72.34 ಕೋಟಿ ರೂ ಪ್ರೋತ್ಸಾಹಧನ ಬಾಕಿ: ತುರ್ತಾಗಿ ಬಿಡುಗಡೆ ಮಾಡಿಕೊಡಲು ಮನವಿ

1 (3)
Published on

ಮಂಡ್ಯ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯ ರೈತರಿಗೆ ನೀಡಬೇಕಿರುವ 72.34 ಕೋಟಿ ರೂ ಹಾಲಿನ ಪ್ರೋತ್ಸಾಹಧನ ಬಾಕಿ ಇದೆ. ಆದ್ದರಿಂದ ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಜೂ.7ರಂದು ಪತ್ರ ಬರೆದಿರುವ ಎಂಎಲ್‌ಸಿ, ಇದು ಕೃಷಿ ಚಟುವಟಿಕೆಯ ಕಾಲವಾಗಿದೆ. ರೈತರಿಗೆ ಅನೇಕ ಖರ್ಚುಗಳು ಇರುತ್ತವೆ. ಮಕ್ಕಳ ಶೈಕ್ಷಣಿಕ ವರ್ಷವೂ ಆರಂಭವಾಗಿರುವುದರಿಂದ ಅವರ ಶೈಕ್ಷಣಿಕ ಶುಲ್ಕ, ಪುಸ್ತಕ ಇನ್ನಿತರ ಖರ್ಚುಗಳು ಇರುತ್ತವೆ. ಇನ್ನು ಮೇವು, ಪಶು ಆಹಾರ ಕೊಳ್ಳಬೇಕಿರುತ್ತದೆ. ಹೀಗಾಗಿ ತುರ್ತಾಗಿ ಈ ಹಣವನ್ನು ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಕೇಳಿಕೊಂಡಿದ್ದಾರೆ.

ಮನವಿ ಪತ್ರದಲ್ಲೇನಿದೆ?: ರಾಜ್ಯ ಸರ್ಕಾರ ಹೈನುಗಾರರಿಗೆ ಅನುಕೂಲವಾಗಲು ಪ್ರತಿ ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಇದರಿಂದ ಹೈನುಗಾರರು ಉತ್ಪಾದನೆ ಮಾಡಿದ ಹಾಲಿಗೆ ಲಾಭದಾಯಕ ದರ ಸಿಕ್ಕಿದಂತಾಗುತ್ತದೆ. ಅಲ್ಲದೆ, ನೇರವಾಗಿ ರೈತರ ಖಾತೆಗಳಿಗೆ ಹಣ ಜಮಾ ಆಗುವುದರಿಂದ ಮೇವು, ಪಶು ಆಹಾರ ಕೊಳ್ಳಲು ಈ ಪ್ರೋತ್ಸಾಹಧನವು ಅನುಕೂಲವಾಗುತ್ತದೆ. ಆದರೆ, ಹಿಂದಿನ ಸರ್ಕಾರ ಕಳೆದ 7 ತಿಂಗಳುಗಳಿಂದ ಹೈನುಗಾರರಿಗೆ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಇದರಿಂದಾಗಿ ಹೈನುಗಾರರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

ಈಗ ರಾಜ್ಯದಲ್ಲಿ ಸುಮಾರು 669.59 ಕೋಟಿ ರೂ ಪ್ರೋತ್ಸಾಹಧನವನ್ನು ಸರ್ಕಾರ ಹೈನುಗಾರರಿಗೆ ವಿತರಿಸಲು ಬಾಕಿ ಇದೆ. ಅಂದರೆ ಪ್ರತಿ ಹೈನುಗಾರರಿಗೆ ಕನಿಷ್ಟ 5 ಸಾವಿರ ರೂನಿಂದ 30 ಸಾವಿರ ರೂವರೆಗೂ ಬಾಕಿ ಉಳಿದುಕೊಂಡಿದೆ. ಪ್ರತಿ ತಿಂಗಳು ಸರ್ಕಾರ ರಾಜ್ಯದ ಎಲ್ಲ ಹೈನುಗಾರರಿಗೆ ಸುಮಾರು 109 ಕೋಟಿ ರೂ ಪ್ರೋತ್ಸಾಹಧನ ನೀಡಬೇಕಿದೆ. ಸಾಮಾನ್ಯ ವರ್ಗದ ಹೈನುಗಾರರಿಗೆ 2022ರ ನವೆಂಬರ್‌ನಲ್ಲಿ 109,90 ಕೋಟಿ ರೂ, ಡಿಸೆಂಬರ್‌ನಲ್ಲಿ 109,81 ಕೋಟಿ ರೂ, 2023ರ ಜನವರಿಯಲ್ಲಿ 107,89 ಕೋಟಿ ರೂ, ಫೆಬ್ರವರಿಯಲ್ಲಿ 93,56 ಕೋಟಿ ರೂ, ಮಾರ್ಚ್‌ನಲ್ಲಿ 93,89 ಕೋಟಿ ರೂ, ಏಪ್ರಿಲ್‌ನಲ್ಲಿ 93,67 ಕೋಟಿ ರೂ ನೀಡುವುದು ಬಾಕಿ ಇದೆ. ಅಂತೆಯೇ ಎಸ್‌ಸಿ ವರ್ಗಕ್ಕೆ 2023ರ ಮಾರ್ಚ್‌ನಲ್ಲಿ 3,08 ಕೋಟಿ ರೂ, ಏಪ್ರಿಲ್‌ನಲ್ಲಿ 3,17 ಕೋಟಿ ರೂ ಸಹಾಯಧನ ವಿತರಣೆ ಬಾಕಿ ಇದೆ. ಹಾಗೆಯೇ ಕಳೆದ ಹಿಂದಿನ ವರ್ಷಗಳ ಪೈಕಿ ಸಾಮಾನ್ಯ ವರ್ಗದವರಿಗೆ 2019-20 ನೇ ಸಾಲಿನಲ್ಲಿ 12,51 ಕೋಟಿ ರೂ, 2020-21 ನೇ ಸಾಲಿನಲ್ಲಿ 9,64 ಕೋಟಿ ರೂ, 2021-22ನೇ ಸಾಲಿನಲ್ಲಿ 22,37 ಕೋಟಿ ರೂ ಸೇರಿದಂತೆ ಒಟ್ಟಾರೆ ಕಳೆದ ಆರ್ಥಿಕ ವರ್ಷದಲ್ಲಿ 624,06 ಕೋಟಿ ರೂ ಹಾಗೂ ಹಿಂದಿನ ವರ್ಷಗಳ ಬಾಕಿ 45,53 ಕೋಟಿ ರೂ ಸೇರಿ ಒಟ್ಟು 669.59 ಕೋಟಿ ರೂ ಸರ್ಕಾರದಿಂದ ಹೈನುಗಾರರಿಗೆ ಸಂದಾಯವಾಗಬೇಕಿದೆ ಎಂದಿದ್ದಾರೆ.

ಇನ್ನು ಜಿಲ್ಲೆಗೆ 72.34 ಕೋಟಿ ರೂ ಬಾಕಿ ಇದೆ. 2022ರ ನವೆಂಬರ್‌ನಲ್ಲಿ 12,40 ಕೋಟಿ ರೂ, ಡಿಸೆಂಬರ್‌ನಲ್ಲಿ 12,88 ಕೋಟಿ ರೂ, 2023 ಜನವರಿಯಲ್ಲಿ 12,68 ಕೋಟಿ ರೂ, ಫೆಬ್ರವರಿಯಲ್ಲಿ 10,90 ಕೋಟಿ ರೂ, ಮಾರ್ಚ್‌ನಲ್ಲಿ 11,92 ಕೋಟಿ ರೂ, ಏಪ್ರಿಲ್‌ನಲ್ಲಿ 11,56 ಕೋಟಿ ರೂನೀಡುವುದು ಬಾಕಿ ಇದೆ. ವಿವಿಧ ಕಾರಣಗಳಿಂದ ಪಶು ಆಹಾರ, ಮೇವಿನ ದರ ಏರಿಕೆಯಾಗಿದೆ. ಕೆಲವೆಡೆ ಗಂಟು ರೋಗ ಜಾನುವಾರುಗಳಿಗೆ ಬಾಧಿಸಿ, ಹಾಲಿನ ಇಳುವರಿ ಕೂಡ ಕಡಿಮೆಯಾಗಿದೆ. ಜತೆಗೆ ಕೆಲ ಜಾನುವಾರುಗಳು ಮೃತಪಟ್ಟಿವೆ. ಇದರಿಂದ ಹೈನುಗಾರರು ತೀರ ಸಂಕಷ್ಟದಲ್ಲಿದ್ದಾರೆಂದು ವಿವರಿಸಿದ್ದಾರೆ.

ಇಂತಹ ಸಂದರ್ಭದಲ್ಲಿ ಬಾಕಿ ಇರುವ ಪ್ರೋತ್ಸಾಹಧನವನ್ನು ಸರ್ಕಾರ ಬಿಡುಗಡೆ ಮಾಡಿದಲ್ಲಿ ಹೈನುಗಾರರಿಗೆ ನೆರವಾಗಲಿದೆ. ಜತೆಗೆ ಮಳೆಗಾಲದಲ್ಲಿ ಪಶು ಆಹಾರ ಖರೀದಿಸಿ ದಾಸ್ತಾನು ಮಾಡಲು, ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಪಾವತಿಗೆ ಅಥವಾ ದೈನಂದಿನ ಇತರೆ ಖರ್ಚುಗಳಿಗೆ ಅನುಕೂಲವಾಗಲಿದೆ. ಹೈನುಗಾರರ ಹಿತ ದೃಷ್ಟಿಯಿಂದ ಈ ಪ್ರೋತ್ಸಾಹಧನವನ್ನು ಅತಿ ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net