

ಹೊಳೆಆಲೂರ: ಧಾರವಾಡ ಜಿಲ್ಲೆ ಹಾಗೂ ಖಾನಾಪೂರ ಪ್ರದೇಶದಲ್ಲಿ ಸುರಿದಿರುವ ಮಳೆಯಿಂದಾಗಿ ಹೊಳೆಆಲೂರ ವ್ಯಾಪ್ತಿಯಲ್ಲಿ ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಹೊಳೆಆಲೂರ ಹೋಬಳಿಯ ಹಲವು ಗ್ರಾಮಗಳ ರೈತರ ಹೊಲಗಳಿಗೆ ಪ್ರವಾಹದ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೆಲ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. 2019ರಲ್ಲಿ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಆಗದಿದ್ದರೂ, ಪ್ರವಾಹ ಉಂಟಾಗಿ ಜನ- ಜಾನುವಾರು ಕೊಚ್ಚಿಕೊಂಡು ಹೋಗಿ, ಸಾವಿರಾರು ಮನೆಗಳು ನೆಲಸಮವಾಗಿದ್ದವು. ನೆರೆ ಭೀತಿಯಿಂದಾಗಿ ಗಾಡಗೋಳಿ, ಕುರುವಿನಕೊಪ್ಪ ಗ್ರಾಮಸ್ಥರು ಸ್ವಯಂ ಪ್ರೇರೀತರಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.
ನೆರೆ ಪೀಡಿತ ಹೊಳೆಆಲೂರ 1ನೇ ವಾರ್ಡ್ ಹಾಗೂ ಕುರುವಿನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ನೇತೃತ್ವದ ಅಧಿಕಾರಿಗಳ ತಂಡ, ಮುಂಜಾಗ್ರತೆ ಕ್ರಮವಾಗಿ ನವಗ್ರಾಮಗಳಿಗೆ ಸ್ಥಳಾಂತರವಾಗಲು ಜನರಿಗೆ ಸೂಚನೆ ನೀಡಿದರು.
ಅಧಿಕಾರಿಗಳ ಎದುರು ಅಳಲು ತೋಡಿಕೊಂಡ ಹೊಳೆಆಲೂರ 2 ಹಾಗೂ 3ನೇ ವಾರ್ಡ್ನ ನಿವಾಸಿಗಳು, ‘2019ರಲ್ಲಿ ನೆರೆ ಬಂದಾಗ ಬಿದ್ದ ಮನೆಗಳಿಗೆ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಸಂಪೂರ್ಣ ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದೇವೆ. ಸರ್ಕಾರ ಮಂಜೂರು ಮಾಡಿದ ಐದು ಲಕ್ಷ ರೂಪಾಯಿ ಪೈಕಿ ಕೇವಲ 1 ಲಕ್ಷ ರೂ. ಪರಿಹಾರ ಬಂದಿದೆ. ಇನ್ನುಳಿದ ಬಿಲ್ಗಾಗಿ ನಿತ್ಯ ಅಲೆದಾಡುವಂತಾಗಿದೆ’ ಎಂದರು.
ತಾಲೂಕು ಮಟ್ಟದ ಅಧಿಕಾರಿಗಳ ಯಡವಟ್ಟಿನಿಂದ ಆದ ಪ್ರಮಾದಕ್ಕೆ ಇದುವರೆಗೂ ಮನೆಗಳಿಗೆ ಬಿಲ್ ನೀಡದೆ ತಾಂತ್ರಿಕ ದೋಷದ ನೆಪ ಹೇಳುತ್ತಿದ್ದೀರಿ. ಹೀಗಾದರೆ, ನಮ್ಮ ಗತಿ ಏನು ಎಂದು ಹೊಳೆಆಲೂರಿನ ನಿರ್ಗತಿಕ ಶಂಕರಪ್ಪ ಗಂಗೂರ ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ಪ್ರತಿಕ್ರಿಯಿಸಿ,‘ ರಾಜೀವ ಗಾಂಧಿ ವಸತಿ ನಿಗಮದಿಂದ ತುಸು ವಿಳಂಬವಾಗಿದ್ದು, ಪರಿಶೀಲಿಸಿ ಶೀಘ್ರವೇ ಹಣ ಮಂಜೂರು ಮಾಡಿಸಲಾಗುತ್ತದೆ’ ಎಂದರು.
2007, 2009 ಹಾಗೂ 2019ರಲ್ಲಿ ನಮ್ಮ ಗ್ರಾಮ ಪ್ರವಾಹಕ್ಕೆ ತುತ್ತಾಗಿ ಶೇ. 75ರಷ್ಟು ಮನೆಗಳು ನೆಲಸಮವಾಗಿವೆ. ನವಗ್ರಾಮದಲ್ಲಿ ಮನೆಗಳು ನಿರ್ವಣವಾಗಿದ್ದರೂ ಸ್ಥಳೀಯ ರಾಜಕಾರಣಿಗಳ ಕುತಂತ್ರದಿಂದ ಅರ್ಹ ನಿರ್ಗತಿಕರಿಗೆ 10 ವರ್ಷಗಳಿಂದ ಮನೆ ಹಂಚಿಕೆಯಾಗಿಲ್ಲ. ಗ್ರಾಮಸ್ಥರು ಪ್ರತಿಭಟನೆ ಮಾಡಿದರೂ, ಅಧಿಕಾರಿಗಳು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದರಿಂದ ಬಡವರು ಕಣ್ಣೀರು ಹಾಕುಂತಾಗಿದೆ.
ಕಳೆದು ನಾಲ್ಕು ತಿಂಗಳ ಹಿಂದೆ ಮಾಜಿ ಸಚಿವ ಬಿ.ಆರ್. ಯಾವಗಲ್ಲ ನೇತೃತ್ವದಲ್ಲಿ ರೋಣ ತಹಸೀಲ್ದಾರ್ ಕಾಯಾಲಯದ ಮುಂದೆ ಗಾಡಗೋಳಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಆಗ ಸಚಿವ ಸಿ.ಸಿ. ಪಾಟೀಲ ಅವರು, ಅಧಿವೇಶನ ಮುಗಿದ ತಕ್ಷಣ ಏಪ್ರಿಲ್ ಮೊದಲ ವಾರದಲ್ಲಿ ನಾನೇ ಬಂದು ಮನೆ ಹಂಚಿಕೆ ಮಾಡುತ್ತೇನೆ ಎಂದು ಹೇಳಿದ್ದರು. ಇದುವರೆಗೂ ಕ್ರಮ ಕೈಗೊಂಡಿಲ್ಲ. ಸದ್ಯ ಗ್ರಾಮಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇದರಿಂದ ಗ್ರಾಮಸ್ಥರು ಎಲ್ಲಿ ಉಳಿದುಕೊಳ್ಳಬೇಕು ಎಂದು ಎಂದು ಸ್ಥಳೀಯರಾದರ ಈರಣ್ಣ ತಳವಾರ, ಪ್ರಭಾಕರ ಪಂಚಾಳ, ಎಸ್.ವೈ. ಗಾಣಿಗೇರ, ರಮೇಶ ದೇಸಾಯಿ ಇತರರು ಆಕ್ರೋಶ ವ್ಯಕ್ತಪಡಿಸಿದರು.