

ಕೋಲಾರ: ಅವಿಭಜಿತ ಜಿಲ್ಲೆಯ ರೈತರ ಜೀವಾಳ ರೇಷ್ಮೆ ಉತ್ಪಾದನೆ ಕುಸಿದಿದ್ದು, ಇದೇ ಹಾದಿಯಲ್ಲಿ ಸಾಗುತ್ತಿರುವ ಹೈನೋದ್ಯಮವನ್ನು ಉಳಿಸಿಕೊಳ್ಳದಿದ್ದರೆ ರೈತರು ಸಂಕಷ್ಟಕ್ಕೀಡಾಗಬೇಕಾಗುತ್ತದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಸಿದರು.
ತಾಲೂಕಿನ ಅರಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಶುಕ್ರವಾರ ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸಂಘಗಳಿಗೆ 3.18 ಕೋಟಿ ರೂ. ಸಾಲ ವಿತರಿಸಿ ಅವರು, ಜಿಲ್ಲೆ ಚಿನ್ನ, ಹಾಲು ಮತ್ತು ರೇಷ್ಮೆ ಉತ್ಪಾದನೆಯಲ್ಲಿ ಖ್ಯಾತಿ ಪಡೆದಿತ್ತು. ಇಂದು ಚಿನ್ನದ ಗಣಿ ಮುಚ್ಚಿದೆ. ರೇಷ್ಮೆ ಉದ್ಯಮ ನಷ್ಟದಿಂದ ಉತ್ಪಾದನೆ ಕುಸಿತದತ್ತ ಸಾಗಿದೆ. ಉಳಿದಿರುವುದು ಹೈನೋದ್ಯಮ ಮಾತ್ರ ಎಂದರು.
ಹಾಲು ಒಕ್ಕೂಟದಲ್ಲಿ 11,40 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಮೂಲಕ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿತ್ತು. ಇಂದು ಸಂಗ್ರಹ 7.90 ಲಕ್ಷ ಲೀಟರ್‌ಗೆ ಕುಸಿದಿರುವುದು ಆತಂಕಕಾರಿ ಬೆಳವಣಿಗೆ. ನೆರೆ ರಾಜ್ಯದವರು ಇಲ್ಲಿನ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಯ ಆಮಿಷ ತೋರಿಸಿ ರೈತರಿಂದ ಹಸುಗಳನ್ನು ಖರೀದಿಸುತ್ತಿರುವುದು ಕಾರಣ. ಲಾಭಕ್ಕಾಗಿ ಹಸುಗಳನ್ನು ಹೊರ ರಾಜ್ಯಕ್ಕೆ ಮಾರಾಟ ಮಾಡಬಾರದು ಎಂದು ಗೋಪಾಲಕರಿಗೆ ಮನವಿ ಮಾಡಿದರು.
ಹಾಲು ಉತ್ಪಾದನೆಯಲ್ಲಿ ಶೇ 90 ಮಹಿಳೆಯರೇ ಪ್ರಮುಖ ಪಾತ್ರವಹಿಸುತ್ತಾರೆ. ಹಾಗಾಗಿ ಹೈನುಗಾರಿಕೆಯನ್ನು ಜಿಲ್ಲೆಯಲ್ಲಿ ಉಳಿಸುವ ಕೆಲಸ ಮಹಿಳೆಯರಿಂದ ಮಾತ್ರ ಸಾಧ್ಯ. ಡಿಸಿಸಿ ಬ್ಯಾಂಕ್‌ನಿಂದ ಪಡೆದ ಸಾಲದಲ್ಲಿ ಹಸು ಖರೀದಿಸಿ, ಮುಂದಿನ ದಿನಗಳಲ್ಲಿ ಹಸು ಖರೀದಿಗೆ 75,000 ರಿಂದ 1 ಲಕ್ಷ ರೂ.ವರೆಗೆ ಸಾಲ ವಿತರಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕನ್ನು ಸಾಲ ಪಡೆಯಲು ಮಾತ್ರ ಸೀಮಿತಗೊಳಿಸದೆ ಪ್ರತಿ ರೂಪಾಯಿ ಹಣವನ್ನು ಇಲ್ಲೇ ಠೇವಣಿ ಇಡಬೇಕು. ಬ್ಯಾಂಕ್‌ನಿಂದ ಬಡ್ಡಿರಹಿತ ಸಾಲ ನೀಡುವುದಲ್ಲದೇ ನಿಮ್ಮ ಹಣಕ್ಕೆ ಬಡ್ಡಿಯೂ ನೀಡಲಾಗುವುದು. ವಾಣಿಜ್ಯ ಬ್ಯಾಂಕುಗಳಲ್ಲಿ ಹಣವಿಡದಿರಿ ಎಂದರು.
ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಡಿಸಿಸಿ ಬ್ಯಾಂಕ್ ಅರಹಳ್ಳಿ ಸೊಸೈಟಿಗೆ 10.94 ಕೋಟಿ ರೂ. ಸಾಲ ನೀಡಿತ್ತು. ಮತ್ತೆ 3.18 ಕೋಟಿ ರೂ. ಸಾಲ ನೀಡಲಾಗುತ್ತಿದೆ ಎಂದರು.
ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕಿನ ಠೇವಣಿ 270 ಕೋಟಿ ರೂ. ಇದ್ದು, ಮಾರ್ಚ್‌ನೊಳಗೆ 500 ಕೋಟಿ ರೂ. ಕ್ರೋಡೀಕರಿಸಿದರೆ 1000 ಕೋಟಿಯಿಂದ 1500 ಕೋಟಿ ರೂ.ವರೆಗೆ ಸಾಲ ವಿತರಿಸುವ ಶಕ್ತಿ ಬರಲಿದೆ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ ಮಹಿಳಾ ಸಂಘಗಳಿಗೆ ಸಾಲದ ಚೆಕ್ ವಿತರಿಸಿದರು. ಅರಹಳ್ಳಿ ಸೊಸೈಟಿ ಅಧ್ಯಕ್ಷ ಲಿಂಗೇಗೌಡ, ನಿರ್ದೇಶಕರಾದ ಬಾಬುಮೌನಿ, ವೆಂಕಟೇಶಪ್ಪ, ವೆಂಕಟಚಲಪತಿ, ಮುನಿಸ್ವಾಮಿರೆಡ್ಡಿ, ಮುನಿಸ್ವಾಮಿ. ಕೃಷ್ಣಪ್ಪ, ನಾರಾಯಣಸ್ವಾಮಿ, ಲಕ್ಷಮ್ಮ, ಕಿಟ್ಟಣ್ಣ, ರವಿ, ಕಾರ್ಯದರ್ಶಿ ಹರೀಶ್ ಹಾಜರಿದ್ದರು.