

ಹನೂರು: ಕಳೆದ ಸಾಲಿನಲ್ಲಿ ಹನೂರಿನ ಹಾಲು ಉತ್ಪಾದಕರ ಸಹಕಾರ ಸಂಘವು 7.89 ಲಕ್ಷ ರೂ. ಲಾಭ ಗಳಿಸಿದ್ದು, ಇದರಲ್ಲಿ 3.25 ಲಕ್ಷ ರೂ. ಅನ್ನು ಉತ್ಪಾದಕರಿಗೆ ಬೋನಸ್ ನೀಡಲಾಗುವುದು ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ತಿಳಿಸಿದರು.
ಪಟ್ಟಣದ ಆರ್‌ಎಂಸಿ ಪ್ರಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹನೂರು ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಮೈಮುಲ್‌ನಿಂದ ಪತ್ಯೇಕಗೊಂಡು 2015ರಲ್ಲಿ ಕುದೇರಿನಲ್ಲಿ ಸ್ಥಾಪನೆಯಾದ ಚಾಮುಲ್‌ನಲ್ಲಿ ಪ್ರತಿನಿತ್ಯ 3 ಲಕ್ಷ ಲೀಟರ್ ಹಾಲು ಸಂಗ್ರಹಣೆಯಾಗುತ್ತಿದೆ. ಹಾಲು ಮಾರಾಟ ಸೇರಿದಂತೆ ಮೊಸರು, ತುಪ್ಪ, ಪೇಡ ಹಾಗೂ ಸಿಹಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಒಕ್ಕೂಟವು ಈ ಬಾರಿ 3.34 ಕೋಟಿ ರೂ. ಲಾಭ ಗಳಿಸಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಈ ದೆಸೆಯಲ್ಲಿ ಐಸ್ ಕ್ರೀಂ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಕೆಎಂಎಫ್‌ನಿಂದ ಅನುಮತಿ ಪಡೆಯಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಆದ್ದರಿಂದ ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಇದಕ್ಕೆ ಸಹಕಾರ ನೀಡಬೇಕು. ಇನ್ನು ಹನೂರಿನ ಡೇರಿಯು ಸ್ಥಾಪನೆಯಾಗಿ 45 ವರ್ಷಗಳೇ ಕಳೆದಿದ್ದು, ರೈತರ ಸಹಕಾರ, ಆಡಳಿತ ಮಂಡಳಿಯ ಕಾರ್ಯ ವೈಖರಿಯಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಪ್ರತಿ ವರ್ಷ ಹೆಚ್ಚಿನ ರೀತಿಯಲ್ಲಿ ಲಾಭ ಪಡೆಯುತ್ತಿದೆ. 7.89 ಲಕ್ಷ ರೂ. ಲಾಭ ಗಳಿಸಿದೆ. ಇದು ಹೀಗೆಯೇ ಮುಂದುವರಿಯಬೇಕಾದರೆ ಪ್ರತಿಯೊಬ್ಬರೂ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಸಬೇಕು. ಇನ್ನು ಪ್ರತಿಯೊಬ್ಬರೂ ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವ ಜತೆಗೆ ಸರ್ಕಾರದಿಂದ ಸಿಗುವ ಬಿತ್ತನೆ ಬೀಜ, ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ ಹಾಗೂ ಇನ್ನಿತರ ಸವಲತ್ತು ಪಡೆದುಕೊಂಡು ಸಂಘ ಹಾಗೂ ಒಕ್ಕೂಟದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಂಘದ ಖರ್ಚು, ಲಾಭದ ವಿವರ ಹಾಗೂ 2025-26ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆ ನೀಡಲಾಯಿತು. ರೈತರಿಂದ ಕೆಲ ಸಲಹೆ, ಸೂಚನೆ ಸ್ವೀಕರಿಸಲಾಯಿತು.
ಚಾಮುಲ್ ನಿರ್ದೇಶಕರಾದ ಶಾಹುಲ್ ಅಹಮ್ಮದ್, ಉದ್ದನೂರು ಪ್ರಸಾದ್, ಸಂಘದ ಅಧ್ಯಕ್ಷ ಪ್ರದೀಪ್, ಉಪಾಧ್ಯಕ್ಷ ನಾಗಣ್ಣ, ನಿರ್ದೇಶಕರಾದ ಹರೀಶ್, ದೇವೇಗೌಡ, ನಾರಾಯಣನಾಯ್ಡು, ರೇವಣ್ಣ, ಮುನೇಂದ್ರಸ್ವಾಮಿ, ಸಿದ್ದರಾಜು, ಹೇಮಾವತಿ, ಜಯಮ್ಮ, ಚಿಕ್ಕತಾಯಮ್ಮ, ಒಕ್ಕೂಟದ ವಿಸ್ತರಣಾಧಿಕಾರಿ ವೆಂಕಟೇಶ್, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ರವೀಂದ್ರ ಇತರರು ಇದ್ದರು.