'ಹಾಲು ಉತ್ಪಾದಕರ ಸಹಕಾರ ಸಂಘಗಳು ಪರವಾನಗಿ ಪಡೆಯುವುದು ಅವಶ್ಯ'

5
Published on

ಮೈಸೂರು: ದೇಶದಲ್ಲಿ ಆಹಾರ ಸುರಕ್ಷತೆ ಕಾಯ್ದೆ ಅನ್ವಯ ಹಾಲು ಉತ್ಪಾದಕರ ಸಹಕಾರ ಸಂಘಗಳು ನೋಂದಣಿ ಮಾಡಿಸಿ ಪರವಾನಗಿ ಪಡೆಯುವುದು ಅವಶ್ಯಕ ಎಂದು ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತಾಧಿಕಾರಿ ಡಾ.ಎ.ಎನ್.ಕಾಂತರಾಜು ತಿಳಿಸಿದರು.

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್), ಆಹಾರ ಸುರಕ್ಷಿತಾ ಗುಣಮಟ್ಟ ಪ್ರಾಧಿಕಾರ, ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣಪತ್ರ ಕೇಂದ್ರದಿಂದ ಮೈಮುಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಹಕಾರ ಸಂಘಗಳ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಡೀ ದೇಶದಲ್ಲಿಯೇ ಆಹಾರ ಸುರಕ್ಷತಾ ಕಾಯ್ದೆ ಜಾರಿಗೊಂಡಿರುವುದರಿಂದ ಆಹಾರ ವಸ್ತುಗಳನ್ನು ಉತ್ಪಾದಿಸುವ ಪ್ರತಿಯೊಂದು ಸಂಸ್ಥೆ, ವ್ಯಕ್ತಿಗಳು ನೋಂದಣಿ ಮಾಡಿಸುವುದು ಅಗತ್ಯ ಎಂದು ಹೇಳಿದರು.

ಜಿಲ್ಲೆಯ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದಲ್ಲಿ ನಿಗದಿತ ಶುಲ್ಕ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ಅಲ್ಲದೇ 3ರಿಂದ 5 ವರ್ಷಗಳವರೆಗೆ ಪರವಾನಗಿ ಪಡೆದುಕೊಳ್ಳಬೇಕಿದೆ. ಇಲ್ಲವಾದರೆ 5ರಿಂದ 10 ಲಕ್ಷ ರೂ.ವರೆಗೆ ದಂಡ, 6 ತಿಂಗಳಿನಿಂದ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ವಿವರಿಸಿದರು.

ಇತ್ತೀಚಿನ ದಿನಗಳಲ್ಲಿ ಹಾಲಿನಲ್ಲಿಯೂ ಕಲಬೆರಕೆ ಬರುತ್ತಿದೆ ಎನ್ನುವ ದೂರಿದೆ. ಹೀಗಾಗಿ ಸರ್ಕಾರ, ಎಲ್ಲ ಹಾಲಿನ ಡೇರಿಗಳಲ್ಲಿ ಪರೀಕ್ಷೆ ಮಾಡಬೇಕು. ಜತೆಗೆ ಆಹಾರ ಸುರಕ್ಷತೆ ಕಾಯ್ದೆ ಅನ್ವಯ ಗುಣಮಟ್ಟ ಕಾಯ್ದುಕೊಂಡು ನಿಯಮ ಪಾಲಿಸಲಾಗುತ್ತಿದೆಯೇ, ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆಯೇ ಎನ್ನುವುದನ್ನು ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.

ಆದ್ದರಿಂದ ಜಿಲ್ಲೆಯ ಎಲ್ಲ ಹಾಲಿನ ಡೇರಿಗಳು ಎಫ್‌ಎಸ್‌ಎಸ್‌ಎಐ ಅಡಿ ನೋಂದಣಿ ಮಾಡಿಸಿ ಪ್ರಮಾಣ ಪತ್ರ ಪಡೆಯಬೇಕು. ಇಲ್ಲವಾದರೆ ದಾಳಿಯ ವೇಳೆ ಪರವಾನಗಿ ಇಲ್ಲದಿರುವುದು ಕಂಡುಬಂದರೆ ಕಾನೂನು ರೀತಿ ಕ್ರಮ ವಹಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ವೈಯಕ್ತಿಕ ಲಾಭಕ್ಕಾಗಿ ಕಲಬೆರಕೆ ಮಾಡುವುದು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಪ್ರತ್ಯೇಕ ವಿಭಾಗವನ್ನು ತೆರೆದು ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಯಾವುದೇ ವ್ಯಾಪಾರಿ ಸಾಮಾಜಿಕ ಬದ್ಧತೆ, ನನ್ನ ಮನೆಯವರು ಕಲಬೆರಕೆ ಆಹಾರ ತಿನ್ನಬಾರದು ಎನ್ನುವ ಭಾವನೆ ಮೂಡಬೇಕು ಎಂದರು.

ಕಲಬೆರಕೆ ಹೆಚ್ಚಾಗುತ್ತಿರುವುದರಿಂದ ಮಾರಕವಾದ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ನೆಗಡಿ, ಕೆಮ್ಮಿನಂತೆ ಆಗಿ ಬಿಟ್ಟಿದೆ. ಈ ಪ್ರಮಾಣ ಕ್ಯಾನ್ಸರ್ ಏರಿಕೆ ಕಂಡರೆ ಗಾಬರಿ ಹುಟ್ಟಿಸುವಂತಿದೆ. ಇಂತಹ ಅಕ್ರಮದಿಂದ ಹಣ ಸಂಪಾದಿಸಿದರೂ ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ತುತ್ತಾದರೆ ಜೀವನದ ಜತೆಗೆ ಸಂಪಾದಿಸಿದ ಹಣವನ್ನೆಲ್ಲಾ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಆದ್ದರಿಂದ ಈ ಕುರಿತು ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದಿಂದ ಎಲ್ಲೆಡೆ ಜಾಗೃತಿ ಮೂಡಿಸುವ ಮೂಲಕ ಕಲಬೆರಕೆಯಿಂದ ಉಂಟಾಗುವ ಅನಾಹುತವನ್ನು ತಿಳಿಸಿಕೊಡಲಾಗುತ್ತಿದೆ. ಜತೆಗೆ ದೇಶದಲ್ಲಿ ಇರುವ ಕಾನೂನಿನ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.

ಮೈಮುಲ್ ನಿರ್ದೇಶಕರಾದ ಮಾಜಿ ಅಧ್ಯಕ್ಷ ಕೆ.ಉಮಾಶಂಕರ್ ಮಾತನಾಡಿ, ಕೆಎಂಎಫ್ ಇಂದು ರಾಜ್ಯ ಅಲ್ಲದೇ ಹೊರ ರಾಜ್ಯಗಳಲ್ಲಿಯೂ ತನ್ನದೇ ಅದ ಘನತೆ, ಜನರ ವಿಶ್ವಾಸವನ್ನು ಹೊಂದಿದೆ. ಆ ಘನತೆಯನ್ನು ಉಳಿಸಿಕೊಂಡು ಜನರ ವಿಶ್ವಾಸ ಉಳಿಸಿಕೊಳ್ಳಬೇಕಾಗಿರುವುದು ಎಲ್ಲರ ಜವಾಬ್ದಾರಿ ಎಂದರು.

ನಂದಿನಿ ಉತ್ಪನ್ನಗಳು ಎಂದರೆ ಭರವಸೆ ಇದೆ. ಆದರೆ ಅಲ್ಲೊಂದು ಇಲ್ಲೊಂದು ಘಟನೆಗಳು ಕುಂದುಂಟು ಮಾಡುತ್ತಿದೆ. ಆದ್ದರಿಂದ ಡೇರಿಗಳಲ್ಲಿಯೇ ಎಚ್ಚರಿಕೆ ವಹಿಸಿ, ಸರ್ಕಾರ ನಿಗದಿಪಡಿಸಿರುವ ಗುಣಮಟ್ಟವನ್ನು ಸದಾ ಕಾಯ್ದುಕೊಳ್ಳಬೇಕು. ಇಲಾಖೆಯಲ್ಲಿ ನೋಂದಣಿ ಮಾಡಿಸಿ ಗುಣಮಟ್ಟದ ಪರವಾನಗಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮೈಮುಲ್ ನಾಮನಿರ್ದೇಶನ ನಿರ್ದೇಶಕ ಬಿ.ಗುರುಸ್ವಾಮಿ, ವ್ಯವಸ್ಥಾಪಕ ಎಲ್.ಆರ್.ಕರಿಬಸವರಾಜು, ಉಪ ವ್ಯವಸ್ಥಾಪಕ ಡಾ.ಗೌರಿಶಂಕರ್ ಸಾಹು, ಲಾವಣ್ಯವತಿ, ತಾಲೂಕು ಮೇಲ್ವಿಚಾರಕ ಎಸ್.ಸಂತೋಷ್‌ಕುಮಾರ್, ವಿಸ್ತರಣಾಧಿಕಾರಿಗಳಾದ ಡಾ.ಎಂ.ಶಿವಕುಮಾರ್, ಡಾ.ಎಂ.ಪರಮೇಶ್, ರಮ್ಯಶ್ರೀ ಇತರರು ಇದ್ದರು.

ಆಹಾರ ಸುರಕ್ಷತಾ ತರಬೇತಿ ಮತ್ತು ಪ್ರಮಾಣ ಪತ್ರ ಕೇಂದ್ರದ ತರಬೇತುದಾರ ರಾಘವೇಂದ್ರಶೆಟ್ಟಿ, ಯಶವಂತ್ ಅರುಣ್, ರಶ್ಮಿ, ಮೈಮುಲ್ ವಿಸ್ತರಣಾಧಿಕಾರಿ ಮೇಘನಾ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net