

ಅವಿನಾಶ್ ಜೈನಹಳ್ಳಿ ಮೈಸೂರು
ರಾಜ್ಯದಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯ ಸರ್ಕಾರ ನಂದಿನಿ ಹಾಲಿನ ಪ್ರತಿ ಲೀಟರ್‌ಗೆ 4 ರೂ. ದರ ಹೆಚ್ಚಳ ಮಾಡಿರುವುದು ಸಂಕಷ್ಟದಲ್ಲಿದ್ದ ರೈತರಿಗೆ ವರದಾನವಾಗಿದ್ದು, ಜಿಲ್ಲೆಯ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ.
ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 1,220 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವವಹಿಸುತ್ತಿದ್ದು, ಹೈನುಗಾರ ರೈತರ ಪೈಕಿ ಸರಾಸರಿ 1.05 ಲಕ್ಷ ರೈತರು ಪ್ರತಿದಿನ ಸಂಘಗಳಿಗೆ ಹಾಲು ಸರಬರಾಜು ಮಾಡುತ್ತಾರೆ. ಒಕ್ಕೂಟವು ಉತ್ಪಾದಕರಿಂದ ಹಾಲು ಖರೀದಿಸಿ, ಸಂಸ್ಕರಿಸಿ, ನಂದಿನಿ ಬ್ರಾೃಂಡ್ ಅಡಿಯಲ್ಲಿ ವಿವಿಧ ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಒದಗಿಸುತ್ತಿದೆ. ರೈತರು ಹೈನುಗಾರಿಕೆಯನ್ನು ಉಪಕಸುಬಾಗಿ ಅಳವಡಿಸಿಕೊಂಡಿದ್ದು, ರೈತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಒಕ್ಕೂಟವು ಹಲವು ಯೋಜನೆಗಳ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ.
ರಾಜ್ಯದ ಬಹುಪಾಲು ರೈತರು ಪಶುಸಂಗೋಪನೆಯನ್ನು ಅವಲಂಬಿಸಿದ್ದು, ಇತ್ತೀಚಿನ ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಹೈನುಗಾರಿಕೆ ದುಬಾರಿಯಾಗಿ ಪರಿಣಮಿಸಿದೆ. ಈ ನಡುವೆ ಸರ್ಕಾರ ಹಾಲಿನ ದರ ಹೆಚ್ಚಿಸಿ ರೈತರಿಗೆ ನೀಡುವ ಮೂಲಕ ಸಂಕಷ್ಟದಲ್ಲಿದ್ದ ರೈತರನ್ನು ಪಾರುಮಾಡಿದೆ. ಇದು ಜನಸಾಮಾನ್ಯರಿಗೆ ಒಂದಷ್ಟು ತೊಂದರೆಯಾದರೂ ಹಾಲು ಉತ್ಪಾದಿಸುವ ರೈತರಿಗೆ ಅನುಕೂಲವಾಗಿದೆ ಎಂದು ರೈತರು ಸರ್ಕಾರದ ನಿಲುವಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಹಸು ಸಾಕಣೆಗೆ ಲಕ್ಷಾಂತರ ಬಂಡವಾಳ ಹೂಡುವ ಜತೆಗೆ ರಾಸುಗಳನ್ನು ಮಕ್ಕಳಂತೆ ಆರೈಕೆ ಮಾಡಬೇಕು. ವರ್ಷದಿಂದ ವರ್ಷಕ್ಕೆ ಏರಿಕೆಯಾಗುವ ಪಶು ಆಹಾರ, ಮೇವು, ರಸಗೊಬ್ಬರದ ದರದ ನಡುವೆಯೂ ಕಡಿಮೆ ಬೆಲೆಗೆ ಹಾಲು ಒಕ್ಕೂಟಗಳಿಗೆ ಮಾರಾಟ ಮಾಡುತ್ತಿದ್ದಾರೆ.
1ರಿಂದ 5 ಲೀಟರ್ ಹಾಲು ನೀಡುವ ಹಸುವಿಗೆ ನಿತ್ಯ 200 ರೂ. ನಿಂದ 220 ರೂ., 5ರಿಂದ 10 ಲೀಟರ್ ನೀಡುವ ಹಸುವಿಗೆ 300ರಿಂದ 320 ರೂ. ಹಾಗೂ 10ರಿಂದ 15 ಲೀಟರ್ ಮತ್ತು ಅದಕ್ಕೂ ಹೆಚ್ಚು ಹಾಲು ನೀಡುವ ಹಸುವಿಗೆ 500 ರೂ. ವೆಚ್ಚವಾಗಲಿದೆ. ಈ ವೆಚ್ಚದ ನಡುವೆಯೂ ಲೀಟರ್‌ಗೆ 10ರಿಂದ 15 ರೂ.ನಷ್ಟೇ ಆದಾಯ ಗಳಿಸುತ್ತಿರುವ ರೈತರಿಗೆ ಹೈನುಗಾರಿಕೆ ಲಾಭಕ್ಕಿಂದ ಖರ್ಚೆ ಹೆಚ್ಚಾಗಿದೆ.
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಒಂದರಲ್ಲೇ ಪ್ರತಿನಿತ್ಯ 8 ಲಕ್ಷದ 20 ಸಾವಿರ ಲೀಟರ್ ಹಾಲನ್ನು ರೈತರಿಂದ ಖರೀದಿ ಮಾಡಲಾಗುತ್ತಿದೆ. ಇದರಲ್ಲಿ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪಾ, ಹಾಲಿನ ಪುಡಿ ಹಾಗೂ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ಒಕ್ಕೂಟವೂ ಲಾಭದಲ್ಲಿದ್ದು, ರೈತರ ಅಭ್ಯುದಯಕ್ಕೂ ಒತ್ತು ನೀಡಿದೆ.
ರಾಜ್ಯದಲ್ಲಿ ಜನಪ್ರಿಯವಾಗಿರುವ ನಂದಿನಿ ಹಾಲನ್ನು ಕರ್ನಾಕಕ್ಕಷ್ಟೇ ಸೀಮಿತ ಮಾಡದೇ ನೆರೆಯ ಕೇರಳ ಮತ್ತು ತಮಿಳು ನಾಡಿನಲ್ಲೂ ಮಾರಾಟ ಮಾಡಲಾಗುತ್ತಿದೆ. ಪ್ರತಿನಿತ್ಯ ತಮಿಳುನಾಡಿಗೆ 50 ಸಾವಿರ ಲೀಟರ್ ಹಾಲು ಪೂರೈಕೆ ಮಾಡುತ್ತಿದ್ದರೆ ಕೇರಳ ರಾಜ್ಯಕ್ಕೆ 15 ಸಾವಿರ ಲೀಟರ್ ಪೂರೈಕೆ ಮಾಡಲಾಗುತ್ತಿದೆ. ಈ ವರ್ಷ ತಮಿಳುನಾಡಿನಲ್ಲಿ 2 ಲಕ್ಷ ಲೀಟರ್ ಹಾಲು ಮಾರಾಟಕ್ಕೆ ಗುರಿ ಹೊಂದಲಾಗಿದ್ದು, ಕೇರಳ ರಾಜ್ಯದಲ್ಲಿ 50 ಸಾವಿರ ಲೀಟರ್ ಹಾಲು ಮಾರಾಟಕ್ಕೆ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಮೈಮುಲ್ ಅಧ್ಯಕ್ಷ ಆರ್. ಚೆಲುವರಾಜು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳ ಮಾಡಿದ್ದು, ಈ ಹಣವನ್ನು ಒಕ್ಕೂಟವೇ ರೈತರಿಗೆ ನೀಡಲಿದೆ. ಹಾಲಿನ ಬೆಲೆ 4 ರೂ. ಹೆಚ್ಚಳ ಮಾಡಿದ ಬಳಿಕ, ಹಾಲು ಒಕ್ಕೂಟಕ್ಕೆ ಮಾರಾಟ ಮಾಡುವ ರೈತರಿಗೆ ಹೆಚ್ಚುವರಿ 4 ರೂ. ಹಣವನ್ನು ಸರ್ಕಾರ ನೀಡುತ್ತದೆಯೋ ಇಲ್ಲ, ಒಕ್ಕೂಟ ಭರಿಸುತ್ತದೆಯೋ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಜಿಲ್ಲೆಯ ರೈತರಿಂದ ಪ್ರತಿ ಲೀಟರ್ ಹಾಲಿಗೆ 32.10 ರೂ. ನೀಡಿ ಒಕ್ಕೂಟವೇ ಖರೀದಿ ಮಾಡುತ್ತಿದೆ. ಸರ್ಕಾರದ ಆದೇಶದನ್ವಯ ಏಪ್ರಿಲ್ 1ರಿಂದ ಪ್ರತಿ ಲೀಟರ್‌ಗೆ 36.20 ರೂ. ನೀಡಿ ಖರೀದಿಸಲಾಗುತ್ತಿದೆ. ಈ ಹಣವನ್ನು ನಮ್ಮ ಒಕ್ಕೂಟವೇ ಭರಿಸಲಿದೆ ಎಂದು ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯಕ್ ತಿಳಿಸಿದ್ದಾರೆ.
ಹಾಲಿನ ದರ ಹೆಚ್ಚಳದಲ್ಲಿ ಯಾರೊಬ್ಬರೂ ರಾಜಕೀಯ ಮಾಡಬಾರದು. ದರ ಹೆಚ್ಚಿದರೆ ರೈತರಿಗೆ ಲಾಭವಾಗುತ್ತದೆಯೋ ಹೊರತು ಸರ್ಕಾರಕ್ಕಲ್ಲ. ಕರ್ನಾಟಕ ಹಾಲು ಒಕ್ಕೂಟ ಇಡೀ ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಗುಣಮಟ್ಟದ ಹಾಲನ್ನು ನಂದಿನಿ ಬ್ರಾೃಂಡ್ ಮೂಲಕ ಮಾರಾಟ ಮಾಡುತ್ತಿದೆ. ಇದನ್ನು ಜನರು ಅರಿಯಬೇಕು. ಪ್ರಸ್ತುತ ಪರಿಷ್ಕೃತ ದರದೊಂದಿಗೆ, ನಂದಿನಿ ಹಾಲಿನ ದರವು ಇತರೆ ಪ್ರಮುಖ ರಾಜ್ಯಗಳ ಹಾಲು ಮಾರಾಟ ದರಗಳಿಗಿಂತ ಸ್ಪರ್ಧಾತ್ಮಕವಾಗಿದ್ದು, ಗ್ರಾಹಕರಿಗೆ ಇನ್ನೂ ಅಗ್ಗದ ಬೆಲೆಯಲ್ಲಿ ಲಭ್ಯವಿರುತ್ತದೆ. ನಮ್ಮ ನಂದಿನಿ ಹಾಲು ಲೀಟರ್‌ಗೆ 46 ರೂ. ಇದೆ. ಆದರೆ, ಬೇರೆ ರಾಜ್ಯಗಳಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕೇರಳದಲ್ಲಿ 52 ರೂ., ಗುಜರಾತ್‌ನಲ್ಲಿ 53 ರೂ., ದೆಹಲಿಯಲ್ಲಿ 55 ರೂ., ಮಹಾರಾಷ್ಟ್ರದಲ್ಲಿ 52 ರೂ., ತೆಲಂಗಾಣದಲ್ಲಿ 58 ರೂ. ಬೆಲೆ ಇದೆ. ಆರ್. ಚೆಲುವರಾಜು, ಅಧ್ಯಕ್ಷರು ಮೈಮುಲ್