ಶೀಘ್ರ ಜಿಲ್ಲೆಯಲ್ಲಿ ಸೇನಾ ನೇಮಕಾತಿ ಪೂರ್ವ ತರಬೇತಿ

Vijaya Divas
Published on

ಕಾರವಾರ: ಸಶಸ್ತ್ರ ಸೇನೆಗಳಿಗೆ ಸೇರಲು ಜಿಲ್ಲೆಯ ಯುವ ಜನತೆಯನ್ನು ಸಜ್ಜು ಮಾಡಲು ಉಚಿತ ತರಬೇತಿಯನ್ನು ಶೀಘ್ರದಲ್ಲಿ ಜಿಲ್ಲಾಡಳಿತದಿಂದ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದರು.
ವಿಜಯ ದಿವಸ್ ಅಂಗವಾಗಿ ಇಲ್ಲಿನ ಚಪಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಎದುರು ಜಿಲ್ಲಾಡಳಿತ, ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪರಮವೀರಚಕ್ರ ಪುರಸ್ಕೃತ ಯೋಧ ದಿ.ರಾಮಾ ರಾಘೋಬಾ ರಾಣೆ ಅವರ ಪುತ್ಥಳಿಗೆ ನಮನ ಸಲ್ಲಿಸಿ, ನಿವೃತ್ತ ವೀರ ಯೋಧರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈಗಾಗಲೇ ಆಯ್ದ ಹಿಂದುಳಿದ ವರ್ಗಗಳ ಯುವಕರಿಗಾಗಿ ತರಬೇತಿ ಹಿಂದುಳಿದ ವರ್ಗಗಳ ಇಲಾಖೆಯಿಂದ ನಡೆಯುತ್ತಿದೆ. ಇನ್ನಷ್ಟು ಯುವಕರಿಗೆ ಸರ್ಕಾರದ ಯೋಜನೆಯಲ್ಲಿಯೇ ತರಬೇತಿ ನೀಡಲು ಅವಕಾಶವಿದ್ದು, ಇದುವರೆಗೆ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳನ್ನು ಮಾತ್ರ ಒದಗಿಸಲಾಗುತ್ತಿತ್ತು. ನಾವು ಇನ್ನು ಆಸಕ್ತ ಯುವಕ, ಯುವತಿಯರಿಗೆ ಕಾರವಾರದಲ್ಲಿ ಕನಿಷ್ಠ 2 ತಿಂಗಳು ಉಚಿತ ತರಬೇತಿ ಆಯೋಜಿಸಲಾಗುವುದು. ಬೇರೆ ತಾಲೂಕುಗಳ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗುವುದು. ವಾಯು ಸೇನೆ, ಭೂ ಸೇನೆ ಹಾಗೂ ನೌಕಾ ಸೇನೆಯ ಪ್ರವೇಶಾತಿಗೆ ಬೇಕಾದ ದೈಹಿಕ, ಲಿಖಿತ ಪರೀಕ್ಷೆಗಳ ಬಗ್ಗೆ ಇಲ್ಲಿ ತರಬೇತಿ ನೀಡಲಾಗುವುದು. ಜಿಲ್ಲೆಯ ಹೆಚ್ಚಿನ ಯುವಕ, ಯುವತಿಯರು ಅದರ ಪ್ರಯೋಜನ ಪಡೆಯಬೇಕು ಎಂದರು.
ಶಾಸಕ ಸತೀಶ ಸೈಲ್ ಮಾತನಾಡಿ, ಸೇವೆಯಲ್ಲಿರುವಾಗಲೇ ಪರಮವೀರ ಚಕ್ರ ಪಡೆದ ವೀರ ಯೋಧ ರಾಮಾ ರಾಘೋಬಾ ರಾಣೆ ಅವರು ಕಾರವಾರದಲ್ಲಿರುವುದು ಹೆಮ್ಮೆಯ ಸಂಗತಿ. ಕಾರವಾರ ವೀರ ಸೈನಿಕರ ನಾಡು, ಇಲ್ಲಿನ ಅದೆಷ್ಟೋ ಜನರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗಲೂ ನೌಕಾ, ವಾಯು ಹಾಗೂ ಭೂ ಸೇನೆಗಳಿಗೆ ಸೇರುವ ಎಲ್ಲ ಅರ್ಹತೆಯನ್ನು ಇಲ್ಲಿನ ಯುವಕರು ಹೊಂದಿದ್ದಾರೆ. ಅಗತ್ಯ ತರಬೇತಿಯ ಅಗತ್ಯವಿದೆ ಎಂದರು.
ಕದಂಬ ನೌಕಾನೆಲೆಯ ಕ್ಯುಆರ್‌ಟಿ ತರಬೇತಿ ತಂಡದ ಕ್ಯಾಪ್ಟನ್ ಕೆ.ಯು. ಸಿಂಗ್ ಮಾತನಾಡಿ, ಸೇನೆಗಳಲ್ಲಿ ಸೇರಿ ದೇಶಸೇವೆ ಮಾಡಲು ಅದರಲ್ಲೂ ನೌಕಾದಳದಲ್ಲಿ ವಿಫುಲ ಅವಕಾಶಗಳಿವೆ. ಅದಕ್ಕೆ ಬೇಕಾದ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಸೈನಿಕ ಮಂಡಳಿಯ ಉಪಾಧ್ಯಕ್ಷ ನಿವೃತ್ತ ಸ್ಕ್ವಾಡ್ ಲೀಡರ್ ಎಸ್.ಎಫ್ ಗಾಂವಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಪೌರಾಯುಕ್ತ ಚಂದ್ರಮೌಳಿ ವೇದಿಕೆಯಲ್ಲಿದ್ದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪ ನಿರ್ದೇಶಕ ಡಾ. ಕ್ಯಾಪ್ಟನ್ ರಮೇಶ ರಾವ್ ಸ್ವಾಗತಿಸಿದರು. ಸುರೇಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ನಾಯ್ಕ ವಂದಿಸಿದರು.
ಯುದ್ದದಲ್ಲಿ ಬಲಿದಾನಗೈದ ಯೋಧರ ಅವಲಂಬಭಿತರನ್ನು ಸನ್ಮಾನಿಸಲಾಯಿತು.ಸಶಸ್ತ್ರ ಪಡೆಗಳ ಧ್ವಜ ಬಿಡುಗಡೆ ಮಾಡಲಾಯಿತು. ಐಎನ್‌ಎಸ್ ಕದಂಬ ನೌಕಾನೆಲೆಯ ಬ್ಯಾಂಡ್ ಪ್ರದರ್ಶನ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net