ಹಾಲಿನ ದರ ಕನಿಷ್ಠ 5 ರೂ. ಏರಿಕೆಗೆ ಸಹಕಾರ ಭಾರತಿ ಒತ್ತಾಯ

udp-11-sahakara
Published on

ಉಡುಪಿ: ಅತಿವೃಷ್ಟಿ ಮತ್ತು ಅನಾವೃಷ್ಟಿ ಮತ್ತಿತರ ಪ್ರಾಕೃತಿಕ ವೈಪರೀತ್ಯಗಳಿಂದ, ಪಶು ಆಹಾರ, ಹಸಿಹುಲ್ಲು, ಚಿಕಿತ್ಸೆ ಔಷಧೋಪಚಾರ, ಕೂಲಿ ಸಂಬಳ, ಸಾಗಾಟ ಇನ್ನಿತರ ವೆಚ್ಚಗಳು ನಿರಂತರವಾಗಿ ಏರುತ್ತಿದೆ. ಆದರೆ ಕಳೆದ ಮೂರು ವರ್ಷಗಳಿಂದ ರೈತರಿಂದ ಖರೀದಿಸುವ ಹಾಲಿಗೆ ದರ ಹೆಚ್ಚಳವಾಗಿಲ್ಲ. ಇದರಿಂದ ರೈತ ಕುಟುಂಬಗಳು ಹೈನುಗಾರಿಕೆಯಿಂದಲೇ ವಿಮುಖರಾಗುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ರಾಜ್ಯ ಸರ್ಕಾರ ಹಾಲಿನ ದರ ಲೀಟರ್‌ಗೆ ಕನಿಷ್ಠ 5 ರೂ. ಏರಿಕೆ ಮಾಡಬೇಕು ಎಂದು ಸಹಕಾರ ಭಾರತಿ ರಾಜ್ಯ ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದಲ್ಲಿ ಕಳೆದ ಎರಡು ಮೂರು ತಿಂಗಳುಗಳಲ್ಲಿ ದಿನವಹಿ ಸರಿ ಸುಮಾರು ಒಂದು ಲಕ್ಷ ಲೀ. ಹಾಲು ಸಂಗ್ರಹ ಕಡಿಮೆಯಾಗುತ್ತಿದೆ. ರಾಜ್ಯದ ಕೆಎಂಎಫ ವ್ಯಾಪ್ತಿಯಲ್ಲಿ (16 ಒಕ್ಕೂಟ) ಸರಿಸುಮಾರು 40 ರಿಂದ 50 ಲಕ್ಷ ಲೀ. ದಿನವಹಿ ಹಾಲು ಸಂಗ್ರಹದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದು ಹಾಲು ಉತ್ಪಾದನೆಯಲ್ಲಿ ರೈತಾಪಿವರ್ಗ ಎದುರಿಸುತ್ತಿರುವ ಸವಾಲು ಮತ್ತು ಆತಂಕಗಳ ಸೂಚಕವಾಗಿದೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಕ್ಟೋಬರ್ ತಿಂಗಳಿನಿಂದ ಹಾಲಿನ ಖರೀದಿ ದರಕ್ಕೆ ಹೆಚ್ಚುವರಿಯಾಗಿ 2 ರೂ. ಪ್ರೋತ್ಸಾಹ ಧನ ನೀಡಲಿದೆ. ಒಂದು ಲೀಟರ್ ಹಾಲು ಉತ್ಪಾದನೆಗೆ ತಗಲುವ ಖರ್ಚು ವೆಚ್ಚ ಜಾಸ್ತಿಯಾಗಿರುವುದರಿಂದ ರಾಜ್ಯ ಸರ್ಕಾರ ಕನಿಷ್ಠ 10 ರೂ. ಪ್ರೋತ್ಸಾಹ ಧನ ನೀಡಬೇಕು ಅಥವಾ ಮಾರುಕಟ್ಟೆ ದರವನ್ನು 5 ರೂ. ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.

ದೀಪಾವಳಿ ಬಳಿಕ ಪ್ರತಿಭಟನೆ
ರಾಜ್ಯ ಸರ್ಕಾರ ಸಹಕಾರ ಭಾರತಿ ಬೇಡಿಕೆಗೆ ಸ್ಪಂದಿಸದಿದ್ದರೆ ದೀಪಾವಳಿ ಗೋಪೂಜೆ ಬಳಿಕ ಗ್ರಾಮೀಣ ಹೈನುಗಾರರನ್ನು ಸಂಘಟಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಉಡುಪಿ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಮೈಸೂರು ಪ್ರಾಂತ ಸಂಚಾಲಕ ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ನಿರ್ದೇಶಕ ಕಮಲಾಕ್ಷ ಹೆಬ್ಬಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net