ಬಿಸಿಲ ಧಗೆಯಲ್ಲೂ ತರುಣರ ಉತ್ಸಾಹ, ಉಡುಪಿಯಲ್ಲಿ 10 ದಿನಗಳ ಸೇನಾ ನೇಮಕಾತಿ ರ‍್ಯಾಲಿ ಆರಂಭ

rally new
Published on

ಉಡುಪಿ: ರಾಜ್ಯದ ಯುವಕರಲ್ಲಿ ಸೇನೆ ಸೇರುವ ಹಂಬಲ ಹೆಚ್ಚುತ್ತಿರುವುದಕ್ಕೆ ಉಡುಪಿಯಲ್ಲಿ ಬುಧವಾರ ಆರಂಭಗೊಂಡಿರುವ 10 ದಿನಗಳ ನೇಮಕಾತಿ ರ‌್ಯಾಲಿ ಸಾಕ್ಷಿಯಾಗುತ್ತಿದೆ. ಸುಮಾರು 38,500 ತರುಣರು ನೋಂದಾಯಿಸಿಕೊಂಡಿದ್ದು, ಮೊದಲ ದಿನ 3 ಸಾವಿರದಷ್ಟು ಮಂದಿ ಭಾಗವಹಿಸಿದ್ದಾರೆ.

ಕಳೆದ ವರ್ಷ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದ.ಕ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ತರುಣರು ಅರ್ಜಿ ಸಲ್ಲಿಸಿದ್ದು, ನೇಮಕಾತಿ ರ‌್ಯಾಲಿಯನ್ನು ಕೋವಿಡ್ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿತ್ತು. ಬುಧವಾರ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ರ‌್ಯಾಲಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಧ್ವಜಾರೋಹಣ ಮೂಲಕ ಚಾಲನೆ ನೀಡಿದರು.

ದೇಶ ರಕ್ಷಣೆಯಲ್ಲಿ ಪಾಲ್ಗೊಳ್ಳುವ ಅವಕಾಶಕ್ಕಾಗಿ ಬಿಸಿಲ ಧಗೆಯಲ್ಲಿಯೂ ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದು, ಮೊದಲ ದಿನ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ 1600 ಮೀಟರ್ ಓಟ, ಜಿಗ್‌ಜಾಗ್, ಪುಲ್ಅಪ್ಸ್, ಉದ್ದ ಜಿಗಿತ ದೈಹಿಕ ಪರೀಕ್ಷೆಗಳು ನಡೆದವು. ದಾಖಲಾತಿ ಪರಿಶೀಲನೆ ಬಳಿಕ ಅಭ್ಯರ್ಥಿಗಳಿಗೆ ಮರುದಿನ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ಇದರಲ್ಲಿ ಉತ್ತೀರ್ಣರಾದವರು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.

ಪ್ರತಿದಿನ 3000-5000 ಅಭ್ಯರ್ಥಿಗಳಿಗೆ ವಿವಿಧ ಪರೀಕ್ಷೆಗಳು ನಡೆಯುತ್ತಿವೆ. ಕೋವಿಡ್ ಮಾರ್ಗಸೂಚಿ ಪ್ರಕಾರ ಮಾಸ್ಕ್ ಕಡ್ಡಾಯಗೊಳಿಸಲಾಗಿತ್ತು. ಕೋವಿಡ್ ನೆಗೆಟಿವ್ ಇದ್ದವರು ಮಾತ್ರ ರ‌್ಯಾಲಿಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. ದಾಖಲಾತಿ ಪರಿಶೀಲನೆಗೆ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲಾಗಿದೆ. ಸೇನಾ ನೇಮಕಾತಿ ಮಂಗಳೂರು ವಿಭಾಗದ ಮುಖ್ಯಸ್ಥ ಕರ್ನಲ್ ದುಭಾಶ್ ನೇತೃತ್ವದಲ್ಲಿ ರ‌್ಯಾಲಿ ನಡೆಯುತ್ತಿದೆ.

ಕೃಷ್ಣಮಠದಿಂದ ಊಟದ ವ್ಯವಸ್ಥೆ

ದೂರದ ಊರುಗಳಿಂದ ಮಧ್ಯರಾತ್ರಿಯೇ ಉಡುಪಿಗೆ ಸಾವಿರಾರು ಯುವಕರು ಆಗಮಿಸಿದ್ದಾರೆ. ಅಭ್ಯರ್ಥಿಗಳಿಗೆ ಕೃಷ್ಣಮಠದ ವತಿಯಿಂದ ಅನ್ನ, ಸಾರು, ಪಾಯಸ, ಮಜ್ಜಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ದೇಶ ಸೇವೆಗೆ ಹೊರಡಲು ಇಚ್ಛಿಸಿ ಉತ್ಸಾಹದಿಂದ ಭಾಗವಹಿಸುವ ತರುಣರಿಗೆ ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಈ ವ್ಯವಸ್ಥೆ ಮಾಡಿದ್ದಾರೆ ಎಂದು ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ತಿಳಿಸಿದ್ದಾರೆ.

ಸೇನಾ ನೇಮಕಾತಿಗೆ ಆಗಮಿಸುವ ಅಭ್ಯರ್ಥಿಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮಾಡಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಲ್ಲ ಅಭ್ಯರ್ಥಿಗಳಿಗೆ ಉಚಿತವಾಗಿ ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೃಷ್ಣ ಮಠ ಹಾಗೂ ಮೆಸ್ಕಾಂ ಗುತ್ತಿಗೆ ನೌಕರರ ಸಂಘದ ನೆರವಿನಿಂದ ಕಲ್ಪಿಸಲಾಗಿದೆ.

- ಜಿ.ಜಗದೀಶ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net