

ಮಂಗಳೂರು: ಒಂದೆಡೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಾಲು ಹಾಗೂ ಇತರ ಅಗತ್ಯ ಸೇವೆಗೆ ಸಮಸ್ಯೆಯಾಗದು ಎಂದಿದ್ದರೂ ಶನಿವಾರದ ಬಂದ್‌ನಿಂದಾಗಿ ಹಾಲು ಪೂರೈಕೆಗೆ ಬಹಳ ಸಮಸ್ಯೆಯಾಗಿದೆ.
ಹಾಲು ಮಾರಾಟ ಅರ್ಧಕ್ಕರ್ಧ ಇಳಿಕೆಯಾಗಿರುವುದರಿಂದ ದ.ಕ ಜಿಲ್ಲಾ ಹಾಲು ಒಕ್ಕೂಟ ಮುಂದಿನ ಎರಡು ದಿನ (ಮಾ.29,30)ಹಾಲು ಸಂಗ್ರಹವನ್ನೇ ರದ್ದುಗೊಳಿಸಲು ಮುಂದಾಗಿದೆ.
ಬಹುತೇಕ ಬಿಎಂಸಿ(ಬಲ್ಕ್ ಮಿಲ್ಕ್ ಕೂಲರ್)ಗಳಲ್ಲಿ ಹಾಲಿನ ಸಂಗ್ರಹವಿದೆ, ಇರುವ ಹಾಲನ್ನೇ ವಿತರಣೆ ಮಾಡಲಾಗಿಲ್ಲ. ದಿನಂಪ್ರತಿ 3.7 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದುದು ಸದ್ಯ 1.90 ಲಕ್ಷ ಲೀಟರ್‌ಗೆ ಡಿಮಾಂಡ್ ಇಳಿದಿದೆ. ಇಡೀ ಮಾರುಕಟ್ಟೆಯಲ್ಲಿ ಹಾಲು ಮಾರಾಟ ಮಾಡಲು ಪೊಲೀಸರು ಬಿಡುತ್ತಿಲ್ಲ. ಹೀಗಾಗಿ ನಾವು ಹಾಲು ಸಂಗ್ರಹಿಸಿ ಮಾಡುವುದಾದರೂ ಏನು? ಹೈನುಗಾರರ ಸಂಕಷ್ಟ ಗೊತ್ತಿದೆ, ಆದರೂ ಅಸಹಾಯಕರಾಗಿದ್ದೇವೆ.
ಒಂದು ವೇಳೆ ನಾಳೆ(ಮಾ.29)ಪೊಲೀಸರು ಹಾಲು ವಿತರಣೆಗೆ ಬಿಟ್ಟರೆ ನಾವು ಒಂದೇ ದಿನಕ್ಕೆ ಈ ರದ್ದು ಆದೇಶ ಹಿಂಪಡೆಯ ಬಹುದು ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ‘ವಿಜಯವಾಣಿ’ಗೆ ತಿಳಿಸಿದರು. ಹೋಟೆಲ್‌ಗಳು ಕಳೆದ ಹಲವು ದಿನಗಳಿಂದ ಮುಚ್ಚಿದ್ದರೂ ಮನೆಗಳಿಗೆ 3.4 ಲಕ್ಷ ಲೀಟರ್‌ವರೆಗೂ ಮಾರಾಟವಾಗುತ್ತಿತ್ತು.
ಪೌಡರ್ ಮಾಡುವುದೂ ಕಷ್ಟ: ಹಾಲು ಹೆಚ್ಚಾದರೆ ಅದನ್ನು ಸಂಗ್ರಹಿಸಲು ಅಸಾಧ್ಯ, ಅದಕ್ಕಿರುವ ಏಕೈಕ ಮಾರ್ಗವೆಂದರೆ ಹಾಲಿನ ಪುಡಿಯಾಗಿ ಪರಿವರ್ತಿಸುವುದು. ಆ ಘಟಕ ಹಾಸನದ ಚನ್ನರಾಯಪಟ್ಟಣದಲ್ಲಿದೆ. ಆದರೆ ಅಲ್ಲಿ ರಾಜ್ಯದ ಹಲವು ಕಡೆಗಳಿಂದ ಹೆಚ್ಚುವರಿ ಹಾಲು ಹೊತ್ತ ಟ್ಯಾಂಕರ್‌ಗಳು ಸರತಿಸಾಲಿನಲ್ಲಿ ನಿಂತಿವೆ. ನಮ್ಮಲ್ಲಿ ಹೆಚ್ಚುವರಿ ಟ್ಯಾಂಕರ್‌ಗಳಿಲ್ಲ, ಚಾಲಕರಿಲ್ಲ. ಹಾಗಾಗಿ ಕಷ್ಟದ ಪರಿಸ್ಥಿತಿ ಇದೆ ಎನ್ನುತ್ತಾರೆ ಹೆಗ್ಡೆ.
ಸಂಘಗಳಲ್ಲೂ ಸೋಂಕಿನ ಭೀತಿ: ಬಂದ್ ಕಾರಣಕ್ಕಾಗಿ ಒಂದೆಡೆ ಪ್ರತಿ ಹಾಲಿನ ಸಂಘಗಳಲ್ಲಿ 100ರಿಂದ 150 ಜನ ಹಾಲು ಹಾಕುವವರು ಬರುತ್ತಾರೆ. ಅದರೊಂದಿಗೆ ಯಾವಾಗ ಹೊರಗೆ ಹಾಲು ಮಾರಾಟ ಬಂದ್ ಆಗಿದೆಯೋ ಆಗ ಬಹುತೇಕ ಮಂದಿ ಹಾಲು ಕೊಳ್ಳಲು ನೇರವಾಗಿ ಸಂಘಕ್ಕೇ ಬರುತ್ತಿದ್ದಾರೆ. ಗುರುತು ಪರಿಚಯವಿಲ್ಲದವರು ಬರುತ್ತಾರೆ, ಹಾಗಾಗಿ ನಮಗೆಲ್ಲರಿಗೂ ಸೋಂಕಿನ ಭೀತಿ ಇದೆ ಎಂದು ಸಂಘದವರು ಅಲವತ್ತುಕೊಂಡಿದ್ದಾರೆ. ಅದರಿಂದಾಗಿಯೂ ಎರಡು ದಿನ ಹಾಲು ಸಂಗ್ರಹಿಸದಿರಲು ನಿರ್ಧರಿಸಲಾಗಿದೆ.
ಅನಿವಾರ್ಯವಾಗಿ ಮಾ.29, 30ರಂದು ಬೆಳಗ್ಗೆ, ಸಾಯಂಕಾಲ ಎರಡೂ ಸರದಿಯಲ್ಲಿ ಹಾಲು ಸಂಗ್ರಹಣೆ ಸ್ಥಗಿತಗೊಳಿಸಲಾಗಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ 29ರಿಂದ ಎಂದಿನಂತೆ ಮುಂದುವರಿಯಲಿದೆ. ಮಾ.31ರ ಬೆಳಗ್ಗೆಯ ಸರದಿಯಿಂದ ಗುಣಮಟ್ಟದ ಹಾಲು ಸಂಗ್ರಹ ಆರಂಭಗೊಳ್ಳಲಿದೆ. ರವಿರಾಜ ಹೆಗ್ಡೆ ಅಧ್ಯಕ್ಷ, ದ.ಕ ಹಾಲು ಒಕ್ಕೂಟ