

ತುಮಕೂರು: ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಫೆ.1ರಿಂದ ಉತ್ಪಾದಕರಿಂದ ಖರೀದಿಸುವ ಲೀಟರ್ ಹಾಲಿನ ಬೆಲೆಯನ್ನು 2ರೂ. ಹೆಚ್ಚಿಸಿದೆ. ಈವರೆಗೆ 25.75 ರೂಪಾಯಿಯಿದ್ದ ಹಾಲಿನ ಬೆಲೆ ೆ.1ರಿಂದ 27.01 ರೂಪಾಯಿ ಆಗಲಿದೆ.
ಮಲ್ಲಸಂದ್ರದ ಆಡಳಿತ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಹಾಗೂ ನಿರ್ದೇಶಕರು ಬೆಲೆ ಹೆಚ್ಚಿಸಲು ತೀರ್ಮಾನಿಸಿ, ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. 3.5 ಜಿಡ್ಡಿನಾಂಶ ಇರುವ ಹಾಲಿಗೆ ಉತ್ಪಾದಕರಿಗೆ 25 ರೂ., ಸಂಘಗಳಿಗೆ 25.75ರೂ. ಹಾಗೂ 4.1 ಜಿಡ್ಡಿನಾಂಶವಿರುವ ಹಾಲಿಗೆ 26.28ರೂ., ಸಂಘಗಳಿಗೆ 27.01ರೂ. ನೀಡಲಾಗುತ್ತಿದೆ. ಬೆಲೆ ಹೆಚ್ಚಳದಿಂದ ಪ್ರತಿದಿನ 14.60ಲಕ್ಷ ರೂ. ಹೆಚ್ಚುವರಿ ಖರ್ಚು ಒಕ್ಕೂಟಕ್ಕೆ ಬೀಳಲಿದೆ. ಪ್ರಸ್ತುತ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಒಕ್ಕೂಟಗಳಲ್ಲಿ ಇದಕ್ಕಿಂತ ಕಡಿಮೆ ದರ ನೀಡಲಾಗುತ್ತಿದೆ ಎಂದು ಅಧ್ಯಕ್ಷರು ಸಮರ್ಥಿಸಿಕೊಂಡರು.
ತುಮಕೂರು ಒಕ್ಕೂಟದಲ್ಲಿ ಪ್ರತಿದಿನ 7.79 ಲಕ್ಷ ಕೆಜಿ ಹಾಲು ಶೇಖರಣೆಯಾಗುತ್ತಿದೆ, 1238 ಸಂಘಗಳು ಕಾರ್ಯನಿರ್ವಹಿಸುತ್ತಿದ್ದು 2.67ಲಕ್ಷ ಸದಸ್ಯರಿದ್ದಾರೆ. ಇವರ ಪೈಕಿ 71804 ಜನರು ಹಾಲು ಸರಬರಾಜು ಮಾಡುತ್ತಿದ್ದಾರೆ. ಪ್ರತಿದಿನ 1.10 ಕೋಟಿ ರೂ. ಬಟವಾಡೆ ಮಾಡಲಾಗುತ್ತಿದೆ. ಒಕ್ಕೂಟ ನೀಡುತ್ತಿರುವ ಹಾಲಿನ ದರದ ಜತೆಗೆ ರಾಜ್ಯ ಸರ್ಕಾರ ನೀಡುವ 5ರೂ. ಕೂಡ ರೈತರಿಗೆ ಸಿಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ, ನಿರ್ದೇಶಕರಾದ ಚನ್ನಮಲ್ಲಯ್ಯ, ಹಳೆಮನೆ ಶಿವನಂಜಯ್ಯ, ಚಂದ್ರಶೇಖರ್ ಇದ್ದರು.
ಮಾರುಕಟ್ಟೆಯಲ್ಲಿ ಬೆಳೆಗೆ ನ್ಯಾಯಯುತ ಬೆಲೆ ಸಿಗದಂತಾಗಿದೆ, ಪಶು ಆಹಾರ ಬೆಲೆ ಹಾಗೂ ಹಾಲಿನ ಉತ್ಪಾದನಾ ವೆಚ್ಚವೂ ಹೆಚ್ಚಾಗಿದೆ. ಹಾಲು ಒಕ್ಕೂಟದ ಲಾಭಕ್ಕೆ ಆದ್ಯತೆ ನೀಡರೆ ಪ್ರತಿ ಲೀಟರ್ ಹಾಲನ್ನು ಕನಿಷ್ಠ 30ರೂಗೆ ಕೊಂಡುಕೊಳ್ಳುವ ಬಗ್ಗೆ ಚಿಂತಿಸಬೇಕು. ಬಸವರಾಜು ಹಾಲು ಉತ್ಪಾದಕ ಕೆಂಕೆರೆ