ಶಾಲಾ ಮಕ್ಕಳಿಗಿಲ್ಲ ಕ್ಷೀರಭಾಗ್ಯ: ಅಕ್ಷರ ದಾಸೋಹ ಆರಂಭವಾದರೂ ಕ್ರಮವಿಲ್ಲ ; ಅಪೌಷ್ಟಿಕತೆಯಲ್ಲಿ ಗ್ರಾಮೀಣ ಮಕ್ಕಳು

TMK- LEAD
Published on

ತುಮಕೂರು :l ಕರೊನಾ ಆತಂಕದ ನಡುವೆಯೂ ರಾಜ್ಯದೆಲ್ಲೆಡೆ ಆರಂಭವಾಗಿರುವ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಯಾಗಿದೆಯಾದರೂ ಕ್ಷೀರಭಾಗ್ಯ ನಿಲ್ಲಿಸಿರುವುದು ಮಕ್ಕಳಲ್ಲಿ ಅಪೌಷ್ಟಿಕತೆ ಜತೆಗೆ ರೈತರ ಹಾಲಿಗೂ ಬೇಡಿಕೆ ಕುಸಿಯುವಂತೆ ಮಾಡಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತವರು ಜಿಲ್ಲೆಯಲ್ಲಿಯೇ 2.36 ಲಕ್ಷ ಮಕ್ಕಳಿಗೆ ಪ್ರತಿದಿನ ಹಾಲು ನೀಡಲಾಗುತ್ತಿತ್ತು, ಕಳೆದ ಜುಲೈ ನಂತರ ಮಕ್ಕಳ ಮನೆಗೆ ಹಾಲಿನ ಪುಡಿ ನೀಡುವುದನ್ನು ಸರ್ಕಾರ ನಿಲ್ಲಿಸಿದೆ, ಹಾಲಿನ ಬೇಡಿಕೆಯೂ ಕಡಿಮೆಯಾಗಿದ್ದು ಒಕ್ಕೂಟ ನಷ್ಟಕ್ಕೆ ಜಾರುತ್ತಿದೆ.

ಕರೊನಾ ಸಂದರ್ಭದಲ್ಲಿ ಮಕ್ಕಳ ಮನೆಗಳಿಗೆ ಆಹಾರ ಪದಾರ್ಥ ಹಾಗೂ ಹಾಲಿನ ಪುಡಿ ನೀಡಲಾಗುತ್ತಿತ್ತು ಆದರೆ, ಈಗ ಬಿಸಿಯೂಟಕ್ಕಷ್ಟೇ ಸರ್ಕಾರ ವ್ಯವಸ್ಥೆ ಮಾಡಿದ್ದು, ಹಾಲು ನೀಡುವ ಯೋಜನೆಯನ್ನೂ ಜಾರಿಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಶಾಲೆಗಳಲ್ಲಿ ಮಕ್ಕಳಿಗೆ ಹಾಲು ನೀಡಿದರೆ ಒಕ್ಕೂಟಗಳಲ್ಲಿ ದಾಸ್ತಾನು ಇರುವ ಹಾಲಿನ ಪುಡಿಗೂ ಮುಕ್ತಿ ಸಿಗಲಿದೆ.

ಕರೊನಾ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮಾಸಿಕ ತಲಾ ಅರ್ಧ ಕೆಜಿ ಹಾಲಿನ ಪುಡಿಯನ್ನು ಮನೆಗಳಿಗೆ ನೀಡಲಾಗಿತ್ತು. ಆದರೆ, ಕಳೆದ ಜುಲೈ ತಿಂಗಳಿನಿಂದ ನಿಲ್ಲಿಸಲಾಗಿದೆ. ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆಯಿದ್ದು ಸರ್ಕಾರ ನೀಡುವ ಹಾಲು ಕೊಂಚ ನೆರವಾಗಲಿದೆ.

ರೈತರಿಗೂ ನೆರವಾಗುವ ಯೋಜನೆ: ಶಾಲೆ ಮಕ್ಕಳಿಗೆ ಹಾಲು ನೀಡುವುದರಿಂದ ರೈತ ಕುಟುಂಬಗಳಿಗೆ ನೆರವಾಗಲಿದೆ. ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿಯೇ ಪ್ರತಿನಿತ್ಯ 7 ಲಕ್ಷಕ್ಕೂ ಹೆಚ್ಚು ಲೀ., ಹಾಲು ಉತ್ಪಾದನೆಯಾಗುತ್ತಿದ್ದು, ಬಹುತೇಕವಾಗಿ ಹಾಲಿನ ಪುಡಿಯಾಗಿ ಗೋದಾಮು ಸೇರುತ್ತಿದೆ.

ಒಕ್ಕೂಟಗಳು ನಷ್ಟ ಕಂಡ ಕೂಡಲೇ ಹಾಲಿನ ಖರೀದಿ ದರ ಕಡಿಮೆ ಮಾಡುವುದರಿಂದ ರೈತರಿಗೂ ನಷ್ಟವಾಗುವ ಆತಂಕವಿದೆ ಹಾಗಾಗಿ, ಕೂಡಲೇ ರಾಜ್ಯದೆಲ್ಲೆಡೆ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಮರುಜಾರಿಗೆ ಒತ್ತಾಯ ಕೇಳಿಬಂದಿದೆ.

ಹಾಲಿನ ಪುಡಿ ಉತ್ಪಾದನೆಯಲ್ಲಿ ‘ತುಮುಲ್’ : ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಹಾಲು ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿದ್ದು ಕರೊನಾ ಸಂದರ್ಭದಲ್ಲಿ ಮಾರುಕಟ್ಟೆಯೇ ಇಲ್ಲದೆ ಉಳಿದ ಲಕ್ಷಾಂತರ ಟನ್ ಹಾಲನ್ನು ಪುಡಿಯನ್ನಾಗಿಸಿ ಶೇಖರಿಸಿಟ್ಟಿದೆ. ಬಳ್ಳಾರಿ, ಕಲುಬುರುಗಿ ಹಾಗೂ ವಿಜಯಪುರ ಜಿಲ್ಲೆಗಳ ಶಾಲೆಗಳಿಗೆ 80 ಟನ್ ಸರಬರಾಜು ಮಾಡುತ್ತಿದೆ. ತುಮಕೂರು ಜಿಲ್ಲೆಯ ಅಂಗನವಾಡಿಗಳಿಗೂ 40 ಟನ್ ಪ್ರತಿತಿಂಗಳು ನೀಡಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಜಾರಿಯಲ್ಲಿರುವ ಕ್ಷೀರಭಾಗ್ಯ ಯೋಜನೆ ಹಾಗೂ ರೈತರ ಆರ್ಥಿಕ ಪರಿಸ್ಥಿತಿ ನಡುವೆ ನೇರ ಸಂಬಂಧವಿದ್ದು ಕೂಡಲೇ ಕಾರ್ಯಕ್ರಮ ಶಾಲೆಗಳಲ್ಲಿ ಆರಂಭವಾಗಬೇಕಿದೆ.

ಜಿಲ್ಲೆಯ ಎಲ್ಲ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳಿಗೆ ಕಳೆದ ಜುಲೈವರೆಗೂ ಮನೆಗಳಿಗೆ ಹಾಲಿನ ಪುಡಿ ತಲುಪಿಸಲಾಗಿದೆ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ, ಪ್ರಸ್ತುತ ಶಾಲೆಯಲ್ಲಿಯೇ ಅಕ್ಷರ ದಾಸೋಹ ಆರಂಭವಾಗಿದ್ದು ಕ್ಷೀರಭಾಗ್ಯ ಯೋಜನೆಗೂ ಚಾಲನೆ ಸಿಗಬಹುದು. ರುದ್ರಸ್ವಾಮಿ ನಿರ್ದೇಶಕ, ಅಕ್ಷರ ದಾಸೋಹ ಯೋಜನೆ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ಕೊಟ್ಟರೆ ಅಗತ್ಯವಿರುವಷ್ಟು ನೀಡಲು ತುಮುಲ್ ಸಿದ್ಧವಿದೆ, ಸಾಕಷ್ಟು ದಾಸ್ತಾನು ನಮ್ಮಲ್ಲಿದೆ, ಸರ್ಕಾರಕ್ಕೆ ಮನವಿ ಮಾಡಿದ್ದು, ಶಾಲೆಗಳಿಗೆ ನೀಡಲು ಆದೇಶಕ್ಕಾಗಿ ಕಾಯುತ್ತಿದ್ದೇವೆ. 2.25ಲಕ್ಷ ವಿದ್ಯಾಥಿಗಳಿಗೆ ಕಳೆದ ಜೂನ್, ಜುಲೈ ತಿಂಗಳಲ್ಲಿ 6.67ಕೋಟಿ ರೂ. ಪ್ರಮಾಣದ ಹಾಲಿನ ಪುಡಿ ಪೂರೈಸಿದ್ದೇವೆ. ಡಾ.ಸುಬ್ರಾಯಭಟ್ ಎಂಡಿ, ತುಮುಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net