ಬೀದರ್ ಜಿಲ್ಲೆಯಲ್ಲಿ ಕ್ಷೀರಕ್ರಾಂತಿ : ಡಾ.ಡಿ.ವೀರೇಂದ್ರ ಹೆಗ್ಗಡೆ ಮುಂದಾಳತ್ವ : ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಅನುದಾನ

New Project (9)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮೂರು ವರ್ಷಗಳ ಹಿಂದೆ ಕರ್ನಾಟಕದ 16 ಹಾಲು ಒಕ್ಕೂಟಗಳ ಪೈಕಿ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲಾ ಹಾಲು ಒಕ್ಕೂಟದಲ್ಲಿ ಅತಿ ಕಡಿಮೆ ಹಾಲು ಸಂಗ್ರಹಣೆಯಾಗುತ್ತಿತ್ತು. ಬೀದರ್ ಜಿಲ್ಲೆಯಲ್ಲಿರುವ ಒಟ್ಟು 518 ಹಾಲು ಉತ್ಪಾದಕರ ಸಂಘಗಳ ಪೈಕಿ 400ರಷ್ಟು ಸಂಘಗಳು ನಿಷ್ಕ್ರಿಯಗೊಂಡಿದ್ದು, ಈ ಸಮಸ್ಯೆ ಗುರುತಿಸಿದ ಡಾ.ಹೆಗ್ಗಡೆಯವರು ಪರಿಹಾರ ಕಂಡುಕೊಂಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಹಾಲು ಮಹಾಮಂಡಳಿ ಬೆಂಗಳೂರು, ಪಶು ವೈದ್ಯಕೀಯ ವಿಶ್ವವಿದ್ಯಾಲಯ ಬೀದರ್, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಮತ್ತು ಕಲಬುರಗಿ ಹಾಲು ಒಕ್ಕೂಟಗಳನ್ನೊಳಗೊಂಡ ಸಮಿತಿ ರಚಿಸಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಅನುದಾನ ಒದಗಿಸಿಕೊಡುವುದರೊಂದಿಗೆ ಬೀದರ್ ಜಿಲ್ಲೆಯ ಕ್ಷೀರಕ್ರಾಂತಿಗೆ 2022ರಲ್ಲಿ ಚಾಲನೆ ನೀಡಿದ್ದರು.

ಪ್ರಥಮ ಹಂತವಾಗಿ ಸ್ಥಗಿತಗೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಪುನಃಶ್ಚೇತನ ಹಾಗೂ ಹೊಸ ಸಂಘಗಳ ರಚನೆ ಮತ್ತು ಹಾಲು ಉತ್ಪಾದಕರ ಸಂಘಗಳಿಗೆ ಅವಶ್ಯವಿರುವ ಮೂಲಸೌಕರ್ಯ ಒದಗಿಸುವ ಸಲುವಾಗಿ ಸಂಸದರ ನಿಧಿಯಿಂದ 2.45 ಕೋಟಿ ರೂ. ಬಿಡುಗಡೆ ಮಾಡಿದರು. ಇದರಿಂದಾಗಿ ಜಿಲ್ಲಾದ್ಯಂತ ಹಾಲು ಉತ್ಪಾದಕರಲ್ಲಿ ಹೊಸ ಚೈತನ್ಯ ಮೂಡಿತು. ಬೀದರ್ ಜಿಲ್ಲೆಯಲ್ಲಿ ಪ್ರತಿ ದಿನ ಸಂಗ್ರಹವಾಗುತ್ತಿದ್ದ 18 ಸಾವಿರ ಲೀಟರ್ ಹಾಲಿನ ಪ್ರಮಾಣ ಇದೀಗ ಖಾಸಗಿ ಸಂಗ್ರಹ ಸೇರಿ 1.18 ಲಕ್ಷ ಲೀಟರ್‌ನ ಗಡಿ ದಾಟಿದೆ.

ಇದೀಗ ಹಾಲು ಒಕ್ಕೂಟಗಳ ಮನವಿ ಮೇರೆಗೆ ಎರಡನೇ ಕಂತಿನ 2.50 ಕೋಟಿ ರೂ. ಮೊತ್ತವನ್ನು ಡಾ.ಹೆಗ್ಗಡೆಯವರು ಬಿಡುಗಡೆ ಮಾಡಿದ್ದಾರೆ. ಈ ಮೊತ್ತದಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಹೊಸ ಕಟ್ಟಡ ರಚನೆ, ಹಾಲು ಪರೀಕ್ಷೆಗೆ ಆಧುನಿಕ ಯಂತ್ರೋಪಕರಣಗಳು, ಹಾಲು ಸಂಗ್ರಹಿಸಲು ಸ್ಟೈನ್‌ಲೆಸ್ ಸ್ಟೀಲ್ ಕ್ಯಾನ್, ಡಿಜಿಟಲ್ ತೂಕ ಯಂತ್ರ ಹಾಗೂ ಅಗತ್ಯ ಪಿಠೋಪಕರಣಗಳನ್ನು ಖರೀದಿಸುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಬಲಪಡಿಸಲಾಗಿದೆ.

ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಹಸುಗಳ ಖರೀದಿಗೆ ಗ್ರಾಮಾಭಿವೃದ್ಧಿ ಯೋಜನೆ ಬ್ಯಾಂಕ್ ಮೂಲಕ ಪ್ರಗತಿನಿಧಿ ವ್ಯವಸ್ಥೆಗೊಳಿಸಿದೆ. ಇಲ್ಲಿ ಸಮತೋಲನ ಪಶು ಆಹಾರದ ಬಳಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ನಮೂನೆಯ ಹಸಿರು ಹುಲ್ಲು ಮೇವಿನ ಬೀಜ ಮತ್ತು ಬೇರುಗಳ ಪೂರೈಕೆ ಮಾಡಲಾಗಿದೆ. ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಸಮಗ್ರ ಪಶು ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದೆ. ಹಾಲಿನ ಗುಣಮಟ್ಟ ಹೆಚ್ಚಿಸಲು ವಲಯವಾರು ಖನಿಜ ಮಿಶ್ರಣದ ಬಳಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷವಾಗಿ ರೈತ ಮಹಿಳೆಯರಿಗೆ ಆಧುನಿಕ ಪದ್ಧತಿಯ ವೈಜ್ಞಾನಿಕ ಹೈನುಗಾರಿಕೆ ತರಬೇತಿ, ಸಂಘದ ಕಾರ್ಯಕಾರಿ ಮಂಡಳಿ ಮತ್ತು ಕಾರ್ಯದರ್ಶಿ ಹಾಗೂ ಹಾಲು ಪರೀಕ್ಷರಿಗೆ ಅಗತ್ಯ ತರಬೇತಿಗಳನ್ನು ನೀಡಲಾಗಿದೆ.

ಬೀದರ್ ಜಿಲ್ಲೆಯಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಕಾರ್ಯಕ್ರಮ ಇನ್ನಷ್ಟು ಪರಿಣಾಮಕಾರಿಯಾಗುವಂತೆ ಮಾಡಲು ಸಂಘದ ಸಿಬ್ಬಂದಿಗೆ ಕೆ.ಎಂ.ಎಫ್.ನ ತರಬೇತಿ ಕೇಂದ್ರದಲ್ಲಿ ತಜ್ಞರಿಂದ ತರಬೇತಿ ಕೊಡಿಸಲಾಗಿದೆ. ಅಧ್ಯಯನ ಪ್ರವಾಸ ಮೂಲಕ ವೈಜ್ಞಾನಿಕ ಹೈನುಗಾರಿಕೆ ಮಾಡುವುದನ್ನು ತಿಳಿಸಿಕೊಡಲಾಗಿದೆ. ಸಂಘಗಳಲ್ಲಿ ಮಾಸಿಕ ಮತ್ತು ವಾರ್ಷಿಕ ಸಭೆಗಳನ್ನು ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸರ್ಕಾರ ನೀಡುವಂತಹ ಪ್ರೋತ್ಸಾಹಧನದೊಂದಿಗೆ ಹೈನುಗಾರರಿಗೆ ತಾವು ನಿತ್ಯ ಹಾಲು ಮಾರಾಟ ಮಾಡಿದ್ದಕ್ಕೆ ಸಂಬಂಧಪಟ್ಟ ಮೊತ್ತವನ್ನು ಅವರ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಮಾಡಲಾಗಿದೆ.

ಶುದ್ಧ ಹಾಲು ಉತ್ಪಾದನೆಗೆ ಪ್ರಯತ್ನ

ಇದೀಗ ಬೀದರ್ ಜಿಲ್ಲೆಯಲ್ಲಿ ಒಟ್ಟು 17 ಹೊಸ ಹಾಲು ಉತ್ಪಾದಕರ ಸಂಘಗಳ ಕಟ್ಟಡಗಳನ್ನು ನಿರ್ಮಿಸಲಾಗಿದೆ. 131 ಸಂಘಗಳಿಗೆ ಹಾಲು ಪರೀಕ್ಷೆ ಯಂತ್ರ, 20 ಸಂಘಗಳಿಗೆ ಫ್ಯಾಟೋಮೇಟಿಕ್ ಯಂತ್ರ, 29 ಸಂಘಗಳಿಗೆ ಹಾಲು ಸಂಗ್ರಹಣಾ ಉಪಕರಣ, 29 ಸಂಘಗಳಿಗೆ ತೂಕದ ಯಂತ್ರಗಳನ್ನು ನೀಡಲಾಗಿದೆ. 1,672 ಸ್ಟೈನ್‌ಲೆಸ್ ಸ್ಟೀಲ್ ಹಾಲಿನ ಕ್ಯಾನ್‌ಗಳನ್ನು ನೀಡುವುದರ ಮೂಲಕ ಜಿಲ್ಲಾದ್ಯಂತ ಪ್ಲಾಸ್ಟಿಕ್ ಮತ್ತು ಅಲ್ಯೂಮಿನಿಯಂ ಕ್ಯಾನ್‌ಗಳನ್ನು ಬಳಸದೆ ಶುದ್ಧ ಹಾಲು ಉತ್ಪಾದನೆಗೆ ಪ್ರಯತ್ನಿಸಲಾಗಿದೆ. ಇದರಿಂದಾಗಿ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗಿದೆ. ಹಾಲಿನ ಸಂಘಗಳಲ್ಲಿ ಮಾಸಿಕ ಸಭೆ ಮತ್ತು ತರಬೇತಿಗಳನ್ನು ನೀಡಲು ಅನುಕೂಲವಾಗುವಂತೆ 38 ಸಂಘಗಳಿಗೆ ಪೀಠೋಪಕರಣಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಕೃತಕ ಗರ್ಭಧಾರಣೆ ಮಾಡಲು 41 ದ್ರವಸಾರಜನಕದ ಜಾಡಿಯನ್ನು ಒದಗಿಸಲಾಗಿದೆ.

ಹೈನುಗಾರಿಕೆಗೆ ಪ್ರೋತ್ಸಾಹ

ಈಗಾಗಲೇ ಡಾ.ಹೆಗ್ಗಡೆಯವರ ಸಂಸದರ ಅನುದಾನದಡಿ ಬೀದರ್ ಜಿಲ್ಲೆಗೆ ಮೂಲಸೌಕರ್ಯಗಳನ್ನು ಒದಗಿಸುವ ಸಲುವಾಗಿ ಮೊದಲ ಮತ್ತು ಎರಡನೇ ಹಂತದ ಯೋಜನೆಯಡಿ ಒಟ್ಟು 5 ಕೋಟಿ ರೂ. ವಿನಿಯೋಗಿಸಿದ್ದು, ಇದರಿಂದಾಗಿ ಬೀದರ್ ಹೈನುಗಾರಿಕಾ ನಗರವಾಗಿ ಬೆಳೆಯುತ್ತಿದೆ. ಕಳೆದ ನಾಲ್ಕುವರೆ ದಶಕಗಳಿಂದ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವುದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಪ್ರಮುಖ ಭಾಗವಾಗಿದೆ. ಇದುವರೆಗೆ ರಾಜ್ಯದ 5,090 ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ರಚನೆ ಕಾಮಗಾರಿಗಳಿಗೆ ಒಟ್ಟು 39 ಕೋಟಿ ರೂ. ಮೊತ್ತದ ಅನುದಾನವನ್ನು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀಡಿರುವುದನ್ನು ನೆನಪಿಸಿಕೊಳ್ಳಬಹುದು. ಇದರೊಂದಿಗೆ ಹೈನುಗಾರಿಕಾ ಇಲಾಖೆಗಳಿಗೂ ಹಾಲು ಪರೀಕ್ಷಾ ಯಂತ್ರ, ತೂಕದ ಯಂತ್ರ, ಹಾಲಿನ ಕ್ಯಾನ್ ಮುಂತಾದ ಅಗತ್ಯ ಉಪಕರಣಗಳನ್ನು ನೀಡುತ್ತಾ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net