ಹೆದ್ದಾರಿ ಕಾಮಗಾರಿಗೆ ಹಣ ಬಿಡುಗಡೆ: ಶಾಸಕ ರವಿಕುಮಾರ್ ಗಣಿಗ ಮಾಹಿತಿ

1 (8)
Published on

ಮಂಡ್ಯ: ಹಲ್ಲೇಗೆರೆ ಮತ್ತು ಕೆರಗೋಡು ಮಾರ್ಗವಾಗಿ ಹಾದು ಹೋಗುವ ರಾಜ್ಯ ಹೆದ್ದಾರಿ ಕಾಮಗಾರಿಗೆ 10 ಕೋಟಿ ರೂ ಬಿಡುಗಡೆಯಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಹಲ್ಲೇಗೆರೆ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ರಸ್ತೆ ಅಪೂರ್ಣಗೊಂಡಿರುವುದರಿಂದ ಹಲವರಿಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪರಿಹಾರ ಕೊಟ್ಟು ರಸ್ತೆ ಕಾಮಗಾರಿ ಪೂರ್ಣಗೊಳಿಸೋಣ. ಇದಕ್ಕೆ ಎಲ್ಲರ ಸಹಕಾರ ಬೇಕು. ಕಾಮಗಾರಿ ಪೂರ್ಣಗೊಂಡರೆ ಅನುಕೂಲ ಆಗಲಿದೆ. ಅಂತೆಯೇ ಯಾರೆಲ್ಲ ಪರಿಹಾರ ಪಡೆದುಕೊಂಡಿದ್ದೀರಿ ದಯವಿಟ್ಟು ಅವರು ಜಾಗವನ್ನು ಬಿಟ್ಟುಕೊಡಬೇಕು. ಅಭಿವೃದ್ಧಿ ವಿಚಾರದಲ್ಲಿ ನೀವೆಲ್ಲರೂ ಕೂಡ ಕೈಜೋಡಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.

ಬೇಸಿಗೆ ಇರುವ ಕಾರಣ ಹಾಲಿನ ಖರೀದಿಗೆ ಒಂದು ರೂ ಕಡಿತಗೊಳಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಕಡಿತವಾಗಿರುವ ಒಂದು ರೂ ಹೆಚ್ಚಿಗೆ ಆಗಲಿದೆ. ಮೇ.13ರವರೆಗೆ ಮಾತ್ರ ರಾಜಕಾರಣ. ಅದಾದ ಮೇಲೆ ಐದು ವರ್ಷ ಪಕ್ಷಭೇದ ಮರೆತು ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸೋಣ. ರಾಜಕಾರಣ ಎನ್ನುವುದು 15 ದಿನ ಇದ್ದರೆ ಮಾತ್ರ ತಾಲೂಕು ಅಭಿವೃದ್ಧಿ ಆಗುತ್ತದೆ. ಅಭಿವೃದ್ಧಿಗೆ ನನಗೆ ಸಲಹೆ ನೀಡಿ ಸಲಹೆಯನ್ನು ತೆಗೆದುಕೊಂಡು ಇಡೀ ಕ್ಷೇತ್ರವನ್ನು ಮಾದರಿಯಾಗಿಸೋಣ ಎಂದು ಮನವಿ ಮಾಡಿದರು.

ಮನ್‌ಮುಲ್ ಪ್ರಭಾರ ಅಧ್ಯಕ್ಷ ರಘುನಂದನ್, ನಿರ್ದೇಶಕರಾದ ಬಿ.ಆರ್.ರಾಮಚಂದ್ರು, ಉಮ್ಮಡಹಳ್ಳಿ ಶಿವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net