಪಡೆಯಲು ಸಾಧ್ಯವಾಗಿಲ್ಲ ಎನ್ನುವುದು ಕೂಡಾ ಅಷ್ಟೇ ಸತ್ಯ.
ಹಾಲು ಉತ್ಪಾದನೆಯಲ್ಲಿ ಶ್ರೀಮಂತವಾಗಿರುವ ದಕ್ಷಿಣದ ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ 11 ಜಿಲ್ಲೆಗಳಲ್ಲಿ ಇಂದು ದಿನಕ್ಕೆ 53.4 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿವೆ. ಉಳಿದ 20.6 ಲಕ್ಷ ಲೀ. ಹಾಲು 19 ಜಿಲ್ಲೆಗಳಲ್ಲಿ ಲಭ್ಯವಾಗುತ್ತಿದೆ. ಇದರ ಪರಿಣಾಮ ಸಬ್ಸಿಡಿಯಲ್ಲಿ ಸಿಂಹ ಪಾಲು ಶೇ.72ರಷ್ಟು 11 ಜಿಲ್ಲೆಗಳ ಪಾಲಾಗುತ್ತಿವೆ. ಉಳಿದ ಶೇ.28ರಷ್ಟು ಮೊತ್ತ 19 ಜಿಲ್ಲೆಗಳಲ್ಲಿ ಹಂಚಿಕೆಯಾಗುತ್ತಿವೆ. ಇವು ಸರ್ಕಾರದ ಹೇಳಿರುವ ಈ ಅಂಕಿ ಅಂಶಗಳೇ. ಸಬ್ಸಿಡಿಯಿಂದ ದೊಡ್ಡ ಹಾಲು ಉತ್ಪಾದಕರು ಮತ್ತಷ್ಟು ಸಿರಿವಂತರಾದರು ವಿನಃ ಬಡ ರೈತರ ಕಣ್ಣೀರು ಒರೆಸಲಿಲ್ಲ.
ರಾಜ್ಯದ ಎಲ್ಲ ಭಾಗದ ಹೈನುಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಸಬ್ಸಿಡಿ ಬದಲು ಹೊಸ ದನ, ಮೇವು ಖರೀದಿಗೆ ನೆರವು ನೀಡಬೇಕು ಎನ್ನುವುದು ಈಗ ರಾಜ್ಯ ಡೇರಿ ಆಸೋಸಿಯೇಷನ್ ಬೇಡಿಕೆಯಾಗಿದೆ. ಇದರಿಂದ ರಾಜ್ಯದ ಬಡ ರೈತರು ಕೂಡ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಲು ಸಾಧ್ಯವಾಗುವುದರ ಜೊತೆಯಲ್ಲಿ ಹಾಲು ಉತ್ಪಾದನೆಯಲ್ಲಿ ಮಹತ್ತರ ಏರಿಕೆ ಕಾಣಲು ಸಾಧ್ಯ ಎನ್ನುವುದು ಆಸೋಸಿಯೇಷನ್ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದೆ.
ಸರ್ಕಾರ ಸಬ್ಸಿಡಿ ನೀತಿಯನ್ನು ಬದಲಾಯಿಸಿ, ಹಸು ಹಾಗೂ ಮೇವು ಖರೀದಿಗೆ ಸಹಾಯಧನ ನೀಡಿದರೆ ಉತ್ತರ ಕರ್ನಾಟಕದ ಭಾ ಗದ ರೈತರಿಗೆ ಹೈನುಗಾರಿಕೆ ವಿಸ್ತರಿಸಿಕೊಳ್ಳಲು ನೆರವಾಗಲಿದೆ. ಜೊತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೂ ಸಹಾಯ ವಾಗಲಿದೆ. 2025ಕ್ಕೆ ಭಾರತ 5 ಟಿಲಿಯನ್ ಡಾಲರ್ ಆರ್ಥಿಕ ಹೊಂದಬೇಕೆನ್ನುವ ಪ್ರಧಾನಿ ಮೋದಿ ಅವರ ಅಶಯಕ್ಕೆ ಕೃಷಿ ವಲಯದ ಕೊಡುಗೆ ಮಹತ್ತವಾಗಿರುವ ಕಾರಣ ಹೈನುಗಾರಿಕೆ ವಿಚಾರದಲ್ಲಿ ಸರ್ಕಾರ ತನ್ನ ನೀತಿಯನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ ಎನ್ನುವುದು ಅಸೋಸಿಯೇಷನ್ ವಾದ.
ಸಬ್ಸಿಡಿ ನೀಡಿಕೆ ಅಥವಾ ರೈತರ ಕಲ್ಯಾಣಕ್ಕೆ ತಾವು ವಿರೋಧಿಗಳಲ್ಲ ಎನ್ನುವ ವಿಚಾರವನ್ನು ಸ್ಪಷ್ಟಪಡಿಸಿರುವ ಆಸೋಸಿಯೇಷನ್, ಖಾಸಗಿ ಡೇರಿಗಳು ನೆಲ ಕಚ್ಚುತ್ತಿರುವ ಈ ಹಂತದಲ್ಲಿ ಅವುಗಳಿಗೆ ಒಂದಿಷ್ಟು ಬಲ ತುಂಬುವ ಹಾಗೂ ಬಡ ರೈತರಿಗೂ ನೆರವಾಗುವಂತೆ ಸರ್ಕಾರ ತನ್ನ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಅಗ್ರಹ ಮಾಡಿದೆ.
1350 ಕೋಟಿ ರೂ.ಸಬ್ಸಿಡಿ
ರಾಜ್ಯ ಸರ್ಕಾರ ರೈತರಿಗೆ ಬಿಡುಗಡೆ ಮಾಡುತ್ತಿರುವ ವಾರ್ಷಿಕ ಸಬ್ಸಿಡಿ ಮೊತ್ತ 1,350 ಕೋಟಿ ರೂ. ಬಳ್ಳಾರಿ, ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ಬಿಜಾಪುರ ಸೇರಿದಂತೆ ಉತ್ತರ ಕರ್ನಾಟಕದ 13 ಜಿಲ್ಲೆ ಮತ್ತು ಮಧ್ಯ ಕರ್ನಾಟಕದ 4 ಜಿಲ್ಲೆ, ಕರಾವಳಿಯ 2 ಜಿಲ್ಲೆ ಸೇರಿ ಒಟ್ಟು 19 ಜಿಲ್ಲೆಗೆ ಸಿಗುವುದು 376 ಕೋಟಿ ರೂ. ದಕ್ಷಿಣ ಕರ್ನಾಟಕದ 11 ಜಿಲ್ಲೆಗಳಿಗೆ ಬರೋಬ್ಬರಿ 975 ಕೋಟಿ ರೂ. ದೊರೆಯುತ್ತಿದೆ.
ಗಾಯದ ಮೇಲೆ ಬರೆ
ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಾಮಾನ್ಯವಾಗಿದೆ. ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಹಲವು ಜಿಲ್ಲೆಗಳು ತತ್ತರಿಸಿದ್ದವು. ಇದರಿಂದಾಗಿ ನೂರಾರು ಸಂಖ್ಯೆಯಲ್ಲಿ ರೈತರು ಅದರಲ್ಲೂ ಸಣ್ಣ ರೈತರು ಬೆಳೆ ನಾಶವಾಗಿ ಬೀದಿಗೆ ಬಿದ್ದಿದ್ದಾರೆ. ಜಾನುವಾರುಗಳಿಗೆ ಸಂಗ್ರಹಿಡಲಾಗಿದ್ದ ಮೇವು ನಾಶವಾಗಿದೆ. ಇದರಿಂದ ಹಾಲು ಉತ್ಪಾದನೆಯಿಲ್ಲದೆ, ಸಬ್ಸಿಡಿಯಿಂದಲೂ ವಂಚಿತರಾಗಬೇಕಾಗಿದೆ.
ಸಬ್ಸಿಡಿ ಸ್ವರೂಪ ಬದಲಾವಣೆಗೆ ಮನವಿ
ಸರ್ಕಾರ ನೀಡುವ ಸಬ್ಸಿಡಿ ದೊಡ್ಡ ರೈತರಿಗೆ ಮಾತ್ರ ಅನ್ವಯವಾಗುತ್ತಿದೆ. ಗ್ರಾಮೀಣ ಪ್ರದೇಶದ ರೈತರಿಗೆ ಸಬ್ಸಿಡಿ ಪ್ರಯೋಜನವಾಗುತ್ತಿಲ್ಲ. ಹಾಲು ಉತ್ಪಾದನೆಗೆ ಸಬ್ಸಿಡಿ ಬದಲು ಜಾನುವಾರು ಖರೀದಿಗೆ ಸಬ್ಸಿಡಿ ನೀಡಿದರೆ ಲಾಭ. ಹೆಚ್ಚು ಜಾನುವಾರು ಖರೀದಿಸಿ ಅಧಿಕ ಪ್ರಮಾಣದ ಹಾಲು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡಬಹುದು ಎನ್ನುವುದು ಕೂಡಾ ರೈತರ ಮನವಿ.
ಮುಚ್ಚುತ್ತಿದೆ ಖಾಸಗಿ ಡೇರಿ ಉದ್ಯಮ ಸಬ್ಸಿಡಿ ಎಫೆಕ್ಟ್ ಖಾಸಗಿ ಡೇರಿ ಉದ್ಯಮದ ಮೇಲೂ ಪರಿಣಾಮ ಬೀರಿದೆ. ರಾಜ್ಯದಲ್ಲಿದ್ದ 25ರಷ್ಟು ಖಾಸಗಿ ಡೇರಿಗಳ ಪೈಕಿ ಇಂದು 11ರಷ್ಟು ಡೇರಿಗಳು ಮಾತ್ರ ಉಳಿದಿವೆ. ಕೆಲವು ನಷ್ಟದಲ್ಲೇ ಕಾರ್ಯನಿರ್ವಹಿಸುತ್ತಿವೆ. ಹೆಚ್ಚು ಮೊತ್ತಕ್ಕೆ ಹಾಲು ಖರೀದಿಸಲು ಸಾಧ್ಯವಾಗದ ಸಂಸ್ಥೆಗಳು ಮುಚ್ಚಿವೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಖಾಸಗಿಯವರಿಗೆ ರೈತರು ಹಾಲು ನೀಡುವುದಿಲ್ಲ, ಉ.ಕ.ಭಾಗದಲ್ಲಿ ಹಾಲಿನ ಉತ್ಪಾದನೆಯೇ ಕಡಿಮೆ. ದಕ್ಷಿಣ ಭಾರತದ ಇತರ ರಾಜ್ಯಗಳನ್ನು ಗಮನಿಸಿದರೆ ಶೇ.50ರಷ್ಟು ಹಾಲು ಖಾಸಗಿಯವರಿಗೂ ದೊರೆಯುತ್ತ ದೆ. ಆದರೆ ಕರ್ನಾಟಕದಲ್ಲಿ ಖಾಸಗಿ ಡೇರಿಯವರಿಗೆ ಲಭಿಸುವುದು ಶೇ.15ರಷ್ಟು ಹಾಲು ಮಾತ್ರ. ನೆರೆಯ ಅಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಕಾರ್ಪೊರೇಟ್ ಕಂಪೆನಿಗಳು ಡೇರಿ ಕ್ಷೇತ್ರದಲ್ಲಿ ಸುಮಾರು 20 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದು , ಸುಮಾರು 2.5ಲಕ್ಷದಷ್ಟು ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ. ಅದರೆ ಕರ್ನಾಟಕದಲ್ಲಿ ಯಾವುದೇ ಹೂಡಿಕೆಗೆ ಕಂಪೆನಿಗಳು ಮುಂದೆ ಬರುತ್ತಿಲ್ಲ. ತಮಿಳುನಾಡಿನಲ್ಲಿ 11 ಹಾಗೂ ಅಂಧ್ರಪ್ರದೇಶದಲ್ಲಿ 6 ಖಾಸಗಿ ಹಾಲು ಪೌಡರ್ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಕರ್ನಾಟಕದಲ್ಲಿ ಒಂದೇ ಒಂದು ಘಟಕವಿಲ್ಲ .
ರಾಜ್ಯ ಸರ್ಕಾರದ ಹಾಲು ಸಬ್ಸಿಡಿ ಪರಿಣಾಮ ಹಲವು ಡೇರಿ ಉದ್ದಿಮೆಗಳು ಸ್ಥಗಿತವಾಗಿವೆ. ಈ ಬಗ್ಗೆ ಪ್ರಧಾನ ಮಂತ್ರಿ, ಕೇಂದ್ರ ಪಶುಸಂಗೋಪನೆ ಮತ್ತು ಡೇರಿ ಸಚಿವರಿಗೂ ಮನವಿ ನೀಡಲಾಗಿದೆ. ಸಬ್ಸಿಡಿ ವಿರುದ್ಧ ರೈತರ ಪರವಾಗಿ ನ್ಯಾಯಾಲಯಕ್ಕೂ ಹೋಗಿದ್ದೇವೆ. ಹಾಲಿಗೆ ಸಬ್ಸಿಡಿ ನೀಡಿ ಕೆಲವು ರೈತರನ್ನು ಮಾತ್ರ ಶ್ರೀಮಂತರನ್ನಾಗಿಸುವ ಬದಲು ಜಾನುವಾರು ಖರೀದಿಯಲ್ಲಿ ಸಬ್ಸಿಡಿ ನೀಡಿದರೆ ಎಲ್ಲ ರೈತರು, ಡೇರಿ ಉದ್ಯಮಕ್ಕೂ ಅನುಕೂಲವಾಗಲಿದೆ. ಬಚ್ಚೇಗೌಡ ಆರ್. ಕಾರ್ಯದರ್ಶಿ, ರಾಜ್ಯ ಡೇರಿ ಅಸೋಸಿಯೇಶನ್