ಹಾಲು ಖರೀದಿ ದರ ಇಳಿಕೆ ಆದೇಶ ಹಿಂಪಡೆಯಿರಿ

16-klr-1
Published on

ಕೋಲಾರ: ರೈತರಿಂದ ಖರೀದಿಸುವ ಹಾಲಿನ ಬೆಲೆಯಲ್ಲಿ ಲೀಟರ್‌ಗೆ 2 ರೂ. ಕಡಿತಗೊಳಿಸಿರುವ ಆದೇಶವನ್ನು ಕೂಡಲೆ ಹಿಂಪಡೆಯುವಂತೆ ಗುರುವಾರ ಕೋಚಿಮುಲ್ ಎದುರು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಕರೊನಾ ಪರಿಣಾಮ ಹೈನುಗಾರಿಕೆ ನಂಬಿರುವ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ, ಸರ್ಕಾರ ರೈತರಿಗೆ ಹೆಚ್ಚಿನ ಪರಿಹಾರ ಕಲ್ಪಿಸುವ ಬದಲು ಹಾಲಿನ ಖರೀದಿ ದರ ಇಳಿಸಿರುವುದರಿಂದ ಹಾಲು ಉತ್ಪಾದನೆ ಮೂಲಕ ಜೀವನಕ್ಕೆ ದಾರಿ ಕಂಡುಕೊಂಡಿರುವ ಗ್ರಾಮೀಣ ಜನರಿಗೆ ಇನ್ನಷ್ಟು ಆರ್ಥಿಕ ನಷ್ಟವನ್ನುಂಟು ಮಾಡಿದಂತಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು.

ಸರ್ಕಾರದ ತೀರ್ಮಾನದಿಂದ ರೈತರು ಹೈನುಗಾರಿಕೆಯಿಂದ ದೂರ ಉಳಿಯುವ ಸಾಧ್ಯತೆ ಇದೆ. ಸರ್ಕಾರ ಕೂಡಲೆ ಎಚ್ಚೆತ್ತು ಕಡಿತಗೊಳಿಸಿರುವ 2 ರೂ.ಗಳಆದೇಶ ವಾಪಸ್ ಪಡೆದು, ಲೀಟರ್‌ಗೆ 40 ರೂ.ನಿಗದಿಪಡಿಸಿ ಹಾಲು ಉತ್ಪಾದಕರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ನೀರು ಮತ್ತು ಮೇವಿನ ಸಮಸ್ಯೆಯಿದ್ದರೂ ಹಾಲು ಉತ್ಪಾದನೆಯಲ್ಲಿ ಕೋಲಾರ ಜಿಲ್ಲೆಯು ರಾಜ್ಯದಲ್ಲೇ 2ನೇ ಸ್ಥಾನ ಪಡೆದುಕೊಂಡಿದೆ. ಕರೊನಾದಿಂದ ಬಳಲುತ್ತಿದ್ದ ಬಡವರಿಗೆ ಲಾಕ್‌ಡೌನ್ ವೇಳೆ ಸರ್ಕಾರ ಉಚಿತವಾಗಿ ವಿತರಣೆ ಮಾಡಿದ ಹಾಲನ್ನು ಉತ್ಪಾದಕರು ಪೂರೈಸಿದ್ದರಿಂದ ಅನುಕೂಲವಾಗಿದೆ, ರೈತರ ಕಷ್ಟ ಅರಿತು ಹಾಲು ಖರೀದಿ ದರ ಇಳಿಕೆ ನಿರ್ಧಾರ ಹಿಂದಕ್ಕೆ ಪಡೆಯಬೇಕು ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ತಿಪ್ಪಾರೆಡ್ಡಿ, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಖಂಡರಾದ ಐತಾಂಡಹಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರಿಂ ಚಲ, ನಲ್ಲಾಂಡಹಳ್ಳಿ ಕೇಶವ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net