ಹೇರಳವಾಗಿ ಲಭಿಸಲಿ ಮತ್ಸ್ಯ ಸಂಪತ್ತು...

Malpe
Published on

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

ಮಲ್ಪೆಯಲ್ಲಿ ಮೀನುಗಾರರಿಂದ ಸಮುದ್ರರಾಜನಿಗೆ ಪೂಜೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪ್ರತಿವರ್ಷವೂ ಮೀನುಗಾರಿಕೆಯ ಆರಂಭವನ್ನು ಸಮುದ್ರ ರಾಜನಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸುವ ಸಂಪ್ರದಾಯ ಕರಾವಳಿಯಲ್ಲಿ ತಲೆತಲಾಂತರದಿಂದ ನಡೆದುಬಂದಿದೆ. ನಾರಿಯಲ್​ ಹುಣ್ಣಿಮೆ ದಿನ ಸಮಸ್ತ ಮೀನುಗಾರರು ಶ್ರದ್ಧಾಭಕ್ತಿಯಿಂದ ಸಮುದ್ರರಾಜನಿಗೆ ಫಲ, ಪುಷ್ಪ, ಕ್ಷೀರ ಅರ್ಪಿಸಿ ಗಂಗಾಮಾತೆಯನ್ನು ಪ್ರಾರ್ಥಿಸಿ ಮೀನುಗಾರಿಕೆಗೆ ತೆರಳುವುದು ವಾಡಿಕೆ. ಅದರಂತೆ ಈ ಬಾರಿಯೂ ಸಮುದ್ರರಾಜನಿಗೆ ಪೂಜೆ ನಡೆದಿದೆ. ಮುಂದಿನ ಮೀನುಗಾರಿಕೆಯಲ್ಲಿ ಯಾವುದೇ ಅವಘಡ ಸಂಭವಿಸದೆ ಮೀನುಗಾರರಿಗೆ ಹೇರಳವಾಗಿ ಮತ್ಸ್ಯ ಸಂಪತ್ತು ಲಭಿಸುವಂತಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹಾರೈಸಿದರು.

ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಮಲ್ಪೆಯ ಸಮುದ್ರದಲ್ಲಿ ಆಗಸ್ಟ್​ 9ರಂದು ಬೆಳಗ್ಗೆ ಆಯೋಜಿಸಿದ್ದ ಪೂಜೆಯಲ್ಲಿ ಪಾಲ್ಗೊಂಡು ಸಮುದ್ರರಾಜನಿಗೆ ಕ್ಷೀರ ಸಮರ್ಪಿಸಿ ಮಾತನಾಡಿದರು.

ಬಲರಾಮ ದೇವರಿಗೆ ಪೂಜೆ

ಇದಕ್ಕೂ ಪೂರ್ವದಲ್ಲಿ ಉಡುಪಿ ಜಿಲ್ಲೆಯ ಸಮಸ್ತ ಮೀನುಗಾರರ ಶ್ರೇಯೋಭಿವೃದ್ಧಿ ಹಾಗೂ ಸಮೃದ್ಧ ಮೀನುಗಾರಿಕೆಗಾಗಿ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಬೆಳಗ್ಗೆ ವಡಭಾಂಡ ಬಲರಾಮ ದೇವರಿಗೆ ಮತ್ತು ಬೊಬ್ಬರ್ಯ ದೈವಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಮೀನುಗಾರರೆಲ್ಲ ಸೇರಿ ಮಲ್ಪೆ ವಡಭಾಂಡೇಶ್ವರ ಕಡಲತೀರದಲ್ಲಿ ಸಮುದ್ರ ಪೂಜೆ ಸಲ್ಲಿಸಿದರು.

ಮಾಜಿ ಸಚಿವ ಪ್ರಮೋದ ಮಧ್ವರಾಜ್​, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್​, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೆಶಕ ದಿವಾಕರ ಖಾರ್ವಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಜೆ. ಕರ್ಕೇರ, ಮಾಜಿ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಕಡೆಕಾರ್​, ಕೋಶಾಧಿಕಾರಿ ಶಿವಾನಂದ, ಉದ್ಯಮಿಗಳಾದ ಆನಂದ ಪಿ. ಸುವರ್ಣ, ಹರಿಯಪ್ಪ ಕೋಟ್ಯಾನ್​ ಇತರರು ಉಪಸ್ಥಿತರಿದ್ದರು.

ಮೀನುಗಾರರಿಂದ ಶೋಭಾಯಾತ್ರೆ

ದೇವ-ದೈವಸ್ಥಾನಗಳಲ್ಲಿ ಪೂಜೆ ಬಳಿಕ ವಾದ್ಯಘೋಷಗಳೊಂದಿಗೆ ನೂರಾರು ಮೀನುಗಾರರು ಶೋಭಾಯಾತ್ರೆಯಲ್ಲಿ ಸಮುದ್ರ ತೀರಕ್ಕೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಸಿದರು. ಬಲರಾಮ ದೇವಸ್ಥಾನದ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ ಹಾಗೂ ಪ್ರಧಾನ ಅರ್ಚಕ ಟಿ. ಶ್ರೀನಿವಾಸ ಭಟ್​ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆಯಿತು. ಮೀನುಗಾರರು ಹಾಲು, ಪುಷ್ಪ ಸೀಂಯಾಳವನ್ನು ಸಮುದ್ರರಾಜನಿಗೆ ಸಮರ್ಪಿಸಿ ಒಳ್ಳೆಯ ಮೀನುಗಾರಿಕೆ ನಡೆಯುವಂತಾಗಲು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net