

ಮಂಡ್ಯ: ವಿಶ್ವ ಹಾಲು ದಿನವನ್ನು ಮನ್‌ಮುಲ್ ವತಿಯಿಂದ ನಗರದ ಜಿಲ್ಲಾಸ್ಪತ್ರೆಯ ರೋಗಿಗಳು ಮತ್ತು ಪ್ರೇರಣ ಅಂಧರ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಲು ವಿತರಿಸುವ ಮೂಲಕ ಆಚರಿಸಲಾಯಿತು.
ಮನ್‌ಮುಲ್ ಪ್ರಭಾರ ಅಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ, ಹಾಲಿನ ಪ್ರಾಮುಖ್ಯತೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಅಗತ್ಯ. ಪೌಷ್ಟಿಕಾಂಶದ ಕೊರತೆ ನೀಗಿಸಲು ಹಾಲು ಬಹಳ ಮುಖ್ಯವಾಗಿದೆ. ಆದ್ದರಿಂದ ಕೊರತೆ ಇರುವ ಕಡೆ ಹಾಲನ್ನು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.
ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್ ಮಾತನಾಡಿ, ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು 2001ರಿಂದ ಪ್ರತಿವರ್ಷ ಜೂ.1ರಂದು ಆಚರಿಸಲಾಗುತ್ತಿದೆ. ಇದರ ಉದ್ದೇಶ ಹಾಲು ಮತ್ತು ಹೈನುಗಾರಿಕೆಯ ಮಹತ್ವವನ್ನು ವಿಶ್ವದಲ್ಲೆಡೆ ಪಸರಿಸುವುದು ಆಗಿದೆ. ಹಾಲಿನ ಪೌಷ್ಟಿಕಾಂಶದ ಮೌಲ್ಯ ಮತ್ತು ಅದರ ಉತ್ಪನ್ನಗಳ ಬಗ್ಗೆ ಮತ್ತು ಅದರ ಆರ್ಥಿಕ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ವಿಶ್ವ ಹಾಲು ದಿನದ ಮಹತ್ವವಾಗಿದೆ ಎಂದರು.
ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಮಾರುಕಟ್ಟೆ ಅಧಿಕಾರಿ ಸಾಗರ್ ಇತರರಿದ್ದರು.